Advertisement

ಮೈತ್ರಿ ನಾಯಕರ ಗೊಂದಲವೇ ಸೋಲಿಗೆ ಕಾರಣ

11:44 AM May 28, 2019 | Sriram |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣ ವಾದ ಪ್ರಮುಖ ಅಂಶಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ. ಅಲ್ಲದೇ, ಈ ಸೋಲಿನ ಹೊಣೆ ಯನ್ನು ನಾನು ಹೊತ್ತುಕೊಳ್ಳಲು ಸಿದ್ಧನಿದ್ದೇನೆ. ಮುಂದೆ ನೀವು ನೀಡುವ ನಿರ್ದೇಶನದಂತೆ ಮುನ್ನಡೆಯುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದಿನೇಶ್‌ ಗುಂಡೂರಾವ್‌ ನೀಡಿರುವ ವರದಿಯಲ್ಲೇನಿದೆ?:

•ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿರುವುದು ಸೋಲಿಗೆ ಪ್ರಮಖ ಕಾರಣ.

•ಜೆಡಿಎಸ್‌ಗೆ ವಾಸ್ತದ ಶಕ್ತಿಗಿಂತ ಹೆಚ್ಚಿನ ಸ್ಥಾನ ನೀಡಿ, ಅವರು ಬಯಸಿರುವ ಕ್ಷೇತ್ರಗಳನ್ನು ನೀಡಿರುವುದು, ಮೈತ್ರಿ ಅಭ್ಯರ್ಥಿಗಳು ಚುನಾವಣೆ ಕಣಕ್ಕಿಳಿಯುವ ಮೊದಲು ಮೈತ್ರಿ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದು, ಮೈತ್ರಿಯಲ್ಲಿ ಒಮ್ಮತವಿಲ್ಲ ಎಂಬ ಸಂದೇಶ ರವಾನಿಸಿತು.

•ಪ್ರಧಾನಿ ಮೋದಿ ಅಲೆಗಿಂತ ಎರಡೂ ಪಕ್ಷಗಳ ನಾಯಕರ ನಡುವಿನ ವೈರುಧ್ಯದ ಹೇಳಿಕೆಗಳು ರಾಜ್ಯದಲ್ಲಿನ ಪಕ್ಷದ ಸೋಲಿಗೆ ಪ್ರಮುಖ ಕಾರಣ.

Advertisement

•ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಟ್ಟಿತನದ ಮೂಲಕ ಆಡಳಿತ ನಡೆಸಿ, ಎಲ್ಲರ ವಿಶ್ವಾಸ ಗಳಿಸುವಲ್ಲಿ ವಿಫ‌ಲರಾಗಿದ್ದಾರೆ. ಕೊನೆಯ ನಾಲ್ಕು ದಿನ ಮಾತ್ರ ಎರಡೂ ಪಕ್ಷದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ, ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿ, ಒಗ್ಗಟ್ಟು ಮೂಡಿಸುವ ಪ್ರಯತ್ನ ಮಾಡಲಿಲ್ಲ. ಆರೋಪ- ಪ್ರತ್ಯಾರೋಪದಲ್ಲಿಯೇ ಹೆಚ್ಚು ಮಗ್ನರಾಗಿದ್ದು, ಪಕ್ಷದ ಹೀನಾಯ ಸೋಲಿಗೆ ಕಾರಣ.

•ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವೂ ಮೈತ್ರಿ ಪಕ್ಷಗಳ ಕೈ ಹಿಡಿಯಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯವೂ ಕಾಂಗ್ರೆಸ್‌ನ್ನು ನಿರ್ಲಕ್ಷ ಮಾಡಿತು.

•ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಅಧ್ಯಕ್ಷರು ಟ್ವಿಟ್ಟರ್‌ನಲ್ಲಿ ಪರ-ವಿರೋಧದ ಹೇಳಿಕೆಗಳನ್ನು ನೀಡುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಸಾಲಮನ್ನಾ ಯೋಜನೆಯನ್ನು ಮತವಾಗಿ ಪರಿವರ್ತನೆ ಮಾಡುವಲ್ಲಿ ವಿಫ‌ಲವಾಗಿರುವುದು ಸೋಲಿಗೆ ಕಾರಣವಾಯಿತು.

