Advertisement

ಜಟಿಲ ಜಿಎಸ್‌ಟಿ: ವ್ಯಾಪಾರಿಗಳು ಕಕ್ಕಾಬಿಕ್ಕಿ!

10:00 AM Sep 17, 2017 | Harsha Rao |

ಸ್ವತಂತ್ರ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂಬ ಹಣೆಪಟ್ಟಿಯೊಂದಿಗೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ತನ್ನ ಜಟಿಲತೆಯಿಂದಾಗಿ ವ್ಯಾಪಾರಿಗಳಿಗೆ ಮತ್ತು ಲೆಕ್ಕಪತ್ರಕ್ಕೆ ಸಂಬಂಧಿತ ಎಲ್ಲರಿಗೆ ಬಿಸಿ ತುಪ್ಪವಾಗಿಬಿಟ್ಟಿದೆ ಎನ್ನದೇ ವಿಧಿಯಿಲ್ಲ. ಜಿಎಸ್‌ಟಿಯಿಂದಾಗಿ ಮಾರಾಟದರದ ಮೇಲೆ ಆದ ಪರಿಣಾಮದ ಕುರಿತು ಈ ಲೇಖನದಲ್ಲಿ ಚರ್ಚಿಸುತ್ತಿಲ್ಲ. ಕೇವಲ ಅದರ ಅನುಷ್ಠಾನದ ಕುರಿತು, ಮುಖ್ಯವಾಗಿ ಅದರ ವರದಿಗಳನ್ನು ಸಲ್ಲಿಸುವುದರ ಬಗ್ಗೆ ಸೀಮಿತಗೊಳಿಸಿ, ವ್ಯಾಪಾರಿಗಳು ಅನುಭವಿಸುವ ತೊಂದರೆಗಳನ್ನು ದಾಖಲಿಸಿದ್ದೇನೆ.

Advertisement

ಮೂರು ವರದಿ ನಮೂನೆಗಳು, ಮೂರು ನಿಗದಿತ ದಿನಾಂಕಗಳು: ಜಿಎಸ್‌ಟಿ ಮಾಸಿಕ ವರದಿ ಸಲ್ಲಿಕೆಗೆ ಕ್ರಮವಾಗಿ, ಜಿಎಸ್ಟಿಆರ್‌ 1, ಜಿಎಸ್ಟಿಆರ್‌ 2 ಮತ್ತು ಜಿಎಸ್ಟಿಆರ್‌ 3 ಎಂಬ ನಮೂನೆಗಳಿವೆ. ಮೊದಲ ನಮೂನೆಯಲ್ಲಿ ಮಾಡಿದ ಮಾರಾಟದ ವಿವರಗಳು, ಎರಡರಲ್ಲಿ ಖರೀದಿ ವಿವರಗಳು ಹಾಗೂ ಮೂರರಲ್ಲಿ ತೆರಿಗೆ ಪಾವತಿ ಬಾಧ್ಯತೆಯ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಈ ನಮೂನೆಗಳಿಗೆ ಕ್ರಮವಾಗಿ ಮುಂದಿನ ತಿಂಗಳ 10, 15 ಮತ್ತು 20ನೇ ತಾರೀಕುಗಳು ಕೊನೆಯ ದಿನವಾಗಿರುತ್ತವೆ. ಹಾಗೆಂದು, ವ್ಯಾಪಾರಿಗಳು ತಮಗೆ ಸಮಯವಿ¨ªಾಗ, ಇದನ್ನು ಫೈಲು ಮಾಡುವಂತಿಲ್ಲ. ಯಾಕೆಂದರೆ ಜಿಎಸ್ಟಿಆರ್‌ 1 ಫೈಲು ಮಾಡಿದ ಅನಂತರವಷ್ಟೇ 2ನ್ನು ಫೈಲು ಮಾಡಲು ಸಾಧ್ಯವಾಗುವುದು. ಹಾಗಾಗಿ ನಮೂನೆ 2 ಫೈಲು ಮಾಡಲು ಐದು ದಿನವಷ್ಟೇ ಸಿಗುವುದು. ಒಬ್ಬನ ಮಾರಾಟ ಇನ್ನೊಬ್ಬನ ಖರೀದಿ- ಅವೆರಡನ್ನು ಸರಿಹೊಂದಿಸುವುದು ಜಿಎಸ್‌ಟಿಯಲ್ಲಿ ಕಡ್ಡಾಯ. ಇದಕ್ಕೆ ಕೇವಲ ಎರಡು ದಿನಗಳ ಅವಕಾಶ- 16 ಮತ್ತು 17ರಂದು. ಆ ದಿನಗಳಂದು ಯಾವುದೋ ಕಾರಣಕ್ಕೆ ಮಾಡಲಾಗದಿದ್ದರೆ, ಮತ್ತೆ ಮುಂದಿನ ತಿಂಗಳವರೆಗೆ ಕಾಯುವುದು ಅನಿವಾರ್ಯ.                                                                                         

