Advertisement

ಸ್ಥಳೀಯ ಕದನದಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ

03:03 PM May 16, 2019 | Team Udayavani |

ಮುಂಡರಗಿ: ಸ್ಥಳೀಯ ಸಂಸ್ಥೆಯ ಪುರಸಭೆ 23 ವಾರ್ಡ್‌ಗಳ ಚುನಾವಣೆ ಮೇ 29ರಂದು ನಡೆಯಲಿದೆ. ಮೇ 16ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷದಲ್ಲಿರುವ ಟಿಕೆಟ್ ಆಕಾಂಕ್ಷಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರವಾದ ಹಣಾಹಣಿ ಇದ್ದು, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಪೈಪೋಟಿ ನೀಡಲಿದ್ದಾರೆ. ಪುರಸಭೆ 23 ವಾರ್ಡ್‌ಗಳಲ್ಲಿ ಮೇ 29ರಂದು ನಡೆಯಲಿರುವ ಚುನಾವಣೆಯಲ್ಲಿ 9,836 ಪುರುಷರು, 10,067 ಮಹಿಳಾ ಮತದಾರರು ಸೇರಿದಂತೆ ಒಟ್ಟು 19,903 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

Advertisement

ಹಲವು ವರ್ಷಗಳಿಂದ ಪುರಸಭೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, ಬಿಜೆಪಿ ಪಕ್ಷ ಕಾಂಗ್ರೆಸ್‌ ಹಿಡಿತದಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಲಿದೆ. ಕಾಂಗ್ರೆಸ್‌ಗೆ ಈ ಮೊದಲು ಜೆಡಿಎಸ್‌ ಪ್ರಬಲ ಪೈಪೋಟಿ ನೀಡುತ್ತಿತ್ತು. ಆದರೆ ಕಳೆದೆರಡು ಅವಧಿಗಳಿಂದ ಕಾಂಗ್ರೆಸ್‌ಗೆ ಬಿಜೆಪಿ ತೀವ್ರ ಪೈಪೋಟಿ ನೀಡಿ ಸಂಖ್ಯೆ ಹೆಚ್ಚಿಸಿಕೊಂಡು, ಅಧಿಕಾರ ಚುಕ್ಕಾಣಿ ಹಿಡಿದುಕೊಂಡಿತ್ತು.

ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ 23 ಸಂಖ್ಯಾಬಲದ ಜನಪ್ರತಿನಿಧಿಗಳಲ್ಲಿ ಕಾಂಗ್ರೆಸ್‌ 12 ಜನಪ್ರತಿನಿಧಿಗಳು, ಬಿಜೆಪಿ 8 ಜನಪ್ರತಿನಿಧಿಗಳು ಇದ್ದರು. ಒಬ್ಬರು ಜೆಡಿಎಸ್‌ನವರು, ಇಬ್ಬರು ಪಕ್ಷೇತರರು ಇದ್ದರು. ಮೊದಲ ಅವಧಿಯಲ್ಲಿ ಕಾಂಗ್ರೆಸ್‌ನ ಭಾರತಿ ಹಕ್ಕಿ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಸೋಮನಗೌಡ ಗೌಡ್ರ ಅಯ್ಕೆಯಾಗಿದ್ದರು.ನಂತರ ಎರಡನೇ ಅವಧಿಯಲ್ಲಿ ನಾಲ್ವರು ಕಾಂಗ್ರೆಸ್‌ ಮತ್ತು ಓರ್ವ ಜೆಡಿಎಸ್‌ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದರಿಂದ ಬಿಜೆಪಿಯ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷೆಯಾಗಿ, ಬಸವರಾಜ ನರೇಗಲ್ಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪುರಸಭೆ ಅವಧಿ ಮುಗಿಯುವ ಹದಿನೈದು ದಿನಗಳು ಬಾಕಿ ಇರುವಾಗ ಹೇಮಾವತಿ ಅಬ್ಬಿಗೇರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ, ಉಪಾಧ್ಯಕ್ಷ ಬಸವರಾಜ ನರೇಗಲ್ಲ್ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅವಧಿ ಪೂರ್ಣಗೊಳಿಸಿದ್ದಾರೆ.

ತೀವ್ರ ಪೈಪೋಟಿ: ಈ ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳು ಅಭ್ಯರ್ಥಿಗಳನ್ನು ಪ್ರತಿ ವಾರ್ಡಿನಲ್ಲಿ ಕಣಕ್ಕಿಳಿಸುವುದರಿಂದ ತೀವ್ರ ಪೈಪೋಟಿ ಎದುರಾಗಲಿದೆ. ಕಾಂಗ್ರೆಸ್‌ ಪಾಳೆಯದಲ್ಲಿ ಬಿಜೆಪಿ ತೀವ್ರ ಸ್ಪರ್ಧೆಯೊಡ್ಡಿ ಪುರಸಭೆಯನ್ನು ತನ್ನ ಕೈ ವಶ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಇದ್ದರೂ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳ ಅಭ್ಯರ್ಥಿಗಳು ಉಭಯ ಪಕ್ಷಗಳಿಗೆ ಪೈಪೋಟಿ ನೀಡಲಿದ್ದಾರೆ.

