ಸತತ ಲಾಕ್ ಡೌನ್‌ನಿಂದಾಗಿ ಬಣ್ಣ ಕಳೆದುಕೊಂಡಿದ್ದ ಕಿರುತೆರೆ ಈಗ ಮತ್ತೆ ಕಲರ‍್ಸ್‌ಫುಲ್ ಆಗಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದೆ. ಈಗಾಗಲೇ ಧಾರಾವಾಹಿಗಳ ಚಿತ್ರೀಕರಣಗಳು ಆರಂಭವಾಗಿವೆ. ತಮ್ಮ ಪ್ರೇಕ್ಷಕರಿಗೆ ಹೊಸತನ್ನು ಉಣಬಡಿಸಲು ವಾಹಿನಿಗಳು ಸಿದ್ಧವಾಗಿವೆ. ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ಕಲರ‍್ಸ್ ಕನ್ನಡ ಕೂಡಾ ಅಭಿಮಾನಿಗಳಿಗೆ ಹೊಸದನ್ನು ನೀಡಲು ಸಂಪೂರ್ಣ ಸಿದ್ಧವಾಗಿದೆ. ಜೂನ್ ಒಂದನೇ ತಾರೀಖೀನಿಂದ ಧಾರಾವಾಹಿಗಳು ಮತ್ತೆ ಪ್ರಸಾರವಾಗಲಿವೆ. ಬದಲಾದ ಪರಿಸ್ಥಿತಿಯಲ್ಲಿ ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ.
ಕ್ಯಾಮರಾ, ಟ್ರಾಲಿ, ಲೈಟುಗಳ ಜೊತೆಯಲ್ಲಿ ಮಾಸ್ಕಾ, ಸ್ಯಾನಿಟೈಸರ್, ಸೋಪುಗಳನ್ನು ಸಹ ಹರಡಿಕೊಂಡು ಸದ್ದಿಲ್ಲದೆ ಆಕ್ಷನ್ ಶುರುವಾಗಿದೆ. ಕಲರ‍್ಸ್ಸ್ ಕನ್ನಡ ವಾಹಿನಿಯಂತೂ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡು ಹೊಸ ಬಣ್ಣದಲ್ಲಿ ಪ್ರೇಕ್ಷಕರೆದುರು ಬರಲು ಸಿದ್ಧವಾಗಿದೆ. ನಿರಂತರವಾಗಿ ಓಡುತ್ತಲೇ ಇರುವವರು, ಮಳೆ ಸುರಿದಾಗ ವಿಧಿಯಿಲ್ಲದೆ ಮರದಡಿ ನಿಲ್ಲುತ್ತೇವಲ್ಲ, ಹಾಗೆ ಈ ಲಾಕ್‌ಡೌನಿನ ವಿರಾಮವೂ ಎಲ್ಲರಿಗೂ ತುಸು ನಿಂತು ಯೋಚಿಸಿ ಹೊಸ ಹುರುಪಿನಲ್ಲಿ ಮುಂದೆ ಸಾಗುವ ಅವಕಾಶವೊಂದನ್ನು ನೀಡಿದೆ.
ಹಾಗಾಗಿ ಇದು ಬರೀ ಮುಂದುವರಿಕೆಯಲ್ಲ, ಹೊಸ ಪಯಣ ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರಿನ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್. ಜೂನ್ ಒಂದರಿಂದ ನೀವು ನೋಡಲಿರುವ ಕಲರ‍್ಸ್ಸ್ ಕನ್ನಡ ಹೊಸ ಬಣ್ಣ ಹೊಸ ರೂಪದಲ್ಲಿ ಇರಲಿದೆ. ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ! ಎನ್ನುವುದು ಕಲರ‍್ಸ್ಸ್ ಕನ್ನಡ ಚಾನೆಲ್ಲಿನ ಹೊಸ ಘೋಷವಾಕ್ಯ. ಈ ಹೊಸ ಆರಂಭದ ಸಂಭ್ರಮವನ್ನು ವೀಕ್ಷಕರಿಗೆ ತಿಳಿಸಲು ಚಾನೆಲ್ ಈಗಾಗಲೇ ಹಲವು ಚೆಂದದ ಜಾಹೀರಾತುಗಳನ್ನು ರೂಪಿಸಿದೆ. ನಟನಟಿಯರೆಲ್ಲಾ ಬಣ್ಣ ಬಣ್ಣದ ಮಾಸ್ಕಾಗಳನ್ನು ಧರಿಸಿ ನಗುಮುಖದಿಂದ ಓಡಾಡುತ್ತಿರುವ ಈ ಜಾಹೀರಾತುಗಳು ವೀಕ್ಷಕರ ಗಮನ ಸೆಳೆದಿವೆ.
ಈಗಾಗಲೇ ಕಲರ‍್ಸ್ ಕನ್ನಡ ವಾಹಿನಿಯ ಧಾರಾವಾಹಿಗಳು ಚಿತ್ರೀಕರಣ ಆರಂಭಿಸಿವೆ. ಕೊರೋನಾ ನಂತರದ ಶೂಟಿಂಗ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹೊಸ ಅನುಭವ ನೀಡುತ್ತಿದೆ. ಕಷ್ಟ ಸುಖ ಅನ್ನೋಕಿಂತ ಇದೊಂದು ಚಾಲೆಂಜ್ ಎನ್ನುತ್ತಾರೆ ಮಿಥುನರಾಶಿ ಧಾರಾವಾಹಿಯ ನಿರ್ಮಾಪಕ ನರಹರಿ. ನಿರ್ದೇಶಕ ರಾಮ್‌ಜಿಯವರು ಕೂಡಾ ಎರಡೆಡು ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದಾರೆ. ರಾಮ್ ಜೀಯವರು ಗೀತಾ ಹಾಗೂ ಮಂಗಳಗೌರಿ ಮದುವೆ ಎರಡೂ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕ. ಕೊರೋನಾ ಜತೆ ಸಂಸಾರ ಮಾಡೋದು ತುಂಬಾ ಕಷ್ಟ,
ಎಲ್ಲಾ ಸೆಟ್ಟಲ್ಲೂ ನರ್ಸ್‌ಗಳನ್ನು ಇರಿಸಿದ್ದೇವೆ. ಮಾಸ್ಕಾ ಉಸಿರುಗಟ್ಟಿಸುತ್ತೆ, ಗ್ಲೌಸು ಬೆವರು ಹರಿಸುತ್ತೆ, ಬೆವರಿನಿಂದಾಗಿ ಮೇಕಪ್ಪು ನಿಲ್ತಾ ಇಲ್ಲ. ಏನು ಮಾಡೋದು? ಅಂತಾರೆ ಅವರು. ನಟ ನಟಿಯರ ಅನುಭವಗಳು ಇನ್ನೊಂದು ಥರ. ಎರಡು ತಿಂಗಳಿಂದ ಮೀರಾಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೆ, ಈಗ ಶೂಟಿಂಗ್ ಶುರುವಾಗಿರೋದರಿಂದ ಥ್ರಿಲ್ ಆಗಿದೀನಿ ಅಂತಾರೆ ನಮ್ಮನೆ ಯುವರಾಣಿಯ ಮೀರಾ ಪಾತ್ರಧಾರಿ ಅಂಕಿತಾ. ಸದ್ಯ ಕಿರುತೆರೆ ಪ್ರೇಕ್ಷಕರು ಕೂಡಾ ಕಲರ‍್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ, ಹೊಸ ಟ್ವಿಸ್ಟ್‌ಗಳಿಗಾಗಿ ಎದುರು ನೋಡುತ್ತಿರೋದಂತೂ ಸತ್ಯ.