ಆಗ, ತೆರಿಗೆ ಪಾವತಿಯ ಮೊತ್ತ ಹೆಚ್ಚಾಗುವ ಸಾಧ್ಯತೆಯಿದೆ- ಇನ್‌ಪುಟ್‌ ಸಿಗದೇ ಇರುವುದರಿಂದ. ನಮೂನೆ 3 ಫೈಲು ಮಾಡಲು 18ರಿಂದ 20 ರವರೆಗೆ ಅವಕಾಶವಿರುತ್ತದಷ್ಟೇ. ಅಂದರೆ ತಿಂಗಳಲ್ಲಿ ಅರ್ಧದಷ್ಟು ಸಮಯ ಜಿಎಸ್‌ಟಿ ವರದಿ ಸಲ್ಲಿಕೆಗೇ ಮೀಸಲಿಡಬೇಕಾಗುತ್ತದೆ. ವ್ಯಾಟ್‌ ಇರುವಾಗ 20ನೇ ತಾರೀಕಿನೊಳಗೆ ಯಾವಾಗ ಬೇಕಾದರೂ ರಿಟರ್ನ್ ಫೈಲು ಮಾಡುವ ಸೌಲಭ್ಯವಿತ್ತು. ವ್ಯಾಪಾರಿ ತನ್ನ ಮಾರಾಟ ಮತ್ತು ಖರೀದಿ ವಿವರಗಳನ್ನು ನೀಡಿದರಷ್ಟೇ ಸಾಲದು. ಅದನ್ನು ತನ್ನ ಗ್ರಾಹಕ ಅಥವಾ ಪೂರೈಕೆದಾರ ನೀಡಿದ ವಿವರಗಳೊಂದಿಗೆ ಸರಿಹೊಂದಿಸಬೇಕಾಗುತ್ತದೆ. ಎಲ್ಲವೂ ಗಣಕಯಂತ್ರದ ಮೂಲಕ ನಡೆಯುವ ಸರಿಹೊಂದಿಕೆಯಾದ್ದರಿಂದ, ಒಂದು ಸಣ್ಣ ವ್ಯತ್ಯಾಸವಾದರೂ, ತಿರಸ್ಕೃತವಾಗುವುದರಲ್ಲಿ ಸಂಶಯವಿಲ್ಲ.

ತಮಾಷೆಯೆಂದರೆ, ಈ ಸರಿಹೊಂದಿಕೆಗೆ ಸಿಗುವ ಸಮಯ ಕೇವಲ ಎರಡು ದಿನಗಳು – ದಿನಾಂಕ 16 ಮತ್ತು 17. ಆ ದಿನಗಳಂದು ರಜೆಯಿದ್ದರೆ ಅಥವಾ ಸಂಬಂಧಿತ ನೌಕರ ರಜೆ ಹಾಕಿದ್ದರೆ, ಅದಕ್ಕೆ ವ್ಯಾಪಾರಿ ಬೆಲೆ ತೆರಬೇಕಾಗುತ್ತದೆ. ಜತೆಗೆ, ಈ ರೀತಿಯ ಹೊಂದಾಣಿಕೆ ವಾಸ್ತವಿಕವಾಗಿ ಸಾಧ್ಯವೆ? ಕೋಟ್ಯಂತರ ಬಿಲ್ಲುಗಳನ್ನು ಪರಸ್ಪರ ಸರಿಹೊಂದಿಸುವ ಕೆಲಸ ಮೂರು ದಿನಗಳಲ್ಲಿ ಆಗಬೇಕು! ಈ ಅಗಾಧ ಪ್ರಮಾಣದ ಹೊಂದಾಣಿಕೆ ನಡೆಯಬೇಕಾದರೆ ನಮ್ಮ ಅಂತರ್ಜಾಲ ವ್ಯವಸ್ಥೆ ಬಲವಾಗಿರಬೇಕು!

