ಕನಕಪುರ: ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸ್ನೇಹ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಾಟ ನಡೆಸಿದ್ದಾರೆ.
ಅವಘಡಕ್ಕೆ ಕಾರಣ: ಕೈಗಾರಿಕಾ ಪ್ರದೇಶದಲ್ಲಿ ಚಿಕ್ಕದಾಗಿ ನಿರ್ಮಿಸಿರುವ ಕೊಠಡಿಯಲ್ಲಿ ಸೋಡಿಯಂ ಮೆಟಲ್ಗಳನ್ನು ಕಟ್ ಮಾಡುವ ವೇಳೆ, ಸೋಡಿಯಂ ಮೇಲೆ ನೀರು ಬಿದ್ದು ಬೆಂಕಿ ಹೊತ್ತಿಕೊಂಡಿರುಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ 2 ಪಾಳಿಯಲ್ಲಿ ಮೂವರು ಕೆಲಸ ಮಾಡುತ್ತಾರೆ. ಒಬ್ಬರು ಆಪರೇಟರ್, ಹೌಸ್‌ಕೀಪರ್ ಮತ್ತು ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಾರೆ. ಬುಧವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆಪರೇಟರ್ ರಾಜೇಶ್ ಸೋಡಿಯಂ ಮೆಟಲ್ ಕತ್ತರಿಸುವಾಗ ಬೆವರಿನ ಹನಿ ಸೋಡಿಯಂ ಮೆಟಲ್ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಹಾರೋಹಳ್ಳಿ ಎಸ್‌ಐ ಧರ್ಮೇಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಗೊಂಡಿರುವ ಮೂವರಿಗೂ ಮಾಲಿಕರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಾಯಗೊಂಡವರಿಂದ ಅಥವಾ ಕಾರ್ಖಾನೆ ಮಾಲಿಕರಿಂದ ದೂರು ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಧರ್ಮೇಗೌಡ ಪ್ರತಿಕ್ರಿಯಿಸಿದ್ದಾರೆ.
Advertisement
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶದಲ್ಲಿರುವ ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಮಾಸ್ತೀಗೌಡ ಎಂಬುವರಿಗೆ ಸೇರಿದ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ರಾಜೇಶ್, ಶಿಲ್ಪ ಮತ್ತು ಕುಮಾರ್ ಅಗ್ನಿ ಅವಘಡದಲ್ಲಿ ಸಿಲುಕಿದ ದುರ್ದೈವಿಗಳಾಗಿದ್ದಾರೆ. ಈ ಮೂವರು ಬುಧವಾರ ಕೆಲಸ ಆರಂಬಿಸುತ್ತಿದ್ದಂತೆ ಈ ಅವಘಡ ನಡೆದಿದೆ ಎನ್ನಲಾಗಿದ್ದು, ಮತ್ತೂಬ್ಬ ಆಪರೇಟರ್ ಗಾಯಗೊಂಡವರಲ್ಲಿ ಇದ್ದಾರೆ ಎನ್ನಲಾಗಿದೆ. ಸುದ್ಧಿ ತಿಳಿದ ತಕ್ಷಣ ಕಾರ್ಖಾನೆ ಮಾಲಿಕರೇ ಮೂವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
Related Articles
Advertisement
ನಿರ್ಲಕ್ಷ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಾರ್ಖಾನೆಗಳು ತಲೆ ಎತ್ತುತ್ತಿವೆ. ಆದರೆ ಯಾವ ಕಾರ್ಖಾನೆಯಲ್ಲೂ ಕೈಗಾರಿಕಾ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ .ಕಾರ್ಮಿಕ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕೆಲಸ ಅರಸಿ ಬರುವ ಕಾರ್ಮಿಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಉದ್ಯಮಿಗಳು ಕಾರ್ಮಿಕರ ಜೀವಕ್ಕೆ ರಕ್ಷಣೆ ಒದಗಿಸದೆ ನಿರ್ಲಕ್ಷ ಮನೋಬಾವ ಹೊಂದಿದ್ದಾರೆ ಎಂಬ ಮಾತುಗಳು ಕೇಳತ್ತಿವೆ.
