ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಅವಧಿ ಮುಗಿದ ರಾಜ್ಯದ ಹಲವು ನಗರ ಸಂಸ್ಥೆ ಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಶುಕ್ರವಾರ ಸರ್ಕಾರ ಈ ಮಾಹಿತಿ ನೀಡಿತು.
ನಗರ ಸ್ಥಳೀಯಸಂಸ್ಥೆಗಳು ಸೇರಿ ಎಲ್ಲಾ ಚುನಾವಣೆಗಳನ್ನು 2021ರ ಡಿಸೆಂಬರ್ ಅಂತ್ಯದವರೆಗೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಸಚಿವ ಸಂಪುಟ ಮೇ 17ರಂದು ಕೈಗೊಂಡಿದ್ದ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ಈ ಬಗ್ಗೆ ಸಮರ್ಥನೆ ನೀಡುವಂತೆ ಕಳೆದ ಬಾರಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರಕ್ಕೆ ಹೇಳಿತ್ತು.
ಇದನ್ನೂ ಓದಿ:ರಂಜನ್ ದೇಶಪ್ರೇಮಕ್ಕೆ ಸಲಾಂ…ಒಂದು ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜ ಸಂಗ್ರಹ; ಏನಿದರ ಉದ್ದೇಶ?
ಅದರಂತೆ, ಶುಕ್ರವಾರ ಅರ್ಜಿ ವಿಚಾರ ಣೆಗೆ ಬಂದಾಗ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ, ಮೇ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿತ್ತು. ಒಂದು ಹಂತದಲ್ಲಿ ದಿನಕ್ಕೆ40 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ಪಾಸಿಟಿವಿಟಿ ದರ ಶೇ.39ರ ಅಸುಪಾಸಿನಲ್ಲಿತ್ತು. ಹಾಗಾಗಿ, ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಚುನಾವಣೆ ನಡೆಸಲು ಆಯೋಗ ಸರ್ಕಾರದ ಆಡಳಿತ ಯಂತ್ರವನ್ನು ಅವಲಂಬಿಸಿದೆ.
ಮೇ ತಿಂಗಳಲ್ಲಿ ಅಧಿಕಾರಿಗಳು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ, ಆಗಿನ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು ಎಂದು ಸರ್ಕಾರದ ನಿಲುವು ಸಮರ್ಥಿಸಿಕೊಂಡರು. ಅಡ್ವೋಕೇಟ್ ಜನರಲ್ ಹೇಳಿಕೆಯನ್ನು ದಾಖಲಿಸಿಕೊಂಡು, ಚುನಾವಣೆ ಮುಂದೂಡುವ ರಾಜ್ಯ ಸರ್ಕಾರದ ತೀರ್ಮಾನ ಒಪ್ಪುವುದು, ಬಿಡುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.