ಕೊನೆಯ ದಿನದ ಒತ್ತಡ: ತೆರಿಗೆ ಪಾವತಿಗೆ ಇಪ್ಪತ್ತನೆಯ ತಾರೀಕು ಕಡೇ ದಿನಾಂಕವಾಗಿದ್ದು, ಆಮೇಲೆ ಮಾಸಿಕ ವರದಿ ನಮೂನೆ 3ನ್ನು ಸಲ್ಲಿಸಬೇಕಾಗುತ್ತದೆ. ಎಲ್ಲ ತೆರಿಗೆದಾರರು ಒಂದೇ ದಿನದಂದೇ ಜಿಎಸ್‌ಟಿಎನ್‌ ಜಾಲತಾಣಕ್ಕೆ ಭೇಟಿ ನೀಡುವುದರಿಂದ, ವೆಬ್‌ಸೈಟ್‌ ಕುಸಿತ ಬಹುತೇಕ ಖಚಿತ. ಅದಕ್ಕಾಗಿ ಸರಕಾರ ಆದಷ್ಟು ಬೇಗನೆ ವರದಿ ಸಲ್ಲಿಸಿ ಅಂತ ಮನವಿ ಮಾಡಿದರೂ ಅದು ಸಾಧುವೆ? ವ್ಯಾಪಾರಿಗಳು ಕೊನೆಯ ದಿನವೇ ಯಾಕೆ ತೆರಿಗೆ ಪಾವತಿಸುತ್ತಾರೆ ಎಂದು ಸರಕಾರ ಯೋಚಿಸಿದೆಯೆ? ಹೆಚ್ಚಿನ ವರ್ತಕರು ಬ್ಯಾಂಕಿನ ಸಾಲದಿಂದ ವ್ಯವಹಾರ ನಡೆಸುವವರು. ಅವರು ಬಡ್ಡಿ ಉಳಿಸಲೋಸುಗ ಕೊನೆಯ ದಿನದಂದೇ ತೆರಿಗೆ ಪಾವತಿಸುವುದು ಅನಿವಾರ್ಯ ಮತ್ತು 17ನೇ ತಾರೀಕಿನವರೆಗೆ ನಮೂನೆ 2 ಮಾತ್ರ ಸಲ್ಲಿಸಲು ಸಾಧ್ಯ. ಆದ್ದರಿಂದ, ಎಲ್ಲರೂ 20ನೇ ತಾರೀಕಿಗೆ ತೆರಿಗೆ ಪಾವತಿಸುವುದು ಅನಿವಾರ್ಯ. 

