ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೇಷ್ಮೆಗೂಡಿನ ಧಾರಣೆ ಮತ್ತೆ ಪಾತಾಳಕ್ಕೆ ಕುಸಿದಿದ್ದು, ಮೊದಲೇ ಲಾಕ್‌ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ರೇಷ್ಮೆ ಬೆಳೆಗಾರರಿಗೆ ಬೆಲೆ ಕುಸಿತದ ಸರಣಿ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಸರ್ಕಾರ ಘೋಷಿಸಿರುವ ಪ್ರೋತ್ಸಾಹದಾಯಕ ಬೆಲೆ ಘೋಷಣೆಗೆ ಸೀಮಿತವಾಗಿದೆ.
ಖರೀದಿದಾರರಿಲ್ಲ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡ ಬಳಿಕ ರೇಷ್ಮೆ ಕೃಷಿ ಹೆಚ್ಚಾಗಿದ್ದು, 14 ಸಾವಿರ ಹೆಕ್ಟೇರ್ ಇದ್ದ ರೇಷ್ಮೆ ಕೃಷಿ ಈಗ 20 ಸಾವಿರ ಹೆಕ್ಟೇರ್‌ಗೆ ವಿಸ್ತರಣೆಗೊಂಡಿದೆ. ಪ್ರತಿ ದಿನ ಸುಮಾರು 40 ರಿಂದ 50 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದರೂ ಖರೀದಿದಾರರು ಇಲ್ಲದೇ ಬೆಲೆ ಕುಸಿತವಾಗಿರುವುದು ರೇಷ್ಮೆ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.
ಬಂಡವಾಳ ಕೈ ಸೇರದಂತಾಗಿದೆ: ಹಲವು ದಿನಗಳಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ರೇಷ್ಮೆ ಧಾರಣೆ ತೀವ್ರಗತಿಯಲ್ಲಿ ಕುಸಿಯ ತೊಡಗಿದ್ದು, ಕೆ.ಜಿ.ರೇಷ್ಮೆಗೂಡಿನ ಬೆಲೆ ಕನಿಷ್ಠ 130, 140ಕ್ಕೆ ಮಾರಾಟಗೊಂಡರೆ ಗರಿಷ್ಠ ಕೇವಲ 220, 240, 250ಕ್ಕೆ ಕೊನೆಗೊಳ್ಳುತ್ತಿದೆ. ಈಗಾಗಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಹಾಕಿದ ಬಂಡವಾಳ ಕೂಡ ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೇಷ್ಮೆಗೂಡು ತರುವ ರೈತರು ಮಾರುಕಟ್ಟೆಯಲ್ಲಿ ಖರೀದಿದಾರರಿಗೆ (ರೀಲರ್) ಎದುರು ನೋಡುವಂತಾಗಿದೆ. ಹಲವು ತಿಂಗಳ ಹಿಂದೆ ರೇಷ್ಮೆಗೂಡು ಬೆಲೆ 500ರ ಗಡಿ ದಾಟಿತ್ತು. ಆದರೆ ಲಾಕ್‌ಡೌನ್ ಘೋಷಣೆಗೊಂಡ ದಿನದಿಂದ ಬೆಲೆ ಕುಸಿಯುತ್ತಲೇ ಇರುವುದು ರೇಷ್ಮೆ ಬೆಳೆಗಾರರನ್ನು ಚಿಂತೆಗೀಡು ಮಾಡಿದ್ದು, ಇತ್ತೀಚೆಗೆ ರೈತ ಸಂಘಟನೆಗಳು ರೇಷ್ಮೆ ಕೃಷಿ ಸಚಿವರನ್ನು ಭೇಟಿ ಮಾಡಿ ಪ್ರೋತ್ಸಾದಾಯಕ ಬೆಲೆ ನೀಡುವಂತೆ ಆಗ್ರಹಿಸಿದ್ದನ್ನು ಸ್ಮರಿಸಬಹುದು.
ಸರ್ಕಾರ ರೇಷ್ಮೆಗೂಡಿನ ಬೆಲೆ ಕುಸಿತಗೊಂಡಾಗ ರೈತರಿಗೆ ಬೆಂಬಲ ಬೆಲೆ ನೀಡಬೇಕೆಂದು ಈ ಹಿಂದೆಯೇ ಬಸವರಾಜ್‌ರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಇದುವರೆಗೂ ಅದು ಅನುಷ್ಠಾನಗೊಂಡಿಲ್ಲ.
–ಯಲುವಹಳ್ಳಿ ಸೊಣ್ಣೇಗೌಡ, ಸಂಚಾಲಕರು, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ
ಕೋವಿಡ್ ಪರಿಣಾಮ ರೇಷ್ಮೆಗೂಡಿನ ಧಾರಣೆ ಕುಸಿತವಾದರೂ ಸರ್ಕಾರ ಪ್ರೋತ್ಸಾಹ ದಾಯಕ ಬೆಲೆ ಘೋಷಣೆ ಮಾಡಿದ್ದು, ಕಳೆದ ಏಪ್ರೀಲ್ ತಿಂಗಳಿಂದ ರೇಷ್ಮೆ ಬೆಳೆಗಾರರಿಗೆ ಕೆ.ಜಿ.ಗೆ 40 ರಿಂದ 50 ರೂ. ಬೆಲೆ ನೀಡಲು ನಿರ್ಧರಿಸಲಾಗಿದೆ.
– ನರಸಿಂಹಮೂರ್ತಿ, ಸಹಾಯಕ ಉಪ ನಿರ್ದೇಶಕರು, ರೇಷ್ಮೆ ಇಲಾಖೆ
-ಕಾಗತಿ ನಾಗರಾಜಪ್ಪ