ನರಗುಂದ ಪುರಸಭೆಗೆ27 ನಾಮಪತ್ರ ಸಲ್ಲಿಕೆ

ನರಗುಂದ: ಪಟ್ಟಣದ ಪುರಸಭೆ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ವಿವಿಧ ವಾರ್ಡ್‌ಗಳಿಗೆ ಸ್ಪರ್ಧೆ ಬಯಸಿ ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರರಾಗಿ 27 ಜನ ಉಮೇದುವಾರಿಕೆ ಸಲ್ಲಿಸಿದ್ದಾರೆ. 1ನೇ ವಾರ್ಡ್‌ ಸುನೀಲ ಕುಷ್ಟಗಿ, 2ನೇ ವಾರ್ಡ್‌ ಮಂಜುಳಾ ಪಟ್ಟಣಶೆಟ್ಟಿ, ಮೆಹಬೂಬಿ ಪಠಾಣ, 3ನೇ ವಾರ್ಡ್‌ ರಿಯಾಜ ಕೊಣ್ಣೂರ, 4ನೇ ವಾರ್ಡ್‌ ಭರತರಾಜ ಕಟ್ಟಿಮನಿ, ಸುಭಾಷ ತಳಕೇರಿ, 5ನೇ ವಾರ್ಡ್‌ ಚಂದ್ರಗೌಡ ಪಾಟೀಲ, 6ನೇ ವಾರ್ಡ್‌ ತೇಜಾಕ್ಷಿ, 7ನೇ ವಾರ್ಡ್‌ ಗೌರವ್ವ ಕೋನವರ, 9ನೇ ವಾರ್ಡ್‌ ರೇಣುಕಾ ಕೋಟೋಳಿ, 11ನೇ ವಾರ್ಡ್‌ ಸುರೇಶ ಸವದತ್ತಿ, ಫಕ್ಕೀರಪ್ಪ ಅಣ್ಣಿಗೇರಿ ನಾಮಪತ್ರ ಸಲ್ಲಿಸಿದ್ದಾರೆ. 12ನೇ ವಾರ್ಡ್‌ ಭಾವನಾ ಪಾಟೀಲ, 13ನೇ ವಾರ್ಡ್‌ ರಾಚನಗೌಡ ಪಾಟೀಲ, ಕೊಟ್ರೇಶ ಬೆಳವಟಗಿ, 14ನೇ ವಾರ್ಡ್‌ ಮಹೇಶ ಬೋಳಶೆಟ್ಟಿ, ಸಿದ್ದನಗೌಡ ಪಾಟೀಲ, 15ನೇ ವಾರ್ಡ್‌ ನೀಲವ್ವ ವಡ್ಡಿಗೇರಿ, ಬಸಪ್ಪ ಗುಡದನ್ನವರ, ಗಂಗವ್ವ ಗುಡದರಿ, 16ನೇ ವಾರ್ಡ್‌ ದೊಡ್ಡಲಾಲಸಾಬ ಕಿಲ್ಲೇದಾರ, ಸಣ್ಣಲಾಲಸಾಬ ಕಿಲ್ಲೇದಾರ, 18ನೇ ವಾರ್ಡ್‌ ಸುಮಿತ್ರಾ ತೊಂಡಿಹಾಳ, 19ನೇ ವಾರ್ಡ್‌ ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪಗೌಡ ನಾಯ್ಕರ, 20ನೇ ವಾರ್ಡ್‌ ಕಾಶವ್ವ ಮಳಗಿ ಹಾಗೂ 22ನೇ ವಾರ್ಡ್‌ ರೇಣವ್ವ ಕಿಲ್ಲಾರಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ-15, ಕಾಂಗ್ರೆಸ್‌-8 ಹಾಗೂ ಪಕ್ಷೇತರರಾಗಿ 4 ಜನ ಸೇರಿ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
Advertisement

ಪ್ರತಿ ವಾರ್ಡಿನಲ್ಲೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದರೂ ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿಗಳು ಕಣದಲ್ಲಿ ಉಳಿದು ಪೈಪೋಟಿ ನೀಡಲಿದ್ದಾರೆ. ಈ ಬಾರಿ ಪುರಸಭೆ ಬಿಜೆಪಿ ವಶವಾಗಲಿದೆ.

•ದೇವಪ್ಪ ಕಂಬಳಿ, ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ

ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲ ಪಕ್ಷಗಳಿಗಿಂತಲೂ ಮುಂದಿದೆ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಒಲಿದು ಬರಲಿದೆ.

•ರಾಮು ಕಲಾಲ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಪುರಸಭೆ 23 ವಾರ್ಡ್‌ಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ. ಇದರಿಂದ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ಸ್ಪರ್ಧೆಯೊಡ್ಡಲಿದ್ದಾರೆ.

