ಒಂಟಿತನದ ಕಣಿವೆಯೊಳಗೆ ನಡೆದು ಹೋಗುವ ಸುಖವೇ ಬೇರೆ. ಅದರೆ ಎಷ್ಟು ದೂರದವರೆಗೆ ಎನ್ನುವುದು ಬಹಳ ಮುಖ್ಯ. ಅದರ ಜತೆಗೆ ಒಬ್ಬರೇ ಅಥವಾ ಜತೆಗೆ ಯಾರಾದರೂ ಇದ್ದಾರಾ ಎಂಬುದೂ ಅಷ್ಟೇ ಮುಖ್ಯ. ಎಂದಾದರೂ ಕಣಿವೆಯೊಳಗೆ ನಡೆದು ಹೋಗಿದ್ದೀರಾ? ಇಲ್ಲವಾದರೆ ಒಮ್ಮೆ ಹೋಗಿ. ತುಸು ದೂರಕ್ಕೆ ಪರವಾಗಿಲ್ಲ, ಬಹಳ ದೂರ ಸಾಗುವಾಗ ಸಣ್ಣದೊಂದು ಏಕಾಂತ ಕಾಡಿಬಿಡಬಹುದು. ಆಗ ಏನೂ ಮಾಡಬೇಡಿ. ಸುತ್ತಲಿನ ಪರಿಸರವನ್ನೆಲ್ಲ ಗಮನಿಸುತ್ತಾ ಹೋಗಿ. ಅವೆಲ್ಲವೂ ನಿಮ್ಮೊಡನೆ ಸಾಗುತ್ತವೆ.
ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ ನಮಗೆ ಒಂಟಿತನದ ಬದುಕು ಬಹಳ ಖುಷಿ. ಕಾರಣವಿಷ್ಟೇ, ಅದರಲ್ಲಿ ಜವಾಬ್ದಾರಿ, ಹೊಣೆಗಾರಿಕೆ, ಸವಾಲುಗಳು ಇರುವುದಿಲ್ಲ ಎಂದುಕೊಂಡಿರುತ್ತೇವೆ. ಆದ್ದರಿಂದಲೇ ನಮ್ಮಷ್ಟಕ್ಕೇ ನಾವು ಇದ್ದು ಬಿಟ್ಟರೆ ಖುಷಿಯಲ್ಲವೇ? ಯಾವ ಗೊಡವೆಯೂ ಇಲ್ಲ. ಅದಕ್ಕೇ ಒಂಟಿತನವನ್ನು ಹೆಚ್ಚು ಇಷ್ಟಪಡುತ್ತೇವೆ. ಆದರೆ ಆ ಒಂಟಿತನ ಒಂದಿಷ್ಟು ದೂರ ನಡೆದುಹೋಗುವುದಕ್ಕಷ್ಟೇ ಹೊರತು ಇಡೀ ಬದುಕಿಗಲ್ಲ ಎಂದೆನಿಸುವುದಿಲ್ಲವೇ?ಕೆಲವರಿಗೆ ಆ ಒಂಟಿತನವೇ ಖುಷಿ ಕೊಡಬಹುದು ಬದುಕಿ ನುದ್ದಕ್ಕೂ. ಇಲ್ಲವೆಂದು ಖಂಡಿತಾ ಹೇಳಲಾರೆ. ಇಲ್ಲಿ ಒಂಟಿತನವೆಂದರೆ ನಿಸರ್ಗ
ದಿಂದ ಹೊರತಾದುದು ಎಂದಲ್ಲ. ನನ್ನ ಊರಿನವ ರೊಬ್ಬರಿದ್ದರು. ಅವರು ಇಡೀ ಬದುಕು ಕಳೆದದ್ದು ತಮ್ಮ ಮನೆಯಲ್ಲಿ ಸಾಕಿದ್ದ ಸಾಕು ಪ್ರಾಣಿ ಗಳೊಂದಿಗೆ. ಅದೇ ಅವರ ಬದುಕು. ಇದನ್ನು ಖಂಡಿತಾ ಒಂಟಿತನವೆನ್ನುವುದಿಲ್ಲ. ಕೆಲವರ ಒಂಟಿತನ ಸಂಪೂರ್ಣ ಬದುಕಿನಿಂದ ವಿಮುಖವಾಗಿರುತ್ತದೆ. ಯಾವುದೂ ಬೇಡ ಎನ್ನುತ್ತಲೇ ಒಳಗೊಳಗೇ ತನಗೆ ಅದು ಸಿಗಲಿಲ್ಲ ಎಂಬ ಸಣ್ಣ ದುಃಖದ ಛಾಯೆಯಿಂದ ಜರ್ಝರಿತಕ್ಕೊಳಗಾಗುತ್ತಿರುತ್ತಾರೆ. ಹಾಗೆಂದು ಸಣ್ಣ ಬೇಲಿಯನ್ನು ಕಿತ್ತು ಹಾಕಿ ಹೊರಬಂದು ಬೇಕಿದ್ದನ್ನು ಪಡೆಯುವಂಥ ಮನಸ್ಸೂ ಇರುವುದಿಲ್ಲ. ಕ್ರಮೇಣ ಅದೇ ಒಂದು ಮೂಲೆಗೆ ಸೇರಿಸಿ ಬಿಡುವುದುಂಟು. ಅದೂ ಸೂರ್ಯನ ಬೆಳಕೇ ಬೀಳದ ಮೂಲೆ. ಕತ್ತಲೆಯಲ್ಲಿ ಏನೂ ಕಾಣದು, ಬದುಕೂ ಸಹ.