ಜೀವಕ್ಕೆ ಬೆಲೆಯಿಲ್ಲ-ಸಾವಿಗೆ ಬೆಲೆ: ಈ ಪ್ರದೇಶದಲ್ಲಿ ವರ್ಷದಲ್ಲಿ ಇಂತಹ ಹಲವು ಅವಘಡಗಳು ಸಂಭವಿಸುತ್ತವೆ. ಆದರೂ ಕಾರ್ಮಿಕರ ಸುರಕ್ಷತೆಗೆ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ರಕ್ಷಣೆಯಿಲ್ಲದಿದ್ದರೂ ಕಾರ್ಮಿಕರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಕೊನೆಗೆ ಘಟನೆಯಲ್ಲಿ ಸತ್ತವರ ಜೀವಕ್ಕೆ ಬೆಲೆ ಕಟ್ಟಿ ವ್ಯಾಪಾರ ಮುಗಿಸುತ್ತಾರೆ.
ಮಾಲಿಕರೆಲ್ಲಾ ಒಂದು: ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ 1ರಿಂದ 4 ಹಂತಗಳಲ್ಲಿ ವಿಸ್ತರಿಸಿಕೊಂಡಿದೆ. ಇಲ್ಲಿಗೆ ಬರುವ ಉದ್ಯಮಿಗಳು ಕಾರ್ಖಾನೆ ಪ್ರಾರಂಭಿಸುತ್ತಿದ್ದಂತೆ ಕಾರ್ಖಾನೆಗಳ ಒಕ್ಕೂಟ ಮಾಡಿಕೊಂಡಿದ್ದು ಅದರಲ್ಲಿ ಸದಸ್ಯರಾಗುತ್ತಾರೆ. ಕಾರ್ಖಾನೆಯಲ್ಲಿ ಯಾವುದೆ ಅವಘಡ ಸಂಭವಿಸಿದರೂ ಎಲ್ಲಾ ಮಾಲಿಕರು ಒಂದಾಗಿ ಇಂತಹ ವಿಚಾರಗಳು ಹೊರ ಹೋಗದಂತೆ ನೋಡಿಕೊಳ್ಳುತ್ತಾರೆ. ಸತ್ತವರ ಕುಟುಂಬದಿಂದಲೂ ದೂರು ದಾಖಲಾಗದಂತೆ ಎಚ್ಚರ ವಹಿಸಿ ಮಾತುಕತೆಯಲ್ಲೇ ಮುಗಿಸುತ್ತಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ: ಕೈಗಾರಿಕಾ ಪ್ರದೇಶದಲ್ಲಿ ನಡೆಸುವ ಪ್ರತಿಯೊಂದು ಕಾರ್ಖಾನೆಯು ಪರಿಸರ ಇಲಾಖೆ, ಕಾರ್ಮಿಕ ಇಲಾಖೆ, ಇಂಡಸ್ಟ್ರೀಸ್ ಅಂಡ್ ಬಾಯ್ಲರ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಕಾರ್ಖಾನೆಗಳಲ್ಲಿ ಯಾವ ಕೆಲಸ ನಡೆಯುತ್ತಿದೆ, ಎಷ್ಟು ಕಾರ್ಮಿಕರಿದ್ದಾರೆ. ಏನು ಉತ್ಪಾದನೆ (ತಯಾರು) ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಈ ಇಲಾಖೆಗಳಿಗೆ ಇಲ್ಲವಾಗಿದೆ. ಅಲ್ಲದೆ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳುವ ಕುತೂಹಲವೂ ಇಲಾಖೆಗಳಿಗೆ ಇದ್ದಂತಿಲ್ಲ.