Advertisement
ಆದರೆ, ಕಾಮಗಾರಿಗೆ ಅವಶ್ಯಕವಾಗಿದ್ದ ಜಮೀನಿನ ಪೈಕಿ ಒಂದು ಎಕರೆ ಜಮೀನು ಖಾಸಗಿ ರೈತನಿಗೆ ಸೇರಿದ್ದರಿಂದ ಅವರಿಂದ ಖರೀದಿ ಪ್ರಕ್ರಿಯೆ ನಡೆಸಲು ವಿಳಂಬವಾಗಿತ್ತು. ಇದೀಗ ರೈತರಿಂದ ಜಮೀನನ್ನು ನೇರ ಖರೀದಿ ಮೂಲಕ ಖರೀದಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಮಹದೇವ ಪ್ರಸಾದ್ ಕನಸು: ಮಲೆ ಮಹದೇಶ್ವರ ಬೆಟ್ಟದಲ್ಲಿ 101 ಅಡಿ ಎತ್ತರದ ಪ್ರತಿಮೆ ನಿರ್ಮಿಸುವುದು ಮಾಜಿ ಸಚಿವ ಮಹದೇವ ಪ್ರಸಾದ್ ಕನಸಿನ ಕೂಸಾಗಿತ್ತು. ಈ ಯೋಜನೆಯನ್ನು ಅತಿ ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಅಂದಿನ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಭಾರತಿ ಅವರಿಗೆ ಸೂಚಿಸಿದ್ದರು.
ಆದರೆ, 2017ರ ಜನವರಿಯಲ್ಲಿ ಮಹದೇವಪ್ರಸಾದ್ ಕಾಲವಾದ ಬಳಿಕ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಅವರ ಪತ್ನಿ ಗೀತಾ ಸಚಿವೆಯಾದಾಗ ಈ ಬಗ್ಗೆ ಗಮನಹರಿಸುವಂತೆಯೂ ಕೋರಲಾಗಿತ್ತು. ಅಲ್ಲದೇ ಪ್ರತಿ ಬಾರಿ ಪ್ರಾಧಿಕಾರದ ಸಭೆಗಳನ್ನು ಆಯೋಜಿಸಿದಾಗಲೂ ಶಾಸಕ ನರೇಂದ್ರ ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡುತ್ತಲೇ ಬರುತ್ತಿದ್ದರು.
ಆದರೆ, ಕಾಮಗಾರಿ ಪ್ರಾರಂಭ ಹಂತದಲ್ಲಿಯೇ ಇದ್ದುದರಿಂದ ಭಕ್ತಾದಿಗಳು ಆಗಾಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದರು. ಇದೀಗ ಕಾಮಗಾರಿ ಪ್ರಾರಂಭವಾಗಿರುವುದು ಮಹದೇಶ್ವರನ ಭಕ್ತಾದಿಗಳು ಮತ್ತು ಮಹದೇವ ಪ್ರಸಾದ್ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ.
20 ಅಡಿ ಪೀಠ, 80 ಅಡಿ ಪ್ರತಿಮೆ: ಪ್ರತಿಮೆಯನ್ನು 101 ಅಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 20 ಅಡಿ ಎತ್ತರಕ್ಕೆ ಪೀಠದ ಮಾದರಿ ಗುಹೆ ನಿರ್ಮಿಸಲಾಗುವುದು. ಈ ಗುಹೆಯಲ್ಲಿ 24 ವಿಭಾಗಗಳು ಇರಲಿದ್ದು, ಇವುಗಳಲ್ಲಿ ಮಹದೇಶ್ವರರಿಗೆ ಸಂಬಂಧಿಸಿದ ಇತಿಹಾಸ ಇರುವ ಗೋಡೆ ಬರಹಗಳನ್ನು ಮತ್ತು ಮಹದೇಶ್ವರರಿಗೆ ಸಂಬಂಧಿಸಿದ ಆಡಿಯೋಗಳನ್ನು ಬಿತ್ತರಿಸುವ ವ್ಯವಸ್ಥೆ ಮಾಡಲಾಗುವುದು.
ಈ 20 ಅಡಿ ಪೀಠದ ಮೇಲೆ 80 ಅಡಿ ಮಹದೇಶ್ವರರ ಪ್ರತಿಮೆಯನ್ನು ಹುಲಿಯ ಮೇಲೆ ಕುಳಿತಿರುವ ಮಾದರಿಯಲ್ಲಿ ಪ್ರತಿಷ್ಠಾಪಿಸುವ ಯೋಜನೆಯಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ತಿಳಿಸಿದರು.