Advertisement

ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ!: ಜಿಎಸ್‌ಟಿಯಲ್ಲಿ ವರ್ತಕರು ತಮ್ಮ ಖರೀದಿಯಲ್ಲಿ ಪಾವತಿಸಿದ ತೆರಿಗೆಯನ್ನು ತಮ್ಮ ಮಾರಾಟದ ಮೇಲಿನ ತೆರಿಗೆ ಪಾವತಿಯ ಮೊತ್ತದಿಂದ ಕಳೆಯಬಹುದು. ವ್ಯಾಟ್‌ ವ್ಯವಸ್ಥೆಯಲ್ಲೂ ಇದು ಇತ್ತು. ಆದರೆ ಈಗ ಒಂದು ಮುಖ್ಯ ವ್ಯತ್ಯಾಸವಿದೆ. ಈಗ ಕ್ರೆಡಿಟ್‌ ಸಿಗಬೇಕಾದರೆ ಕೇವಲ ವರ್ತಕನ ಬಳಿ ಬಿಲ್ಲು ಇದ್ದರೆ ಸಾಕಾಗದು. ಆ ಬಿಲ್ಲನ್ನು ನೀಡಿದಾತ ಅಂದರೆ, ಪೂರೈಕೆದಾರ ಅದರ ಮಾಹಿತಿಯನ್ನು ಜಿಎಸ್‌ಟಿಎನ್‌ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿರಬೇಕು. ಇಲ್ಲದೇ ಇದ್ದರೆ, ಕ್ರೆಡಿಟ್‌ ದೊರಕುವುದಿಲ್ಲ. ಕಾನೂನಿನ ಪ್ರಕಾರ ಬಿಲ್ಲು ಇದ್ದರೆ ಸಾಕು. ಆದರೆ ಕಂಪ್ಯೂಟರುಗಳು ಕ್ರೆಡಿಟ್‌ ನಿರಾಕರಿಸಲಿವೆ! ಕೇವಲ ಹತ್ತು ರೂಪಾಯಿ ಕ್ರೆಡಿಟ್‌ ಬೇಕಾದರೂ, ಇದೇ ವ್ಯವಸ್ಥೆ! ಹಾಗಾಗಿ ಅಗಾಧವಾದ ಡಾಟಾಗಳನ್ನು ಜಾಲತಾಣ ನಿಭಾಯಿಸಬೇಕಾಗುತ್ತದೆ. ಇದರಿಂದಾಗಿ ವರ್ತಕರು ಸಮಯ ಮತ್ತು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲ ಮಂದಿ ವರ್ತಕರು ಸುಳ್ಳು ಇನ್‌ಪುಟ್‌ ಕ್ರೆಡಿಟ್‌ ತೋರಿಸಿ, ವಂಚಿಸಿರಲೂಬಹುದು. ಆದರೆ ಅಂತಹವರ ಸಂಖ್ಯೆ ನಗಣ್ಯವೆನ್ನುವಷ್ಟು ಚಿಕ್ಕದು. ಹಾಗಾಗಿ ಯಾರೋ ಒಬ್ಬ ತಪ್ಪು ಮಾಡಿದ ಎಂದು, ಎಲ್ಲರಿಗೂ ಕಠಿನ ನಿಯಮಾವಳಿ ಜಾರಿ ಮಾಡುವುದು ಅತಿರೇಕ. ಅದರ ಬದಲಿಗೆ, ಒಂದು ಕನಿಷ್ಠ ಮಿತಿಯನ್ನು ನಿಗದಿಗೊಳಿಸಿ, ಉದಾಹರಣೆಗೆ, ಹತ್ತು ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಕ್ರೆಡಿಟುಗಳಿಗೆ ಮಾತ್ರ ಈ ವ್ಯವಸ್ಥೆ ತಂದರೆ ಸಾಕಾಗುತ್ತಿರಲಿಲ್ಲವೆ? 

ತೆರಿಗೆ ಹೊಂದಾಣಿಕೆ ಸಮಸ್ಯೆ: ಜಿಎಸ್‌ಟಿಯಲ್ಲಿ ಮುಖ್ಯವಾಗಿ ಮೂರು ವಿಧದ ತೆರಿಗೆಗಳಿವೆ. ರಾಜ್ಯದೊಳಗೆ ನಡೆಯುವ ವ್ಯವಹಾರಗಳಿಗೆ ವಿಧಿಸುವ ತೆರಿಗೆ. ಅದರಲ್ಲಿ ರಾಜ್ಯ ಹಾಗೂ ಕೇಂದ್ರಕ್ಕೆ ಸಲ್ಲುವ ತೆರಿಗೆಗಳು, ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿ. ಅಂತಾರಾಜ್ಯದಲ್ಲಿ ನಡೆಯುವ ವ್ಯವಹಾರಗಳಿಗೆ ವಿಧಿಸಲಾಗುವ ಐಜಿಎಸ್‌ಟಿ ಎಂಬ ತೆರಿಗೆ. ಇನ್‌ಪುಟ್‌ ಕ್ರೆಡಿಟ್‌ ತೆಗೆದುಕೊಳ್ಳುವಾಗ ಐಜಿಎಸ್‌ಟಿಯನ್ನು ರಾಜ್ಯದ ತೆರಿಗೆಗಳಿಂದ ಮುರಿದುಕೊಳ್ಳಬಹುದಾದರೂ, ರಾಜ್ಯದಲ್ಲಿ ಪಾವತಿಸಿದ ತೆರಿಗೆಗಳನ್ನು ರಾಜ್ಯದಲ್ಲಿ ನಡೆಸಿದ ವ್ಯವಹಾರಗಳ ತೆರಿಗೆಗಳೊಂದಿಗೆ ಮಾತ್ರ ಹೊಂದಿಸಿಕೊಳ್ಳಬಹುದು.

