Advertisement

ಕಂಪ್ಯೂಟರ್‌ ಯುಗ: ತೆರೆಮರೆಗೆ ಸರಿದ ಖಾತೆ-ಕಿರ್ದಿ ಪುಸ್ತಕ

08:34 PM Nov 06, 2021 | Team Udayavani |

ಲಕ್ಷ್ಮೇಶ್ವರ: ಕಂಪ್ಯೂಟರ್‌ ಆಗಮನ ದೊಂದಿಗೆ ವ್ಯಾಪಾರ-ವಹಿವಾಟಿನ ರಂಗದಲ್ಲಿ ಖಾತೆ-ಕಿರ್ದಿ ಪುಸ್ತಕಗಳು ತೆರೆಮರೆಗೆ ಸರಿಯುತ್ತಿದ್ದು, ಜತೆಗೆ ಈ ಮೊದಲು ವ್ಯಾಪಾರ-ವಹಿವಾಟಿನಲ್ಲಿದ್ದ ಸಂಸ್ಕೃತಿಯೂ ಮಾಯವಾಗುತ್ತಿದೆ.

Advertisement

ಕಂಪ್ಯೂಟರ್‌ ಯುಗ: ತೆರೆಮರೆಗೆ ಸರಿದ ಖಾತೆ-ಕಿರ್ದಿ ಪುಸ್ತಕ
ಎಪಿಎಂಸಿಯ ದಲಾಲಿ ಅಂಗಡಿ, ಕಮಿಷನ್‌ ಏಜೆಂಟ್ಸ್‌, ಕಿರಾಣಿ, ಬಟ್ಟೆ ಇತರೇ ಹೋಲ್‌ಸೇಲ್‌ ವ್ಯಾಪಾರಸ್ಥರು ತಮ್ಮ ಹಿರಿಯರ ಕಾಲದಿಂದಲೂ ದಿನನಿತ್ಯದ ವ್ಯವಹಾರ, ಲೆಕ್ಕಪತ್ರಗಳ ದಾಖಲಾತಿಗೆ ಖಾತೆ-ಕಿರ್ದಿ, ಬಿಲ್‌ಬುಕ್‌, ಡೈರಿ, ರೆಜಿಸ್ಟರ್‌ ಬಳಸುತ್ತಿದ್ದರು. ಪ್ರತಿ ಅಂಗಡಿಯಲ್ಲಿ ಅನುಭವಸ್ಥ ಹಿರಿಯರೊಬ್ಬರು ಲೆಕ್ಕಪತ್ರ ನಿರ್ವಹಿಸುತ್ತಿದ್ದರು.

ದಲಾಲಿ ಅಂಗಡಿಗಳಲ್ಲಿ ಕುಳಿತು ಬರೆಯಲು ಇಳಿಜಾರಿನ ಸಣ್ಣ ಟೇಬಲ್‌, ಮಸಿ ಪೆನ್‌ ಮುಖ್ಯವಾಗಿ ಕನ್ನಡ ಅಕ್ಷರ ಅಂಕಿ-ಸಂಖ್ಯೆ ಬಳಸಲಾಗುತ್ತಿತ್ತು. ಉತ್ಪನ್ನ ಮಾರಾಟ, ಖರೀದಿಗೆ ಬರುವ ರೈತರು, ವ್ಯಾಪಾರಸ್ಥರಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಕುಡಿಯಲು ಹರವಿಯ ತಣ್ಣನೆಯ ನೀರು ಜತೆಗೆ ಉತ್ತಮ ಬಾಂಧವ್ಯ, ಸಂಬಂಧ, ನಂಬಿಕೆ, ವಿಶ್ವಾಸ ಎಲ್ಲವೂ ಸೇರಿ ಒಂದು ಸಂಸ್ಕೃತಿಯೇ ಮಾಯವಾಗಿದೆ.

ಖಾತೆ-ಕಿರ್ದಿ ಬದಲು ಕಂಪ್ಯೂಟರ್‌ ಪೂಜೆ: ಪ್ರತಿ ವರ್ಷ ದೀಪಾವಳಿಯ ಬಲಿಪಾಡ್ಯಮಿ ದಿನ ಎಲ್ಲ ವ್ಯಾಪಾರಸ್ಥರು ಹೊಸ ಖಾತೆ-ಕಿರ್ದಿ ಮತ್ತು ಇತರೇ ಲೆಕ್ಕದ ಪುಸ್ತಗಳನ್ನು ಖರೀದಿಸುತ್ತಿದ್ದರು. ಪೂಜೆಗಿಡುವ ಮೊದಲು ಪ್ರತಿ ಪುಸ್ತಕದಲ್ಲಿ ಮೊದಲು ಮನೆ ದೇವರ ಹೆಸರು ಸೇರಿ 5 ದೇವರ ಹೆಸರು, ಓಂ, ಸ್ವಸ್ತಿಕ ಅಕ್ಷರ ಬರೆದು, ಕುಂಕುಮ ಹಚ್ಚಿ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಲ್ಲೂ ಕೆಂಪು ಬಟ್ಟೆ ಪೂಜೆಗೆ ಶ್ರೇಷ್ಠ ಎನ್ನುವ ಕಾರಣಕ್ಕೆ ಕೆಂಪು ಬಟ್ಟೆಯಿಂದ ಬೈಂಡಿಂಗ್‌ ಮಾಡಿದ ಕಿರ್ದಿಗಳನ್ನು ಪೂಜಿಸಲಾಗುತ್ತಿತ್ತು.

