ಶಹಾಪುರ: ಇಲ್ಲಿನ ನಗರಸಭೆಗೆ ಮೇ 29ರಂದು ಮತದಾನ ನಡೆಯಲಿದ್ದು, ನಗರಸಭೆ ಗದ್ದುಗೆ ಹಿಡಿಯಲು ಮೂರು ಪಕ್ಷಗಳಲ್ಲಿ ಗುದ್ದಾಟ ಶುರವಾಗಿದೆ.
ನಗರಸಭೆ ಒಟ್ಟು 48 ಸಾವಿರಕ್ಕೂ ಅಧಿಕ ಮತದಾರನ್ನು ಹೊಂದಿದೆ. ಬಿಜೆಪಿ 31 ವಾರ್ಡ್‌ಗಳಿಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 29 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದು, ಇನ್ನೆರಡು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ 26 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಪ್ರಚಾರವು ಜೋರಾಗಿ ನಡೆಸಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ನಗರಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ. ಅಲ್ಲದೆ ಕಳೆದ 25 ವರ್ಷದಿಂದ ನಗರಸಭೆ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧವು ಎದ್ದಿದೆ ಎನ್ನಲಾಗಿದೆ.
ಆದರೆ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಪ್ರಕಾರ ಸ್ಥಳೀಯ ಚುನಾವಣೆ ಮೇಲೆ ಲೋಕಸಭೆ ಪ್ರಭಾವ ಬೀಳುವುದಿಲ್ಲ. ಸ್ಥಳೀಯ ನಾಯಕರ ಮತ್ತು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಮೇಲೆ ಗೆಲುವಿನ ನಗೆ ಬೀರಲಿದೆ ಎಂದರು. ಮತ್ತೂಮ್ಮೆ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
•ಮಲ್ಲಿಕಾರ್ಜುನ ಮುದ್ನೂರ