Advertisement

ರೈಲು ಹಳಿ ಮೇಲೆ ಗುಡ್ಡ ಕುಸಿತ

03:15 PM Aug 09, 2018 | Team Udayavani |

ಸಕಲೇಶಪುರ: ಭಾರೀ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ. ಕಳೆದ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಎರಡು ದಿನಗಳಿಂದ ಸುರಿಯುತ್ತಿದ್ದು, ಸಮುದ್ರ ಮಟ್ಟದಿಂದ 3500 ಅಡಿ ಎತ್ತರದ ಪ್ರದೇಶದಲ್ಲಿರುವ ತಾಲೂಕಿನ ಎಡಕುಮೇರಿ ಶಿರುವಾಗಿಲು ಮಧ್ಯದ 73, 83 ಹಾಗೂ 79 ಮೈಲುಗಲ್ಲು ಸಮೀಪ ಒಟ್ಟು 3 ಕಡೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದ್ದು ಇದರಿಂದ ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಹಾಸನದ ನಿಲ್ದಾಣದಲ್ಲೇ ಸ್ಥಗಿತಗೊಳಿಸಲಾಯಿತು.

Advertisement

ಬೆಳಗ್ಗೆ 11 ಗಂಟೆಯ ಸಮಯದಲ್ಲಿ ನಿಲ್ದಾಣಕ್ಕೆ ರೈಲು ಬಂತಾದರೂ, ಸಂಚಾರ ಸ್ಥಗಿತಗೊಂಡಿದ್ದರಿಂದ ಹಾಸನ ನಿಲ್ದಾಣದಲ್ಲೇ ರೈಲು ನಿಲ್ಲಬೇಕಾಯಿತು. ಆದರೆ, ಮಧ್ಯಾಹ್ನ 3 ಗಂಟೆಯಾದರೂ ಸ್ಥಳಕ್ಕೆ ಯಾವೊಬ್ಬ ಸಂಬಂಧಪಟ್ಟ ಅಧಿಕಾರಿ ಬಂದು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇದ್ದಿದ್ದು ಆಕ್ರೋಶಕ್ಕೆ ಕಾರಣವಾಯಿತು.

ಕಾರ್ಯಾಚರಣೆಗೆ ಮಳೆ ಅಡ್ಡಿ: ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗಬೇಕಾಗಿದ್ದ ರೈಲನ್ನು ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ತಡೆ ಹಿಡಿದು ಮಂಗಳೂರಿಗೆ ಹಿಂತಿರುಗಿ ಕಳುಹಿಸಲಾಯಿತು.

ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರೈಲು ಹಳಿ ಮೇಲೆ ಗುಡ್ಡ ಕುಸಿಯುವುದು ಸಾಮಾನ್ಯವಾಗಿದೆ. ಏತನ್ಮಧ್ಯೆ, ಸಂಚಾರಕ್ಕೆ ಅಡ್ಡಿಯಾಗಿದ್ದ ಗುಡ್ಡ ತೆರವುಗೊಳಿಸಲು ಸಕಲೇಶಪುರದಿಂದ ತಂಡ ಹೊರಟು, ತೆರವು ಕಾರ್ಯಾಚರಣೆಯಲ್ಲಿ ತೊಡಗಿದೆ ಯಾದರೂ ಜಿಟಿ ಜಿಟಿ ಮಳೆಯಿಂದ ಅಡಿಯುಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ರೈಲು ಯಾವಾಗ ಹೊರಡುತ್ತದೆ ಎಂಬ ಮಾಹಿತಿ ನೀಡದ ಕಾರಣ ವಿವಿಧ ತುರ್ತು ಕಾರ್ಯ ನಿಮ್ಮಿತ್ತ ಮಂಗಳೂರು ತಲುಪಲು ರೈಲು ಹತ್ತಿದ ಪ್ರಯಾಣಿಕರು ರೈಲ್ವೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಹಾಸನ ರೈಲು ನಿಲ್ದಾಣದಲ್ಲಿ ಸಾಮಾನ್ಯವಾಗಿತ್ತು. 

ಬಸ್‌ನಲ್ಲಿ ಸಂಚಾರ: ಅಂತಿಮವಾಗಿ ಸಂಚಾರ ಸ್ಥಗಿತ ದಿಂದ ರೈಲ್ವೆ ಇಲಾಖೆಯು ಪ್ರಯಾಣಿಕರನ್ನು ಹಾಸನ ದಿಂದ ರಸ್ತೆ ಮಾರ್ಗವಾಗಿ 60ಕ್ಕೂ ಹೆಚ್ಚು ಬಸ್ಸುಗಳ ಮೂಲಕ ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ, ಕಡೆಗಳಿಗೆ ಕಳುಹಿಸಿತು.

Advertisement

11 ಬಾರಿ ಗುಡ್ಡ ಕುಸಿತ: ಕಳೆದ ಎರಡೂವರೆ ತಿಂಗಳಲ್ಲಿ 11ನೇ ಬಾರಿ ಗುಡ್ಡ ಕುಸಿದಿದ್ದು, ಮಳೆಯಿಂದ ಗುರುವಾರ ಸಂಜೆಯೊಳಗೆ ಗುಡ್ಡ ತೆರವುಗೊಳಿಸವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹಾಸನ-ಮಂಗಳೂರು ಮಾರ್ಗದಲ್ಲಿ ಪದೇ ಪದೆ ಗುಡ್ಡ ಕುಸಿಯುತ್ತಿರುವುದು ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪ್ರಯಾಣಿಕರಿಗೂ ಕಿರಿಕಿರಿಯನ್ನುಂಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next