ಒಂಟಿತನಕ್ಕೆ ನಾವೊಂದು ಹೊಸ ಹೆಸರಿಡೋಣ. ಬದುಕನ್ನು ಆಚರಿಸಿಕೊಳ್ಳುವ ಬಗೆಯನ್ನು ಕಲಿ ಯೋಣ. ಅದೆಂದರೆ ಕಣಿವೆ ಯೊಳಗೆ ನಡೆದು ಹೋಗುತ್ತಾ ಸುತ್ತಲನ್ನೂ ಒಳಗೊಳ್ಳು ವುದು. ಆಗ ಹೊಸ ರೂಪ ಕೊಟ್ಟಂತೂ ಆಗಲಿದೆ.
ಬನ್ನಿ ಈಗ ನಡೆದು ಹೋಗೋಣ ಕಣಿವೆಯಲ್ಲಿ. ಅಲ್ಲೇ ಮರದ ಮೇಲಿದ್ದ ಹಕ್ಕಿಯೊಂದು ಸದ್ದು ಮಾಡುತ್ತದೆ ನಮ್ಮ¾ನ್ನು ಕಂಡು. ಒಮ್ಮೆ ತಲೆ ಎತ್ತಿ ನೋಡೋಣ, ಅದಕ್ಕೂ ಖುಷಿಯಾಗುತ್ತದೆ. ಪಕ್ಕದಲ್ಲೇ ಇದ್ದ ಗಿಡವೊಂದು ನಮ್ಮ ಮುಖಕ್ಕೆ ಅದರ ಹೂವಿನ ಬಣ್ಣವನ್ನು ರಾಚುತ್ತದೆ, ಮುಖವಗಲಿಸೋಣ, ಸುಂದರ ಹಳದಿ ಮೆತ್ತಿಕೊಳ್ಳಲಿ. ಪ್ರತಿ ಹೆಜ್ಜೆ ಇಡುವಾಗಲೂ ಮಣ್ಣಿನ ಕಣ ನಮ್ಮನ್ನು ಮಾತನಾಡಿಸುತ್ತಲೇ ಇರುತ್ತದೆ. ಅದರ ಬಣ್ಣ ಕಂಡು ಮೆಚ್ಚೋಣ, ಅಲ್ಲಿಗೆ ಅದನ್ನು ಮಾತನಾಡಿಸಿದಂತೆ.
ಒಂದಿಷ್ಟು ದೂರ ಹೋಗುವಾಗ ತ್ರಾಸವಾಗಬಹುದು. ಹತ್ತಿರದ ಕಲ್ಲಿನ ಮೇಲೆ ಕುಳಿತುಕೊಳ್ಳೋಣ. ಆಗ ಆ ಕಲ್ಲಿಗೂ ಉಪಕಾರ ಮಾಡಿದ ಭಾವನೆ. ಅದರ ಬದುಕೂ ಧನ್ಯ. ತ್ರಾಸ ಕಳೆದು ಮತ್ತೆ ಪಯಣ ಶುರು ಮಾಡಿದಾಗ ಸಣ್ಣದೊಂದು ಕೊಳ ಸಿಗಬಹುದು. ಬೊಗಸೆಯೊಡ್ಡಿ ನೀರು ತೆಗೆದು ಕುಡಿಯೋಣ. ಆಗ ಆ ಕೊಳಕ್ಕೆ ಇಷ್ಟೂ ಹೊತ್ತು ಸಂಗ್ರಹಿಸಿಟ್ಟುಕೊಂಡದ್ದು ಸಾರ್ಥಕ ಎನಿಸಿಬಿಡುತ್ತದೆ. ಅಲ್ಲೇ ಪುಟ್ಟ ಮೀನುಗಳೂ ನಮ್ಮನ್ನು ಕಂಡು ಪ್ರತಿಕ್ರಿಯಿಸಬಹುದು. ನಮ್ಮ ಖುಷಿಯನ್ನು ಹಂಚಿಕೊಳ್ಳೋಣ. ಇಷ್ಟೆಲ್ಲ ಮುಗಿಯುವಾಗ ಎದುರು ದೊಡ್ಡದಾದ ಬೆಟ್ಟ ನಮ್ಮನ್ನು ನೋಡುತ್ತಲೇ ಇರುತ್ತದೆ. ಅದರ ಅಗಾಧತೆಗೆ ಕೈ ಮುಗಿದು ಮತ್ತೆ ಬೆಳ್ಳಂಬೆಳಕಿಗೆ ಬರೋಣ.
ಒಂದೆಡೆ ಕುಳಿತು ಲೆಕ್ಕ ಹಾಕೋಣ. ನಾವು ಎಷ್ಟು ಬದುಕನ್ನು ಕಂಡು ಬಂದಿದ್ದೇವೆ ಎಂದು. ಎಲ್ಲವನ್ನೂ ತೂಗಿ ಅಳೆದು ಲೆಕ್ಕ ಹಾಕಿದಾಗ ನಮ್ಮ ಸಾಲವೇ ಹೆಚ್ಚಿರುತ್ತದೆ. ಪರವಾಗಿಲ್ಲ, ಪ್ರಕೃತಿಯೆಂದೂ ಬಡ್ಡಿಯೂ ಹಾಕುವುದಿಲ್ಲ, ಚಕ್ರಬಡ್ಡಿಯೂ ಕೇಳುವುದಿಲ್ಲ. ನಾವು ಅದರ ಬಣ್ಣಗಳನ್ನು ತುಂಬಿಕೊಳ್ಳಬೇಕಷ್ಟೇ.
– ಅಸುಂದರ