Advertisement

ಎರಡು ತಿಂಗಳಲ್ಲಿ ರಾಜಸ್ವ ಸಂಗ್ರಹ ಕುಸಿತ

06:10 AM Jul 23, 2018 | Team Udayavani |

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಮತ್ತು ಹೊಸ ಸರ್ಕಾರ ರಚನೆ ಕಾರಣದಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಅಬಕಾರಿ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳಲ್ಲಿ ತೆರಿಗೆ ಬೆಳವಣಿಗೆ ಮೈನಸ್‌ ಹಂತದಲ್ಲಿದೆ. ಆದರೆ, ಜೂನ್‌ ತಿಂಗಳಲ್ಲಿ ಸುಧಾರಣೆ ಕಂಡು ಬಂದಿದ್ದು, ಜುಲೈನಿಂದ ಯಥಾಸ್ಥಿತಿ ತಲುಪಿದೆ.ಆದರೆ, ಮೊದಲ ಎರಡು ತಿಂಗಳಲ್ಲಿ ಆಗಿರುವ ಕುಸಿತವನ್ನು ಸರಿಹೊಂದಿಸಲು ತೆರಿಗೆ ಸಂಗ್ರಹ ತೀವ್ರಗೊಳಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು.

Advertisement

ಬೆಂಗಳೂರು: ಕೇಂದ್ರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಾಕಿ ಮಧ್ಯೆಯೂ 2017-18ನೇ ಸಾಲಿನ ಆರಂಭದಲ್ಲಿ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ರಾಜ್ಯ ಸರ್ಕಾರ, 2018-19ನೇ ಸಾಲಿನ ಮೊದಲ ಎರಡು ತಿಂಗಳಲ್ಲಿ ರಾಜಸ್ವ ಸಂಗ್ರಹದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ.

ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರ್ಷಿಕ ತೆರಿಗೆ ಬೆಳವಣಿಗೆ ಪ್ರಮಾಣ ಮೈನಸ್‌ ತಲುಪಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ವಿಧಾನಸಭೆ ಚುನಾವಣೆ, ಹೊಸ ಸರ್ಕಾರ ರಚನೆ ಮತ್ತಿತರ ಕಾರಣಗಳಿಂದ ತೆರಿಗೆ ಸಂಗ್ರಹದಲ್ಲಿ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಆರಂಭದ ತಿಂಗಳಲ್ಲಿ ಆಗಿರುವ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ. ಹೀಗಾಗಿ ರಾಜ್ಯದ ಆರ್ಥಿಕ ಸಂಕಷ್ಟ ಇನ್ನೂ ಎರಡು ತಿಂಗಳು ಮುಂದುವರಿಯಲಿದೆ ಎನ್ನುತ್ತಾರೆ ಹಣಕಾಸು ಇಲಾಖೆಯ ಅಧಿಕಾರಿಗಳು.

2018ರ ಮೇ ಅಂತ್ಯದವರೆಗೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಸಹಾಯಧನ ಸೇರಿದಂತೆ ರಾಜ್ಯದ ಒಟ್ಟಾರೆ ರಾಜಸ್ವ ಸ್ವೀಕೃತಿ 2017-18ನೇ ಸಾಲಿಗೆ ಹೋಲಿಸಿದರೆ 343 ಕೋಟಿಗೆ ಏರಿಕೆಯಾಗಿದೆ. ಆದರೆ, ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 1031 ಕೋಟಿ ರೂ. ಕಡಿಮೆಯಾಗಿದೆ. 2017ರ ಮೇ ಅಂತ್ಯಕ್ಕೆ 4922 ಕೋಟಿ ರೂ. ಸ್ವಂತ ತೆರಿಗೆ ಸಂಗ್ರಹವಾಗಿದ್ದರೆ, 2018ರ ಮೇ ಅಂತ್ಯಕ್ಕೆ 13,891 ಕೋಟಿ ರೂ.ಮಾತ್ರ ಸಂಗ್ರಹವಾಗಿದೆ. ಜೂನ್‌ ತಿಂಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮೈನಸ್‌ ತಲುಪಿದ ತೆರಿಗೆ ಬೆಳವಣಿಗೆ: ಪ್ರತಿ ವರ್ಷ ರಾಜಸ್ವ ಸಂಗ್ರಹದಲ್ಲಿ ಏರಿಕೆಯಾಗುತ್ತದೆ. ಹೀಗಾಗಿ ತೆರಿಗೆ ಸಂಗ್ರಹದ ಬೆಳವಣಿಗೆ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ.

2014-15ರಲ್ಲಿ ಈ ಪ್ರಮಾಣ ಶೇ.14.2 ಇದ್ದರೆ, 2014ರ ಮೇ ನಲ್ಲಿ ಶೇ.13.6, 2015ರ ಮೇನಲ್ಲಿ ಶೇ.11, 2016ರ ಮೇ ನಲ್ಲಿ ಶೇ.9.2 ಮತ್ತು 2017ರ ಮೇ ತಿಂಗಳಲ್ಲಿ ಶೇ.15ರಷ್ಟಿತ್ತು. ಆದರೆ, ಈ ವರ್ಷ ತೆರಿಗೆ ಸಂಗ್ರಹ ಪ್ರಮಾಣ ಕುಸಿದಿರುವುದರಿಂದ ತೆರಿಗೆ ಬೆಳವಣಿಗೆ ಪ್ರಮಾಣ “ಮೈನಸ್‌’ ಸ್ಥಿತಿಗೆ ತಲುಪಿದೆ. ಮೇ ಅಂತ್ಯಕ್ಕೆ ತೆರಿಗೆ ಸಂಗ್ರಹದ ಬೆಳವಣಿಗೆ ಪ್ರಮಾಣ ಶೇ. -6.9 ಇದೆ. ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆ ಪ್ರಮಾಣ ಮೈನಸ್‌ ತಲುಪಿದ್ದು ಇದೇ ಮೊದಲು.

2017ರ ಮೇ ಅಂತ್ಯಕ್ಕೆ 14,922 ಕೋಟಿ ರೂ. ಸಂಗ್ರಹವಾಗಿದ್ದು, ಇದು ಆಯವ್ಯಯದ (89,957 ಕೋಟಿ ರೂ.)ಶೇ.16.6ರಷ್ಟಿತ್ತು. ಆದರೆ, 2019ರ ಮೇ ಅಂತ್ಯಕ್ಕೆ 13,891 ಕೋಟಿ ರೂ. ಸಂಗ್ರಹವಾಗಿದೆ. ಇದು ಆಯವ್ಯಯದ (92,644 ಕೋಟಿ ರೂ.) ಶೇ.15ರಷ್ಟಿದೆ.

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next