ಬಾಗಲಕೋಟೆ: ಅದು 2006ರ ಅಕ್ಟೋಬರ್ 9. ಸಿಎಂ ಕುಮಾರಸ್ವಾಮಿ ಜಿಲ್ಲೆಯ ಚಿಕ್ಕಮ್ಯಾಗೇರಿಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾರೆ ಅಂದಾಕ್ಷಣ ಜಿಲ್ಲಾಡಳಿತ ಇಡೀ ಗ್ರಾಮ ಸ್ವಚ್ಛ ಮಾಡಿತ್ತು. ಸಿಎಂ ತಂಗಲಿರುವ ಶಾಲೆ ಅಲಂಕಾರಗೊಳಿಸಿತ್ತು. ಸಿಎಂ ಕೂಡ ಸೋಮವಾರ ರಾತ್ರಿ ಗ್ರಾಮಕ್ಕೆ ಬಂದು ತಂಗಿದ್ದರು.
ಬಳಿಕ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವೆ ಎಂಬ ಭರವಸೆಯೂ ಕೊಟ್ಟರು. ವಾಸ್ತವ್ಯ ಮಾಡಿದ್ದ ಗ್ರಾಮದ ಪ್ರೌಢ ಶಾಲೆಗೆ ಕಾಂಪೌಂಡ್ ಮಂಜೂರು ಮಾಡಿ ಎಂಬ ಬೇಡಿಕೆಯೂ ಇಟ್ಟರು. ಅದಕ್ಕೂ ಭರವಸೆ ಕೊಟ್ಟರು ನಾಡ ದೊರೆ. ಆದರೆ, ಆ ಶಾಲೆಗೆ ಈವರೆಗೆ ಕಾಂಪೌಂಡ್ ಆಗಲಿಲ್ಲ! ಹೀಗಾಗಿ ಚಿಕ್ಕಮ್ಯಾಗೇರಿ ಗ್ರಾಮದ ಮುರಘೇಂದ್ರ ಮಹಾಸ್ವಾಮೀಜಿ ಅನುದಾನಿತ ಪ್ರೌಢಶಾಲೆ ಸ್ಥಿತಿ ಇನ್ನೂ ಬದಲಾಗಿಲ್ಲ.
ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ, ಬೊಮ್ಮಣಗಿ ಹೀಗೆ ಹಲವು ಹಳ್ಳಿಗಳು ಒಂದೆಡೆ ಇದ್ದು, ಇಲ್ಲಿನ ಎಲ್ಲ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಲು ಮನವಿ ಮಾಡಿದ್ದರು. ಅದು ಕೂಡ ಮಂಜೂರಾಗಲಿಲ್ಲ. ಈಗಾಗಲೇ ಗ್ರಾಮದಲ್ಲಿ ಪ್ರೌಢ ಶಾಲೆ ಇದ್ದು, ಸರ್ಕಾರಿ ವಸತಿ ನಿಲಯ ಮಂಜೂರು ಮಾಡಲೂ ಗ್ರಾಮಸ್ಥರು ಕೇಳಿಕೊಂಡಿದ್ದರು. ಆ ಬೇಡಿಕೆಯೂ ಈಡೇರಲಿಲ್ಲ.
ಈ ಎರಡು ಪ್ರಮುಖ ಬೇಡಿಕೆ ಹೊರತುಪಡಿಸಿದರೆ ಆಲಮಟ್ಟಿ-ಕೂಡಲಸಂಗಮ ರಸ್ತೆ ನಿರ್ಮಾಣ (ಅಂದಾಜು 25 ಕೋಟಿ), ವಿವಿಧ ಗ್ರಾಮಗಳಿಂದ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಕೂಡು ರಸ್ತೆಗಳು (ಅಂದಾಜು 71 ಲಕ್ಷ), ಸುವರ್ಣ ಗ್ರಾಮ ಯೋಜನೆಗೆ ಚಿಕ್ಕಮ್ಯಾಗೇರಿ ಗ್ರಾಮ ಆಯ್ಕೆ ಬೇಡಿಕೆ ಈಡೇರಿವೆ. ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ, ನಾಯನೇಗಲಿ, ರಾಂಪುರ, ಬೊಮ್ಮಣಗಿ, ಸುತಗುಂಡಾರ ಜನರಿಗೆ ವೃದ್ಧಾಪ್ಯ ಮತ್ತು ವಿಧವಾ ವೇತನ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ವಿತರಣೆ ಮಾಡಲಾಗಿತ್ತು. ಅದಿಷ್ಟು ಬಿಟ್ಟರೆ ಅಂತಹ ದೊಡ್ಡ ಯೋಜನೆ ಯಾವುದೂ ಆಗಿಲ್ಲ.
•ಶ್ರೀಶೈಲ ಕೆ. ಬಿರಾದಾರ