ಈಗಿನ ಅನೇಕ ಯುವಕ-ಯುವತಿಯರು ಮೋಜು-ಮಸ್ತಿಗೆ ಶರಣಾಗಿದ್ದಾರೆ. ಅದರಲ್ಲೂ ಮೊಬೈಲ್ ಕೈಯಲ್ಲಿದ್ದರೆ, ಜಗತ್ತೇ ಸಿಕ್ಕ ಖುಷಿಯಲ್ಲಿ ತೇಲಾಡುತ್ತಾರೆ. ಈಗ ವಾಟ್ಸಾಪ್, ಟ್ವಿಟ್ಟರ್, ಇನ್ಸ್‌ಟಾಗ್ರಾಂ ಮತ್ತು ಫೇಸ್‌ಬುಕ್ ಕಾಲ. ಅದೇ ಲೈಫು ಅಂದುಕೊಂಡ ಅದೆಷ್ಟೋ ಯುವಕರು ತಮ್ಮ ಲೈಫನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡದಲ್ಲಿ ಕೆಲ ಸಿನಿಮಾಗಳು ಬಂದಿವೆಯಾದರೂ, ಆ ಸಾಲಿಗೆ “ಮುದ್ದು ಕೃಷ್ಣ’ ಎಂಬ ಹೊಸ ಚಿತ್ರವೂ ಸೇರಿದೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇನ್ನೇನು ಒಂದಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಅಂದಹಾಗೆ, ಈ ಹಿಂದೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದ ಜನಾರ್ಧನ್ ಈ ಚಿತ್ರದ ನಿರ್ದೇಶಕರು. ಅಷ್ಟೇ ಅಲ್ಲ, ಚಿತ್ರದಲ್ಲಿ ಪತ್ರಕರ್ತನ ಪಾತ್ರ ಮಾಡಿದ್ದಾರೆ. ಅವರೇ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದೊಂದು ಯುವಕರ ಕುರಿತಾದ ಸಿನಿಮಾ.
ಅವರ ತುಂಟಾಟ, ಕೀಟಲೆ ಅವರಿಗೆ ಸದಾ ಸರಿ ಎನಿಸುತ್ತದೆ. ಅದರಲ್ಲಿ ಸಮಸ್ಯೆ ಉಂಟಾದಾಗ ಹತಾಶೆಗೊಳಗಾಗುತ್ತಾರೆ. ಅಂತಹ ಅಂಶಗಳನ್ನಿಟ್ಟುಕೊಂಡು ಮಾಡಿರುವ ಚಿತ್ರವಿದು. ಈಗಾಗಲೇ ಬೆಂಗಳೂರು, ಹೈದರಾಬಾದ್ ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಸಿರುವ ನಿರ್ದೇಶಕರು ಕೊನೆಯ ಹಂತದ ಚಿತ್ರೀಕರಣ ಕೆಲಸವನ್ನು ಬಾಕಿ ಉಳಿಸಿಕೊಂಡಿದೆ. ಚಿತ್ರದಲ್ಲಿ ಪವನ್‌ಶೆಟ್ಟಿ ಎರಡನೇ ನಾಯಕರಾಗಿ ನಟಿಸಿದ್ದಾರೆ.
ಅವರಿಲ್ಲಿ ಫೇಸ್‌ಬುಕ್ ಗೀಳಿಗೆ ಬಿದ್ದು, ಅದರಿಂದ ಸಮಯ, ಬದುಕು ಎಲ್ಲವನ್ನೂ ಕಳೆದುಕೊಂಡೆ ಎಂಬ ಫೀಲ್ ಆದಾಗ, ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬ ಪಾತ್ರ ನಿರ್ವಹಿಸಿದ್ದಾರೆ. ಇನ್ನು, ಈಗಾಗಲೇ ಹಲವು ಕಿರುತೆರೆಯ ಧಾರಾವಾಹಿ ಮತ್ತು ಜಾರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಹಾರ ಮೂಲದ ಶ್ವೇತಾ ಚಿತ್ರದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಲಕ್ಕಿಶಂಕರ್, ಭವ್ಯಾ, ಅನನ್ಯಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇಂದ್ರಸೇನ ಸಂಗೀತವಿದೆ. ಆರವ್ ಹಾಗು ಸಿದ್ಧಾರ್ಥ ಬುಲ್ಲರಾಯ್ ಛಾಯಾಗ್ರಹಣವಿದೆ. ದೇವ್ ಸಂಭಾಷಣೆ ಬರೆದರೆ, ರಮೇಶ್ ಸ್ಟಂಟ್ಸ್ ಮಾಡಿದ್ದಾರೆ. ಕೇರಳ ಮೂಲದ ರಂಜಿತ್‌ಲೋಪಜ್ ಹಾಗು ಸಾಬು ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.