Advertisement
ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಾಕಿ ಬಿಲ್ಲುಗಳ ಪಾವತಿ ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ಗುತ್ತಿಗೆ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಕೋರಿಕೊಂಡ ಸಂದರ್ಭದಲ್ಲಿ ಈ ಆಶ್ವಾಸನೆಯನ್ನು ನೀಡಿದ್ದಾರೆ.
ಹೊಸ ಸರಕಾರ ರಚನೆಯಾದ ಸಂದರ್ಭದಲ್ಲಿ ಬಾಕಿ ಇರುವ ಬಿಲ್ ಪಾವತಿ ಮತ್ತು ವಿವಿಧ ಇಲಾಖೆಗಳು, ನಿಗಮ ಮತ್ತು ಮಂಡಳಿಗಳು ಹೊಸದಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಸಾಮಾನ್ಯ. ಆದರೆ 15-20 ದಿನಗಳಲ್ಲಿ ಈ ಆದೇಶವನ್ನು ಹಿಂಪಡೆಯಲಾಗುತ್ತದೆ. ಸದ್ಯದ ಸರಕಾರ ರಚನೆಯಾಗಿ ತಿಂಗಳು ಕಳೆದರೂ ಸುಮಾರು 20 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪಾವತಿಗಾಗಿ ಖಜಾನೆಗೆ ಸಲ್ಲಿಸಲಾಗಿದ್ದ ಬಿಲ್‌ಗಳನ್ನೂ ತಡೆ ಹಿಡಿಯಲಾಗಿದೆ. ಆದ್ದರಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಆದೇಶವನ್ನು ಕೂಡಲೇ ಹಿಂಪಡೆದು ಗುತ್ತಿಗೆದಾರರ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ಕಾಮಗಾರಿಗಳನ್ನು ಮುಂದುವರಿಸಲು ಅವಕಾಶ ನೀಡಬೇಕೆಂದು ನಿಯೋಗ ಮನವಿ ಮಾಡಿದೆ.
Related Articles
ಸ್ಥಳೀಯ ಗುತ್ತಿಗೆದಾರರನ್ನು ದೂರವಿಡುವ ಉದ್ದೇಶದಿಂದ ಪ್ಯಾಕೇಜ್ ಪದ್ಧತಿ ಎಂಬ ತಂತ್ರವನ್ನು ಅಧಿಕಾರಶಾಹಿ ಅನುಸರಿಸುತ್ತಿದೆ. ಅನಗತ್ಯ ಅರ್ಹತೆ ಮತ್ತು ನಿಯಮಗಳನ್ನು ಹೇರಿ ಸ್ಥಳೀಯರನ್ನು ದೂರವಿಡಲಾಗುತ್ತಿದೆ. ಕೆಲವೇ ಲಕ್ಷ ರೂ.ಗಳ ಟೆಂಡರ್ ಪಡೆದುಕೊಳ್ಳಲು ಕೂಡ ಸ್ಥಳೀಯ ಗುತ್ತಿಗೆದಾರ ಹೆಣಗಬೇಕಾಗಿದೆ. ಆದ್ದರಿಂದ ಪ್ಯಾಕೇಜ್ ಪದ್ಧತಿ ರದ್ದುಗೊಳಿಸಿ ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆದರೆ ಸ್ಥಳೀಯ ಗುತ್ತಿಗೆದಾರರಿಗೆ ಸಹಾಯಕವಾಗುತ್ತದೆ ಎಂದು ಸಿಎಂ ಗಮನ ಸೆಳೆಯಲಾಗಿದೆ.
