Advertisement

ಕುಸಿಯುವ ಭೀತಿಯಲ್ಲಿ ಪ್ರಯಾಣಿಕರ ತಂಗುದಾಣ

01:05 AM May 10, 2019 | mahesh |

ಕಡಬ: ತಾಲೂಕು ಕೇಂದ್ರ ಕಡಬ ಪೇಟೆಯಲ್ಲಿರುವ ಪಂಚಾಯತ್‌ ಅಧೀನದ 2 ಪ್ರಯಾಣಿಕರ ತಂಗುದಾಣದ ಪೈಕಿ ದೈವಗಳ ಮಾಡದ ಬಳಿ ಇರುವ ತಂಗುದಾಣ ಸಂಪೂರ್ಣವಾಗಿ ಶಿಥಿಲಗೊಂಡು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದೆ.
ಮಳೆಗಾಲಕ್ಕೆ ಮೊದಲು ಈ ತಂಗು ದಾಣವನ್ನು ದುರಸ್ತಿಪಡಿಸದಿದ್ದಲ್ಲಿ ತಂಗು ದಾಣದ ಛಾವಣಿ ಕುಸಿದು ಪ್ರಯಾಣಿ ಕರಿಗೆ ಅಪಾಯ ಉಂಟಾಗುವುದರಲ್ಲಿ ಸಂಶಯವಿಲ್ಲ.

Advertisement

ಗ್ರಾ.ಪಂ.ಗೆ ಸಾರ್ವಜನಿಕರ ಆಗ್ರಹ
ಕಡಬ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತ ಬಸ್‌ ತಂಗುದಾಣವಿಲ್ಲ. ಕೆಎಸ್ಸಾರ್ಟಿಸಿ ವತಿಯಿಂದ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿದೆಯಾದರೂ ಜಮೀನಿನ ಸಮಸ್ಯೆಯಿಂದಾಗಿ ಅದೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದು ಸಂಶಯ. ಇದೀಗ ಇರುವ ಪ್ರಯಾಣಿಕರ ತಂಗುದಾಣವೂ ಕುಸಿದು ಬೀಳುವ ಹಂತದಲ್ಲಿದೆ. ತಂಗುದಾಣದ ಛಾವಣಿಯ ಮರದ ಪಕ್ಕಾಸು ಹಾಗೂ ರೀಪುಗಳು ಶಿಥಿಲಗೊಂಡು ಮುರಿದು ಹೋಗಿವೆ. ಅಲ್ಲಲ್ಲಿ ಹೆಂಚುಗಳು ಕೆಳಕ್ಕೆ ಬಿದ್ದು ಆಕಾಶ ಕಾಣಿಸುತ್ತಿದೆ. ಪ್ರಸ್ತುತ ಸಾರ್ವಜನಿಕರು ಇದೇ ತಂಗುದಾಣವನ್ನು ಬಳಸುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಆದುದರಿಂದ ಕೂಡಲೇ ಪಂಚಾಯತ್‌ ಆಡಳಿತ ಈ ಕುರಿತು ಗಮನಹರಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕ್ರಮ ಕೈಗೊಳ್ಳಲಾಗುವುದು

ಚುನಾವಣ ನೀತಿ ಸಂಹಿತೆ ಕಳೆದ ಕೂಡಲೇ ಪಂಚಾಯತ್‌ ಸಭೆಯಲ್ಲಿ ಚರ್ಚಿಸಿ ಕ್ರಿಯಾ ಯೋಜನೆ ಮಾಡಿ ತಂಗುದಾಣದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ತಂಗುದಾಣದ ಗಾರೆ, ಛಾವಣಿ ಇತ್ಯಾದಿ ದುರಸ್ತಿಗೆ ಕನಿಷ್ಠ 50 ಸಾವಿರ ರೂ. ಬೇಕಾಗಬಹುದು. ಅದು ಟೆಂಡರ್‌ ಪ್ರಕ್ರಿಯೆಯ ಮೂಲಕವೇ ಆಗಬೇಕಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಪಂಚಾಯತ್‌

ದುರಸ್ತಿಗೆ ಕ್ರಮ ಕೈಗೊಳ್ಳಿ

ಶಿಥಿಲಗೊಂಡಿರುವ ಈ ಪ್ರಯಾಣಿಕರ ತಂಗುದಾಣದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಸಾರ್ವಜನಿಕರು ದಿನಂಪ್ರತಿ ಬಂದು ಬಸ್‌ಗಾಗಿ ಕಾಯುತ್ತಾರೆ. ಛಾವಣಿ ಶಿಥಿಲಗೊಂಡಿರುವುದರಿಂದ ಮೇಲಿನಿಂದ ಮರದ ಪಕ್ಕಾಸು, ರೀಪು ಅಥವಾ ಹೆಂಚು ಕೆಳಕ್ಕೆ ಬಿದ್ದರೆ ತಂಗುದಾಣದೊಳಗೆ ಕುಳಿತವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಕೂಡಲೇ ತಂಗುದಾಣದ ದುರಸ್ತಿಗೆ ಪಂಚಾಯತ್‌ ಕ್ರಮ ಕೈಗೊಳ್ಳಬೇಕಿದೆ.
– ರಾಜ್‌ಕುಮಾರ್‌ ಜೈ ಭಗವಾನ್‌, ಕಡಬ ನಿವಾಸಿ

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next