ಬೆಂಗಳೂರು: ಖಾಸಗಿ ಫೈನಾನ್ಸ್ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬಳು ಟಿಕೆಟ್ ವಿಚಾರಕ್ಕೆ ಬಿಎಂಟಿಸಿ ಬಸ್‌ನ ಮಹಿಳಾ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿ, ಕೈ ಉಗುರುಗಳಿಂದ ಮುಖ ಪರಚಿ ಗಾಯಗೊಳಿಸಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಚಿಕ್ಕಬಾಣವಾರ ನಿವಾಸಿ ಮೋನಿಷಾ(29) ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಬಿಎಂಟಿಸಿ ಬಸ್ ನಿರ್ವಾಹಕಿ ಸುಕನ್ಯಾ ಎಂಬವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮೋನಿಷಾ, ಭಾನುವಾರ ಬೆಳಗ್ಗೆ 10.30ರಲ್ಲಿ 8ನೇ ಮೈಲಿಯಿಂದ ದಾಸರಹಳ್ಳಿಗೆ ಹೋಗಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾರೆ. ಆಗ ನಿರ್ವಾಹಕಿ ಸುಕನ್ಯಾ, ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದು, ಆರೋಪಿ ಮೋನಿಷಾ, ಆಧಾರ್ ಕಾರ್ಡ್ ತೋರಿಸಲು ತಡ ಮಾಡಿದ್ದಾರೆ. ಅದರಿಂದ ಅಸಮಧಾನಗೊಂಡ ನಿರ್ವಾಹಕಿ ಸುಕನ್ಯಾ, ಏರುಧ್ವನಿಯಲ್ಲಿ ಬೇಗನೇ ತೋರಿಸಬೇಕು ಎಂದಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಅದು ವಿಕೋಪಕ್ಕೆ ಹೋದಾಗ ಆರೋಪಿ ಮೋನಿಷಾ, ನಿರ್ವಾಹಕಿ ಸುಕನ್ಯಾ ಮೇಲೆ ಹಲ್ಲೆ ನಡೆಸಿ, ಉಗುರಿನಿಂದ ಮುಖ ಪರಚಿದ್ದಾರೆ. ಅದನ್ನು ಗಮನಿಸಿದ ಕೆಲ ಮಹಿಳಾ ಪ್ರಯಾಣಿಕರು ಮೋನಿಷಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರೊಂದಿಗೂ ವಾಗ್ವಾದ ನಡೆಸಿದ ಮೋನಿಷಾ, ಮೊದಲು ನಿರ್ವಾಹಕಿಯೇ ಹೊಡೆದಿದ್ದಾರೆ. ಆಕಸ್ಮಿಕವಾಗಿ ಮುಖಕ್ಕೆ ಉಗುರು ಪರಚಿದೆ ಎಂದಿದ್ದಾರೆ. ಇಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಬಸ್ ಚಾಲಕ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ, ಬಿಎಂಟಿಸಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಬಂದು ಸುಕನ್ಯಾ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೋನಿಷಾಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.