ಮೈಸೂರು: ಮೈಸೂರು ನಗರ ರೈಲು ನಿಲ್ದಾಣದ ಪಾರಂಪರಿಕ ಕಟ್ಟಡದ ಪುನರ್ ಅಭಿವೃದ್ಧಿ ವಿಚಾರ ಕೇಂದ್ರ-ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
1940ರಲ್ಲಿ ನಿರ್ಮಾಣವಾಗಿರುವ ಮೈಸೂರು ರೈಲು ನಿಲ್ದಾಣದ ಕಾಯಕಲ್ಪಕ್ಕಾಗಿ ಕೇಂದ್ರ ಸರ್ಕಾರ 16.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಒದಗಿಸುವ ದೃಷ್ಟಿಯಿಂದ ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರೈಲ್ವೆ ಇಲಾಖೆ, ಈ ಕಾಮಗಾರಿಗೆ ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿ ಸ್ಥಗಿತ ಗೊಳಿಸುವಂತೆ ತಾಕೀತು ಮಾಡಿದೆ.
ಪಾರಂಪರಿಕತೆಗೆ ಧಕ್ಕೆ: ಕಾಮಗಾರಿ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮಂಗಳವಾರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿ ಮುಂದುವರಿಸುವಂತೆ ಸೂಚಿಸಿದರು. ಪ್ರತಾಪ್ ಸಿಂಹ ಭೇಟಿ ನೀಡಿ ಹೋದ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಜಿಲ್ಲಾಡಳಿದ ಅಧಿಕಾರಿಗಳು ಮತ್ತು ಪಾರಂಪರಿಕ ತಜ್ಞರ ಸಮಿತಿ ಸದಸ್ಯರ ಜೊತೆಗೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಸಚಿವ ಸಾ.ರಾ.ಮಹೇಶ್, ಈ ಕಾಮಗಾರಿಯಿಂದ ರೈಲು ನಿಲ್ದಾಣದ ಪಾರಂ ಪರಿಕತೆಗೆ ಧಕ್ಕೆ ಬರುತ್ತಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ತಾಕೀತು ಮಾಡಿದರು. ಇದರಿಂದಾಗಿ ರೈಲ್ವೆ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಸೌಂದರ್ಯ ಹೆಚ್ಚಳ: ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ದೇಶದ ರೈಲ್ವೆ ವ್ಯವಸ್ಥೆ ಸರಿಪಡಿಸಲು ನರೇಂದ್ರಮೋದಿ ಅವರ ಸರ್ಕಾರ ದೇಶದ 65 ಹಳೇ ನಿಲ್ದಾಣಗಳಿಗೆ ಕಾಯಕಲ್ಪ ನೀಡುವ ಸಂಬಂಧ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದೆ. ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿಗಾಗಿ 16.5 ಕೋಟಿ ರೂ. ಅನುದಾನ ಕೊಟ್ಟಿದೆ. ನಿಲ್ದಾಣದ ಕಟ್ಟಡದಲ್ಲಿ ಅಲ್ಲಲ್ಲಿ ಗಾರೆ ಕಿತ್ತು ಹೋಗಿದೆ. ಹೆಂಚುಗಳು ಹಾರಿ ಹೋಗಿ ಸೋರುತ್ತಿದೆ. ದುರ್ಬಲಗೊಂಡ ಗಾರೆಯಿಂದ ಕಟ್ಟಡ ಶಿಥಿಲಗೊಳ್ಳುವುದನ್ನು ತಪ್ಪಿಸಿ, ಸಂರಕ್ಷಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ರೈಲು ನಿಲ್ದಾಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ತರಾಟೆಗೆ: ಇತ್ತ ಜಿಲ್ಲಾಡಳಿತ ಮತ್ತು ಪಾರಂಪರಿಕ ಸಮಿತಿ ಜೊತೆಗೆ ಭೇಟಿ ನೀಡಿದ ಸಚಿವ ಸಾ.ರಾ.ಮಹೇಶ್, ರೈಲು ನಿಲ್ದಾಣ ಕೇಂದ್ರ ಸರ್ಕಾರದ ಜಾಗವಾದರೂ ಅಲ್ಲಿನ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದಷ್ಟೇ ಇಲಾಖೆ ಕೆಲಸ. ಒಂದು ಅಡಿ ವಿಸ್ತರಣೆ ಮಾಡಬೇಕೆಂದರೂ ಪಾರಂಪರಿಕ ಸಮಿತಿ ಒಪ್ಪಿಗೆ ಪಡೆಯಲೇಬೇಕು. ಮೈಸೂರು ನಗರದಲ್ಲಿ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಎಲ್ಲರೂ ಇದೇ ರೀತಿ ಮಾಡಿದರೆ ಪಾರಂಪರಿಕ ಕಟ್ಟಡಗಳು ಎಲ್ಲಿ ಉಳಿಯುತ್ತವೆ. ಪಾರಂಪರಿಕತೆಗೆ ಧಕ್ಕೆ ತರುತ್ತಿಲ್ಲ ಎನ್ನುವ ನೀವು ಆಧುನೀಕರಣ ಕಾಮಗಾರಿಗೆ ಆಧುನಿಕ ಸಾಮಗ್ರಿ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಗರ್ಗ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮೈಸೂರು ನಗರದಲ್ಲಿ ನೂರಕ್ಕೂ ಹೆಚ್ಚು ಕಟ್ಟಡಗಳನ್ನು ಸರ್ಕಾರ ಪಾರಂಪರಿಕ ಕಟ್ಟಡಗಳೆಂದು ಗುರುತಿಸಿದೆ. ಈ ಕಟ್ಟಡಗಳ ಸಂರಕ್ಷಣೆ ಮಾಡಬೇಕು. ವಿಸ್ತರಣೆ ಮಾಡುವುದು, ವಿರೂಪಗೊಳಿಸುವುದು ಸರಿಯಲ್ಲ. ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರೂ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಕಾಮಗಾರಿ ನಡೆಸುತ್ತೀದ್ದೀರಿ. ಇದರಿಂದ ಕೇಂದ್ರ-ರಾಜ್ಯ ಸರ್ಕಾರದ ನಡುವೆ ಸಂಘರ್ಷ ಏರ್ಪಡಬಾರದು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆಂದು ಸಚಿವ ಸಾ.ರಾ.ಮಹೇಶ್ ಹೇಳಿದರು. ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮುಡಾ ಆಯುಕ್ತ ಕಾಂತರಾಜ್, ಪುರಾತತ್ವ ಇಲಾಖೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮತ್ತಿತರರಿದ್ದರು.