ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಅಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಅಕ್ರಮಗಳನ್ನು ಕಂಡೂ ಕಾಣದಂತಿರುವ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಅನಗತ್ಯ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸಂಸದೆ
ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಸಂಬಂಧ ಶನಿವಾರ ನಂಜನಗೂಡಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್‌ಗೆ ದೂರು ಸಲ್ಲಿಸಿದ ಅವರು, ಬಿಜೆಪಿಯವರನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಕೇಂದ್ರ ಸಚಿವ ಅನಂತಕುಮಾರ್ ಅವರ ಬಹಿರಂಗ ಸಭೆಗೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಯಾವುದೇ ಪ್ರದೇಶದಲ್ಲಿ ಸಭೆ
ನಡೆಸಿದರೂ ಆಕ್ಷೇಪ ಎತ್ತುತ್ತಿಲ್ಲ ಎಂದು ದೂರಿದರು.
ಈಶ್ವರಪ್ಪ ವಿರುದ್ಧ ದೂರು ದಾಖಲು: ಗುಂಡ್ಲುಪೇಟೆ ತಾಲೂಕು ಚಿಕ್ಕಾಟಿ ಗ್ರಾಮದಲ್ಲಿ ಮಾ. 30ರಂದು ಕೆ.ಎಸ್.ಈಶ್ವರಪ್ಪ ಅವರು ಮಾಡಿದ ಪ್ರಚಾರ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ದೂರು ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಸೆಕ್ಟರ್ ಅಧಿಕಾರಿ ಭಾಷಣದ ವಿಡಿಯೋ, ಸೀಡಿ ನೀಡಿದ್ದಾರೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ತಿಳಿಸಿದ್ದಾರೆ.