ಅದರ ಜತೆಗೆ, ಕೆಲವು ವಸ್ತುಗಳಿಗೆ ಈ ರೀತಿ ಹೊಂದಾಣಿಕೆ ನಿಷೇಧಿಸಲಾಗಿದೆ. ಈ ಹೊಂದಾಣಿಕೆ ದೊಡ್ಡ ಗೊಂದಲವಾಗಿದ್ದು, ಕೊಂಚ ಏಮಾರಿದರೂ ಹೊಂದಾಣಿಕೆ ತಪ್ಪಿ, ತೆರಿಗೆಯನ್ನು ನಗದಾಗಿ ಪಾವತಿಸಬೇಕಾದ ಪ್ರಮೇಯ ಬರಬಹುದು, ವ್ಯಾಪಾರಿಗೆ ಇನ್‌ಪುಟ್‌ ಲಭ್ಯವಿದ್ದರೂ! ಜಿಎಸ್‌ಟಿಎನ್‌ ಜಾಲತಾಣದಲ್ಲಿ ಹೊಂದಾಣಿಕೆ, ನಿಯಮಾನುಸಾರ, ಸ್ವಯಂಚಾಲಿತವಾಗಿ ನಡೆದಲ್ಲಿ, ತಪ್ಪಾಗಿ ಹೊಂದಾಣಿಕೆಗಳಾಗುವುದನ್ನು ನಿಲ್ಲಿಸಬಹುದು. 
ಎಚ್‌ಎಸ್‌ಎನ್‌ ಸಂಖ್ಯೆಯ ತೊಡಕು: ಜಿಎಸ್‌ಟಿಯಲ್ಲಿ ಪ್ರತೀ ವಸ್ತುವಿಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಎಚ್‌ಎಸ್‌ಎನ್‌ ಅಂತ ಅದರ ಹೆಸರು. ತಮ್ಮ ವ್ಯವಹಾರಕ್ಕೆ ನಿಖರವಾದ ಎಸ್‌ಎಸ್‌ಎನ್‌ ಸಂಖ್ಯೆಯನ್ನು ಹುಡುಕುವುದೇ ದುಸ್ತರ ಕೆಲಸ.

ತೆರಿಗೆ ದರದ ಗೊಂದಲ: ಜಿಎಸ್‌ಟಿ ಜಾರಿಯಾದ ಮೇಲೆ ವ್ಯಾಪಾರಿಗಳು ಅನುಭವಿಸಿದ ಅತೀ ದೊಡ್ಡ ಗೊಂದಲವೆಂದರೆ ವಸ್ತುಗಳಿಗೆ ಅನ್ವಯವಾಗುವ ತೆರಿಗೆ ದರ ಪತ್ತೆ ಮಾಡುವುದು! ಇದಕ್ಕೆ ಮುಖ್ಯ ಕಾರಣ ಜಿಎಸ್‌ಟಿ ಕಾನೂನಲ್ಲಿ ವಸ್ತುಗಳ ದರವನ್ನು ಅಬಕಾರಿ ತೆರಿಗೆ ದರಗಳ ಪಟ್ಟಿಯ ಆಧಾರದಲ್ಲಿ ನಮೂದಿಸಲಾಗಿದೆ. ವ್ಯಾಟ್‌ ವ್ಯವಸ್ಥೆಯಲ್ಲಿ ಸುಲಭವಾಗಿ ತೆರಿಗೆ ದರ ಹುಡುಕಬಹುದಿತ್ತು. 

ಸಣ್ಣ ವ್ಯಾಪಾರಿಗಳಿಗೆ ಹೊಡೆತ: ಜಿಎಸ್‌ಟಿಯಲ್ಲಿ ವಾರ್ಷಿಕ ರೂ. ಇಪ್ಪತ್ತು ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವವರು ನೊಂದಾಯಿಸಬೇಕಾಗಿಲ್ಲ. ವ್ಯಾಟ್‌ನಲ್ಲಿ ಇದು 7.50 ಲಕ್ಷವಾಗಿತ್ತು. ಆದರೆ ಅಂತಹವರಿಂದ ನೊಂದಾಯಿತ ವರ್ತಕರು ಖರೀದಿ ಮಾಡಿದರೆ, ಅಥವಾ ಸೇವೆ ಪಡಕೊಂಡರೆ, ಹಿಮ್ಮುಖ ಭಾದ್ಯತೆ ತೆರಿಗೆ ಅನ್ವಯ ತೆರಿಗೆ ಕಟ್ಟಬೇಕಾಗುತ್ತದೆ.