Advertisement
ಎಲ್ಲ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ಹಂಚಿಕೆ ಮಾಡಬೇಕು. ಬಾಕಿ ಮೊತ್ತವನ್ನು ಆದ್ಯತೆ ಮತ್ತು ಹಿರಿತನದ ಆಧಾರದ ಮೇಲೆ ಬಿಡುಗಡೆ ಮಾಡಬೇಕು. ಯಾವುದೇ ಪ್ರಯೋಜನವಿಲ್ಲದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು ಮುಚ್ಚಿ ಆಯಾ ಇಲಾಖೆಗಳೇ ನೇರ ಮತ್ತು ಪಾರದರ್ಶಕವಾಗಿ ಟೆಂಡರ್ ಮೂಲಕವೇ ಕಾಮಗಾರಿ ನಡೆಸಿದರೆ ಉತ್ತಮ. ಹಳೆಯ ಕಾಮಗಾರಿಗಳಿಗೆ ಶೇ. 12ರಷ್ಟು ಮಾತ್ರ ಜಿಎಸ್ಟಿ ಕಡಿತ ಮಾಡಬೇಕೆಂದು ಮನವಿ ಮಾಡಲಾಗಿದೆ.
ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಣ್ಣ ನೀರಾವರಿ ಮತ್ತು ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಮಗಾರಿಗಳಿಗೆ ಮಂಜೂರಾಗುವ ಒಟ್ಟು ಅನುದಾನದಲ್ಲಿ ಶೇ.30-40ಕ್ಕಿಂತಲೂ ಹೆಚ್ಚು ಮೊತ್ತ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ ಸರಿದೂಗಿಸಬೇಕಾಗಿತ್ತು. ಭ್ರಷ್ಟಾಚಾರಕ್ಕೆ ದಾಖಲೆಗಳು ಇರುವುದಿಲ್ಲ ಎಂಬ ಅಂಶವನ್ನೇ ಅಸ್ತ್ರವಾಗಿರಿಸಿಕೊಂಡು ಭ್ರಷ್ಟಾಚಾರಕ್ಕೆ ದಾಖಲೆಗಳನ್ನು ಕೇಳುವುದು ವಾಡಿಕೆಯಾಗಿದೆ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ ಕೈಗೊಳ್ಳುವ ವಿಶ್ವಾಸ ಇರುವುದಾಗಿ ನಿಯೋಗದ ಸದಸ್ಯರು ತಿಳಿಸಿದ್ದಾರೆ.
ಪದಾಧಿಕಾರಿಗಳಾದ ಆರ್.ಅಂಬಿಕಾಪತಿ, ಜಿ.ಎಂ.ರವೀಂದ್ರ, ಸಂಕಾಗೌಡ ಶಾನಿ, ನಾಗರಾಜ್, ಆರ್. ಮಂಜುನಾಥ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಸರಕಾರಗಳು ಬದಲಾದಂತೆ ಭ್ರಷ್ಟಾಚಾರ ಏರುಗತಿಯಲ್ಲಿ ಸಾಗುತ್ತಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತದೆ. ಆದರೆ ಅಪಾರ ಅನುಭವವಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಕೊನೆಗಾಣಲಿದೆ ಎಂಬ ವಿಶ್ವಾಸವಿದೆ.– ಡಿ. ಕೆಂಪಯ್ಯ, ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಕಮಿಷನ್ ಕೇಳಿದರೆ ಬಹಿರಂಗಪಡಿಸುವೆ: ಕೆಂಪಣ್ಣ
ಬೆಂಗಳೂರು: ಈಗಿನ ಸರಕಾರದಲ್ಲಿ ಸಚಿವರು, ಶಾಸಕರು ಕಮಿಷನ್ ಕೇಳಿದರೆ ನಾವು ಅದನ್ನು ಬಹಿರಂಗಪಡಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಗುತ್ತಿಗೆದಾರರ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸ ಸರಕಾರದವರು ಈವರೆಗೆ ನಮ್ಮಲ್ಲಿ ಕಮಿಷನ್ ಕೇಳಿಲ್ಲ. ಒಂದು ವೇಳೆ ಕೇಳಿದರೆ ವಿರೋಧಿಸುತ್ತೇವೆ ಎಂದರು. ಬಿಜೆಪಿ ಮೇಲಿನ ಶೇ.40 ಕಮಿಷನ್ ಆರೋಪದ ದಾಖಲೆ ಇನ್ನೂ ಬಿಡುಗಡೆ ಮಾಡದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಅದರ ಕುರಿತಾದ ದಾಖಲೆಗಳನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ ಎಂದು ಡಿ. ಕೆಂಪಣ್ಣ ಹೇಳಿದರು.