•ಬಂಡಾಯ ಶಾಸಕರಾದ ರಮೇಶ್‌ ಜಾರಕಿಹೊಳಿ ಹಾಗೂ ಅವರೊಂದಿಗೆ ಗುರುತಿಸಿಕೊಂಡ ಶಾಸಕರನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಅವರು ಪ್ರತಿನಿಧಿಸುವ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು.

•ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ, ತುಮಕೂರಿನಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡರು ಗೆಲ್ಲಬಹುದಿತ್ತು. ಬೆಂಗಳೂರು ಉತ್ತರದಲ್ಲಿ ದೇವೇಗೌಡರಿಗೂ ಗೆಲ್ಲುವ ಅವಕಾಶಗಳಿದ್ದವು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸೋಲುತ್ತಾರೆಂಬ ಮಾಹಿತಿ ಬಂದರೂ, ಅವರ ಗೆಲುವು ಅಗತ್ಯ ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗದೇ ಇರುವುದು ಅವರ ಸೋಲಿಗೆ ಕಾರಣ.

•ರಾಯಚೂರು ಹಾಗೂ ಬಳ್ಳಾರಿಯಲ್ಲಿ ಎಸ್ಟಿ ಸಮುದಾಯವನ್ನು ಸೆಳೆಯುವಲ್ಲಿ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ಬಳ್ಳಾರಿ ಉಸ್ತುವಾರಿ ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್‌ ನಿರ್ಲಕ್ಷ್ಯ ಮಾಡಿದರು.

•ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್‌ ಗೆಲುವಿಗೆ ಜಿಲ್ಲೆಯ ಸಚಿವರು ಸಹಕಾರ ನೀಡಿಲ್ಲ. ಚಾಮರಾಜನಗರದಲ್ಲಿ ಧ್ರುವನಾರಾಯಣರನ್ನು ಗೆಲ್ಲಿಸಿಕೊಂಡು ಬರಲು ಸಚಿವ ಪುಟ್ಟರಂಗ ಶೆಟ್ಟಿ, ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಸಹಕಾರ ನೀಡಿಲ್ಲ. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ಮೈತ್ರಿ ಪಕ್ಷಗಳ ಹಾಲಿ ಶಾಸಕರು ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಕ್ಷೇತ್ರದಲ್ಲಿ ಎರಡು ಬಾರಿ ಜಯ ಗಳಿಸಿದ್ದರೂ, ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫ‌ಲರಾಗಿದ್ದಾರೆ.

•ಮಂಡ್ಯದಲ್ಲಿ ಮುಖ್ಯಮಂತ್ರಿ ಮಗನ ಬಗ್ಗೆ ವಿರೋಧ ಇದ್ದರೂ ಮೈತ್ರಿಗೆ ಗಂಟು ಬಿದ್ದು ಗೆಲ್ಲುವ ಅವಕಾಶ ಇದ್ದ ಸುಮಲತಾ ಅವರಿಗೆ ಟಿಕೆಟ್ ನೀಡದೇ ಇದ್ದುದು, ಪಕ್ಷಕ್ಕೆ ಬರುವ ಒಂದು ಸ್ಥಾನವನ್ನು ಕಳೆದುಕೊಳ್ಳುವಂತಾಯಿತು.

•ಕುರುಬ ಸಮುದಾಯವೂ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಕೈ ಹಿಡಿಯಲಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದು,ಇದು ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿರುವ ಸರ್ಕಾರ ಎಂಬ ಭಾವನೆ ಮೂಡಲು ಕಾರಣವಾಯಿತು.

ಇದರಿಂದಾಗಿ ಲಿಂಗಾಯತ ಸಮುದಾಯ ಸಂಪೂರ್ಣವಾಗಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವಂತಾಯಿತು. ಅಲ್ಲದೆ,ಸಚಿವ ಡಿ.ಕೆ.ಶಿವಕುಮಾರ್‌ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಪ್ರಸ್ತಾಪಿಸಿದ್ದು,ವೀರಶೈವ-ಲಿಂಗಾಯತ ಸಮುದಾಯ ಒಟ್ಟಾಗಿ ಬಿಜೆಪಿ ಕಡೆಗೆ ಮುಖ ಮಾಡಲು ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next