ಆದರೆ ಎಲ್ಲವೂ ಕಂಪ್ಯೂಟರೈಸ್ಡ್ ಆದ ಮೇಲೆ ಎಲ್ಲವೂ ಮಾಯವಾಗಿದೆ. ಹಬ್ಬದ ದಿನ ಕಂಪ್ಯೂಟರ್‌ ಜತೆಗೆ ಕೇವಲ ಒಂದೆರಡು ನೋಟ್‌ಬುಕ್‌ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.

Advertisement

ದೀಪಾವಳಿ ಹಬ್ಬದ ಮುನ್ನಾ ದಿನ ಬುಧವಾರ ತ್ರಯೋದಶಿ ತಿಥಿಯಂದು ಖಾತೆಕಿರ್ದಿ ಕೊಳ್ಳಲು ವಿಶೇಷ ದಿನ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಖಾತೆ-ಕಿರ್ದಿ ಖರೀದಿಸಲು ವ್ಯಾಪಾರಸ್ಥರು ಬರುತ್ತಿಲ್ಲ. ಅಮವಾಸ್ಯೆಯೂ ಮುಗಿದಿದ್ದು ಈ ವರ್ಷವಂತೂ ಸಂಪೂರ್ಣ ಕಡಿಮೆಯಾಗಿದೆ ಎನ್ನಬಹುದು.
ವೀರಣ್ಣ ಯರ್ಲಗಟ್ಟಿ,
ಪುಸ್ತಕ ವ್ಯಾಪಾರಸ್ಥರು, ಲಕ್ಷ್ಮೇಶ್ವರ

ನಮ್ಮ ಹಿರಿಯರ ಕಾಲದಿಂದಲೂ ನಮ್ಮ ಪ್ರಿಂಟಿಂಗ್‌ ಪ್ರಸ್‌ನಲ್ಲಿ ಖಾತೆ-ಕಿರ್ದಿ ಪುಸ್ತಕ ಪ್ರಿಂಟ್‌ ಮಾಡುತ್ತಿದ್ದೆವು. ಈ ಕೆಲಸದಲ್ಲಿ ನಮ್ಮ ಜತೆಗೆ ಬೈಂಡಿಂಗ್‌ ಮಾಡುವುದು, ಹಾಳೆ ಹಚ್ಚುವ ಕೆಲಸದ ಮೂಲಕ ಹಲವರ ಬದುಕಿಗೆ ಆಸರೆ ಯಾಗಿತ್ತು. ಇದೀಗ ಡಿಜಿಟಲ್‌ ಯುಗದಿಂದ ಖಾತೆ-ಕಿರ್ದಿ ವ್ಯಾಪಾರ ಇಲ್ಲದಂತಾಗಿದೆ. ನಮ್ಮಲ್ಲಿ ಕೆಲಸ ಮಾಡುವವರೂ ಬೇರೆ ಉದ್ಯೋಗ ಕಂಡುಕೊಂಡಿದ್ದಾರೆ.
ಈಶ್ವರ ಬನ್ನಿಕೊಪ್ಪ,
ಪ್ರಿಂಟಿಂಗ್‌ ಪ್ರಸ್‌ ಮಾಲಿಕ

ಈ ಹಿಂದೆ ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ಮೂರ್‍ನಾಲ್ಕು ಸಾವಿರ ರೂ. ಹೊಸ ಖಾತೆ-ಕಿರ್ದಿ, ಬಿಲ್‌ಬುಕ್‌ ಸೇರಿ ಇತರೇ ಪುಸ್ತಕ ಖರೀದಿಸುತ್ತಿದ್ದೆವು. ದಿನನಿತ್ಯದ ವ್ಯಾಪಾರದಲ್ಲಿ ಪಾರದರ್ಶಕತೆ, ಸರಳತೆ, ಸುಲಭ ವ್ಯವಹಾರಕ್ಕೆ ಹೊಸ ತಂತ್ರಜ್ಞಾನ ಅನಿವಾರ್ಯವೂ ಆಗಿದೆ. ದಿನದ ವಹಿವಾಟನ್ನು ಅಂದಂದೇ ಕಂಪ್ಯೂಟರ್‌ನಲ್ಲಿ ದಾಖಲಿಸುವುದರಿಂದ ಮೊದಲಿನಂತೆ ಪುಸ್ತಕಗಳ ಅವಶ್ಯಕತೆ ಇಲ್ಲ. ಆದಾಗ್ಯೂ ಲೆಕ್ಕಪತ್ರ ಬರೆದಿಟ್ಟುಕೊಳ್ಳಲು ಒಂದಷ್ಟು ರೆಜಿಸ್ಟರ್‌, ನೋಟ್‌ಬುಕ್‌, ಬಳಿಹಾಳೆ, ಪೆನ್ನು ಖರೀದಿಸಿ ಪೂಜಿಸುತ್ತೇವೆ.
ಎನ್‌.ಎಸ್‌. ಪಾಟೀಲ, ದಲಾಲಿ ವ್ಯಾಪಾರಸ್ಥರು, ಲಕ್ಷ್ಮೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next