•ಅಶೋಕ ತ್ಯಾಮಣ್ಣವರ, ಜೆಡಿಎಸ್‌ ಅಧ್ಯಕ್ಷ

18 ನಾಮಪತ್ರ ಸಲ್ಲಿಕೆ
ಮುಂಡರಗಿ: ಪುರಸಭೆಗೆ ಮೇ 29ರಂದು ನಡೆಯುವ ಚುನಾವಣೆಗೆ ಬುಧವಾರ 18 ನಾಮಪತ್ರಗಳು ಸಲ್ಲಿಕೆಯಾಗಿವೆ.
ವಾರ್ಡ್‌ ನಂ-1 ಸುರೇಶ ಭಜಂತ್ರಿ (ಜೆಡಿಎಸ್‌), ವಾರ್ಡ್‌ ನಂ-3 ಲತಾ ಉಳ್ಳಾಗಡ್ಡಿ(ಬಿಜೆಪಿ), ವಾರ್ಡ್‌ ನಂ-4 ಗಂಗಿಮಾಳವ್ವ ಮೋರನಾಳ (ಬಿಜೆಪಿ), ವಾರ್ಡ್‌ ನಂ-5 ಶಿವಪ್ಪ ಚಿಕ್ಕಣ್ಣವರ (ಬಿಜೆಪಿ), ಬಸಪ್ಪ ಹ.ರಾಟಿ (ಪಕ್ಷೇತರ), ವಾರ್ಡ್‌ ನಂ-8, ರೇಖಾ ಕಟ್ಟಿಮನಿ (ಬಿಜೆಪಿ), ವಾರ್ಡ್‌ ನಂ-11 ನಿರ್ಮಲಾ ಕೋರ್ಲಹಳ್ಳಿ (ಬಿಜೆಪಿ), ವಾರ್ಡ್‌ ನಂ-12, ಸಣ್ಣಮೈಲಪ್ಪ ಹರಿಜನ (ಕಾಂಗ್ರೆಸ್‌), ಪ್ರಲಾØದ ಹೊಸಮನಿ (ಬಿಜೆಪಿ), ವಾರ್ಡ್‌ ನಂ-13, ದೇವಪ್ಪ ರಾಟಿ (ಕಾಂಗ್ರೆಸ್‌), ವಾರ್ಡ್‌ ನಂ-14, ಬಸಪ್ಪ ದೇಸಾಯಿ(ಪಕ್ಷೇತರ), ನಾಗರಾಜ ಹೊಂಬಳಗಟ್ಟಿ (ಕಾಂಗ್ರೆಸ್‌), ವೀರಣ್ಣ ಘಟ್ಟಿ (ಪಕ್ಷೇತರ), ವಾರ್ಡ್‌ ನಂ-16 ದ್ರುವ ಹೂಗಾರ (ಬಿಜೆಪಿ), ವಾರ್ಡ್‌ ನಂ-18 ಪ್ರಶಾಂತಕುಮಾರ ಗುಡದಪ್ಪನವರ (ಪಕ್ಷೇತರ), ನಾಗೇಂದ್ರ ಹುಬ್ಬಳ್ಳಿ (ಬಿಜೆಪಿ), ವಾರ್ಡ್‌ ನಂ-19 ಅಬೂಬಕರ್‌ ಚೌಥಾಯಿ (ಬಿಎಸ್‌ಪಿ), ವಾರ್ಡ್‌ ನಂ-22, ಕಾಶೀಮಸಾಬ ನಶೇನವರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಎಸ್‌.ಎನ್‌. ಹಳ್ಳಿಗುಡಿ, ಕೆಎಂಕೆ. ಶರ್ಮಾ ತಿಳಿಸಿದ್ದಾರೆ.
45 ನಾಮಪತ್ರ ಸ್ವೀಕೃತ
ಗದಗ:
ಜಿಲ್ಲೆಯ ಮುಂಡರಗಿ, ನರಗುಂದ ಪುರಸಭೆಗಳ ಚುನಾವಣೆ ಕುರಿತಂತೆ ಮೇ 15 ರಂದು ಒಟ್ಟು 45 ನಾಮಪತ್ರಗಳು ಸ್ವೀಕೃತಿಯಾಗಿವೆ.

ಮುಂಡರಗಿ ಪುರಸಭೆಗೆ ಕಾಂಗ್ರೆಸ್‌ 3, ಬಿಜೆಪಿ 7, ಜೆಡಿಎಸ್‌ 1, ಬಿಎಸ್‌ಪಿ 1 ಹಾಗೂ ಪಕ್ಷೇತರರು 6 ಸೇರಿ ಒಟ್ಟು 18 ನಾಮಪತ್ರ ಸಲ್ಲಿಕೆಯಾಗಿವೆ.

ನರಗುಂದ ಪುರಸಭೆಗೆ ಕಾಂಗ್ರೆಸ್‌ 6, ಬಿಜೆಪಿ 17 ಹಾಗೂ ಪಕ್ಷೇತರ 4 ಸೇರಿದಂತೆ ಒಟ್ಟು 27 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.

•ಹು.ಬಾ. ವಡ್ಡಟ್ಡಿ
Advertisement

Udayavani is now on Telegram. Click here to join our channel and stay updated with the latest news.

Next