Advertisement

ಹಿಂದೆಂದೂ ಕಾಣದ ಚಳಿಗೆ ಜನ ಗಡಗಡ

01:47 PM Dec 20, 2018 | |

ದೇವದುರ್ಗ/ಜಾಲಹಳ್ಳಿ: ವಾಯುಭಾರ ಕುಸಿತದಿಂದ ಸೀಮಾಂಧ್ರದಲ್ಲಿ ಪಿತಾಯಿ ಚಂಡ ಮಾರುತದ ಅಬ್ಬರದಿಂದಾಗಿ ಕಳೆದ ಎರಡು ದಿನಗಳಿಂದ ದೇವದುರ್ಗ ತಾಲೂಕಿನಾದ್ಯಂತ ಚಳಿ ಹೆಚ್ಚಾಗಿದ್ದು, ಜನ ಗಡಗಡ ನಡುಗುವಂತಾಗಿದೆ. ಕಳೆದ ಎರಡು ದಿನಗಳಿಂದ ಚಳಿ ಹಾಗೂ ತಂಗಾಳಿ ತೀವ್ರತೆ ಹೆಚ್ಚಿದೆ. ಮಧ್ಯಾಹ್ನ 1 ಗಂಟೆಯಾದರೂ ಕೊರೆವ ಚಳಿ ಕಡಿಮೆ ಆಗುತ್ತಿಲ್ಲ. ಬೆಳಗ್ಗೆ ಮತ್ತು ರಾತ್ರಿ ಕೊರೆವ ಚಳಿಗೆ ಜನ ಮನೆಯಿಂದ ಹೊರಗೆ ಬರಲು ಕೂಡ ಹಿಂದೇಟು ಹಾಕುವಂತಾಗಿದೆ. ಜನರಿಲ್ಲದೇ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದು ವ್ಯಾಪಾರ ವಹಿವಾಟಿಗೆ ಹಿನ್ನಡೆ ಆಗಿದೆ.

Advertisement

ಚಳಿ ತೀವ್ರತೆಗೆ ಹೆದರಿದ ಮನೆ ಬಾಗಿಲು, ಕಿಟಕಿ ಮುಚ್ಚಿಕೊಂಡು ಒಳಗೆ ಸೇರಿದರೆ, ಶಾಲಾ-ಕಾಲೇಜುಗಳಲ್ಲಿ ತರಗತಿ ಕೋಣೆಗಳ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಕೆಲಸಕ್ಕೆ ಹೊರಗಡೆ
ತೆರಳಬೇಕಾದ ಅನಿವಾರ್ಯತೆ ಇದ್ದ ಜನರು ಬೆಚ್ಚಗಿರಲು ಸ್ವೆಟರ್‌, ಶಾಲು, ಜಾಕೇಟ್‌, ಕಾಲು ಚೀಲ, ಕೈಗವುಸು, ಟೋಪಿ, ಕಿವಿ ಮುಚ್ಚುವ ಬಟ್ಟೆ ಸೇರಿದಂತೆ ದಪ್ಪನೆ ಬಟ್ಟೆಗಳನ್ನು ಹಾಕಿಕೊಂಡು ತೆರಳುತ್ತಿದ್ದಾರೆ.
 
ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ತಣ್ಣನೆಯ ಗಾಳಿಗೆ ವೃದ್ಧರು, ಮಕ್ಕಳಿಗೆ ಶೀತ ಸಂಬಂಧಿತ ಕಾಯಿಲೆಗಳು ಕಾಡುತ್ತಿವೆ. ಬೆಳಗ್ಗೆ ವಾಯು ವಿಹಾರಿಗಳು, ಪೇಪರ್‌ ಹಾಕುವ ಹುಡುಗರು, ಸ್ವತ್ಛತಾ ಕಾರ್ಯ ಕೈಗೊಳ್ಳುವ ಗ್ರಾಪಂ ಸಿಬ್ಬಂದಿ, ಹಾಲು ಹಾಕುವವರು ಚಳಿಗೆ ನಲುಗಿ ಬೆಚ್ಚನೆ ಉಡುಪುಗಳ ಮೊರೆ ಹೋಗಿದ್ದಾರೆ. ಬೆಚ್ಚನೆ ಉಡುಪುಗಳು ಇಲ್ಲದಿರುವವರು ನಡುಗುತ್ತಲೆ ದಿನದ ಕಾಯಕ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಜನ ಗುಂಪುಗುಂಪಾಗಿ ಸೇರಿ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ನೆಗಡಿ, ಕೆಮ್ಮು, ಶೀತ, ಜ್ವರ ಬರುವ ಸಾಧ್ಯತೆಗಳಿವೆ.

ಕಾಲಿನ ಹಿಮ್ಮಡಿ, ತುಟಿ ಒಡೆಯುವ ಸಾಧ್ಯತೆಗಳು ಇದ್ದು. ಅದರಲ್ಲಿ ಚಿಕ್ಕಮಕ್ಕಳು ಹಾಗೂ ವೃದ್ಧರಲ್ಲಿ ವಾತಾವರಣ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಇವೆ. ಆದ್ದರಿಂದ ಬೆಚ್ಚಗಿನ ಬೆಟ್ಟೆಗಳನ್ನು ಧರಿಸುವದು, ಕಾಯಿಸಿ ಆರಿಸಿದ ನೀರು ಕುಡಿಯುವುದು, ಶುಚಿಯಾದ ಹಾಗೂ ಬಿಸಿಯಾದ ಆಹಾರ ಸೇವಿಸಬೇಕೆಂದು
ವೈದ್ಯರು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next