ಅಂತಹ ಹಿಮ್ಮುಖ ತೆರಿಗೆಯ ಕ್ರೆಡಿಟ್‌ ಅನ್ನು ವರ್ತಕರು ಮುಂದಿನ ತಿಂಗಳು ತೆಗೆದುಕೊಳ್ಳಬಹುದಷ್ಟೇ. ಅಂದರೆ, ಜುಲೈ ತಿಂಗಳ ನೊಂದಾಯಿಸದ ವರ್ತಕರಿಂದ ಪಡೆದ ಪೂರೈಕೆಗಳಿಗೆ ತೆರಿಗೆ ಕಟ್ಟಿ, ಆಗÓr… ತಿಂಗಳ ತೆರಿಗೆ ಭಾದ್ಯತೆಗೆ ಹೊಂದಿಸಬಹುದು. ಸರಕಾರ ಒಂದು ತಿಂಗಳಿನ ಕಾಲ ಆ ಹಣವನ್ನು ಬಡ್ಡಿಯಿಲ್ಲದೇ ಪಡೆಯಲಿದೆ! ಅದರ ಬಡ್ಡಿಯನ್ನು ವರ್ತಕ ಭರಿಸಬೇಕಾಗುತ್ತದೆ! ಜತೆಗೆ ಅದಕ್ಕೆ ಬಹಳಷ್ಟು ಹೆಚ್ಚುವರಿ ಕೆಲಸಗಳು, ಉದಾಹರಣೆಗೆ ಬಿಲ್ಲು ತಯಾರಿಸುವುದು, ಬರುತ್ತವೆ. ಈ ಎಲ್ಲ ಗೊಂದಲಗಳಿಂದಾಗಿ, ನೊಂದಾಯಿತ ವ್ಯಾಪಾರಿಗಳು ನೋಂದಾವಣೆ ಹೊಂದಿಲ್ಲದ ವರ್ತಕರಿಂದ ಖರೀದಿಸುವುದನ್ನು ನಿಲ್ಲಿಸುವ ಸಾಧ್ಯತೆ ಬಹಳಷ್ಟು ಇದೆ. ಅಂತಹ ವರ್ತಕರ ದರವೂ ಇತರರಿಗಿಂತ ಕಮ್ಮಿಯಿಲ್ಲದೇ ಇದ್ದಲ್ಲಿ, ಆಗ ವರ್ತಕರಿಗೆ ನಷ್ಟವೂ ಆಗುತ್ತದೆ. ಹಾಗಾಗಿ ಸಣ್ಣ ಸಣ್ಣ ವ್ಯಾಪಾರಿಗಳ ವ್ಯವಹಾರಕ್ಕೆ ಹೊಡೆತ ಬಿದ್ದು, ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ.  

ಅನುಷ್ಠಾನ ವೆಚ್ಚಗಳು: ಜಿಎಸ್‌ಟಿ ವರದಿ ಸಲ್ಲಿಕೆಗೆ ನೆರವಾಗಲು ಜಿಎಸ್‌ಪಿಗಳನ್ನು ಸರಕಾರ ನೇಮಿಸಿದೆ. ಈಗಾಗಲೇ ದೊಡ್ಡ ದೊಡ್ಡ ಕಂಪೆನಿಗಳು ಪರವಾನಿಗೆ ಪಡೆದು ಸೇವೆ ನೀಡಲು ಸಜ್ಜಾಗಿವೆ. ಅವುಗಳೇನು ಪುಕ್ಕಟೆ ಸೇವೆ ನೀಡುವುದಿಲ್ಲ. ಸೇವೆಗೆ ಶುಲ್ಕ ವಿಧಿಸುತ್ತವೆ. ಆರಂಭದಲ್ಲಿ ಬಾಯಿಗೆ ಬಂದಂತೆ ಇದ್ದ ದರವು, ಈಗ ಪ್ರತೀ ಬಿಲ್ಲು ದಾಖಲೆ ಅಪ್‌ಲೋಡಿಗೆ ಹತ್ತು ಪೈಸೆಯಿಂದ ಒಂದು ರೂಪಾಯಿಯವರೆಗೂ ಇದೆ. ವರ್ತಕನ ವ್ಯವಹಾರದ ಗಾತ್ರದ ಮೇಲೆ ಆತನ ಶುಲ್ಕ ಬದಲಾಗುತ್ತದೆ. ಕಾನೂನಾತ್ಮಕವಾಗಿ ಸಲ್ಲಿಸಬೇಕಾದ ವಿವರಗಳಿಗೆ ಶುಲ್ಕವನ್ನೂ ತೆರೆಬೇಕಾದ ಪರಿಸ್ಥಿತಿ! ಇದು ಜನರ ಸುಲಿಗೆಯಲ್ಲವೇ? ಇದು ಮುಂದೆ ಯಾವ ರೀತಿ ಆಗಬಹುದೆನ್ನುವುದನ್ನು ಊಹಿಸುವುದು ಅಸಾಧ್ಯ. ಜಿಎಸ್‌ಪಿಗಳು ಎಎಸ್‌ಪಿಗಳ  ಮೂಲಕ ಸೇವೆ ನೀಡುತ್ತಾರೆ. ಶುಲ್ಕ ಭರಿಸಲು ಇಷ್ಟವಿಲ್ಲದೇ ಇದ್ದವರು ನೇರವಾಗಿ ಜಿಎಸ್‌ಟಿಎನ್‌ ಜಾಲತಾಣಕ್ಕೆ ಹೋಗಬಹುದು. ಆದರೆ ಅದು ನಿಧಾನ ಮತ್ತು ಕಠಿಣವಾಗಿರುತ್ತದೆ.

ನಿ¨ªೆ ಕಳೆದುಕೊಂಡರು: ಹೊಸ ಜಿಎಸ್‌ಟಿಯ ತರಾತುರಿಯ ಜಾರಿಯಿಂದ ವರ್ತಕರು, ಲೆಕ್ಕಪರಿಶೋಧಕರು, ಲೆಕ್ಕಿಗರು ಮತ್ತು ತೆರಿಗೆ ಸಲಹೆಗಾರರು ತಮ್ಮ ರಾತ್ರಿಯ ನಿದ್ರೆಗಳನ್ನು ಕಳೆದುಕೊಂಡಿ¨ªಾರೆ. ಅಸಂಖ್ಯ ಮಾನವ ಗಂಟೆಗಳು ವ್ಯರ್ಥವಾಗಿವೆ. ಇದೆಲ್ಲ ಕೇವಲ ಆರಂಭವಷ್ಟೇ. ಇನ್ನು ಅಧಿಕಾರಿಗಳು ತೆರಿಗೆ ನಿರ್ಧಾರ ಮಾಡಲು ಬರುವಾಗ ವರ್ತಕರು ಇನ್ನಷ್ಟು ಹೈರಾಣು ಆಗುವುದರಲ್ಲಿ ಸಂದೇಹವಿಲ್ಲ. ಅನೇಕ ಗೊಂದಲಗಳಿಂದಾಗಿ ಅಧಿಕಾರಿಗಳಿಗೆ ಜನರನ್ನು ಬೆದರಿಸಲು ಬೇಕಾದಷ್ಟು ಅಸ್ತ್ರಗಳು ಸಿಗುತ್ತವೆ. ಇವು ಇನ್ನಷ್ಟು ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವುದಷ್ಟೇ. ಒಳ್ಳೆಯ, ಸರಳ ತೆರಿಗೆ ಎಂದು ಜಾರಿಗೆ ಬಂದ ಕಾನೂನು ಜಟಿಲ, ಕಠಿನ ತೆರಿಗೆಯಾಗಿದ್ದು ಮಾತ್ರ ವಿಪರ್ಯಾಸವೇ.

– ರವಿರಾಜ ಬೈಕಂಪಾಡಿ, ಲೆಕ್ಕಪರಿಶೋಧಕರು

Advertisement

Udayavani is now on Telegram. Click here to join our channel and stay updated with the latest news.

Next