ಎಚ್.ಡಿ.ಕೋಟೆ: ದಟ್ಟ ಕಾಡು ಮತ್ತು ನೀರಿನಿಂದ ಸುತ್ತುವರಿದಿರುವ ವನಸಿರಿನಾಡು ಖ್ಯಾತಿಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇದ್ದು ಚಳಿ ಇರುವುದು ಸಾಮಾನ್ಯ.
ಅದೇ ರೀತಿ ಈ ಬಾರಿಯೂ ಕಳೆದ ಮೂರ್‍ನಾಲ್ಕು ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇಬ್ಬನಿ ಮತ್ತು ಕೊರೆವ ಚಳಿ ಪ್ರಾರಂಭವಾಗಿದ್ದು ಜನರು ಸುರಿವ ಇಬ್ಬನಿಗೆ ಹೆದರಿ ಮನೆಯಲ್ಲೇ ಕೆಲ ಸಮಯ ಕಳೆಯುವಂತಾಗಿದೆ.
ತಾಲೂಕು ವಿಶೇಷವಾಗಿ ನಾಗರಹೊಳೆ ಅಭಯಾರಣ್ಯ ಸೇರಿದಂತೆ ರಾಜ್ಯದ ಜೀವನಾಡಿಗಳಲ್ಲೊಂದಾದ ಕಬಿನಿ ಜಲಾಶಯ ಸೇರಿದಂತೆ ನುಗು, ತಾರಕ, ಹೆಬ್ಟಾಳ್ಳ ಜಲಾಶಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದ್ದು, ಸುಮಾರು 40 ರಿಂದ 60 ಕಿ.ಲೋ ಮೀಟರ್ ವ್ಯಾಪ್ತಿಯ ನಾಲೆಗಳನ್ನು ಹೊಂದಿರುವುದರಿಂದ ದಿನೇ ದಿನೆ ಇಬ್ಬನಿ ಹೆಚ್ಚಾಗುತ್ತಿರುವುದರಿಂದ ಶೀತಗಾಳಿ ಬೀಸುತ್ತಿದ್ದು ಚಳಿಯ ವಾತಾವರಣ ಹೆಚ್ಚಿದೆ.
ಸಂಚಾರಕ್ಕೆ ಅಡ್ಡಿ: ದಟ್ಟ ಇಬ್ಬನಿ ಬೆಳಗ್ಗೆ 8 ಗಂಟೆಯಾದರೂ ಅವರಿಸಿದ ಪರಿಣಾಮ ಮಂಜು ಮುಸುಕಿದ ವಾತಾವರಣದಿಂದಾಗಿ ವಾಹನ ಸವಾರರು ಸಂಚಾರಿಸಲು ಅಡೆತಡೆ ಎದುರಾಗುತ್ತಿದ್ದು, ವಾಹನಗಳ ಲೈಟ್ ಹಾಕಿಕೊಂಡು ಸಂಚಾರಿಸುತ್ತಿದ್ದರು, ಇತ್ತ ಶಾಲಾ ಕಾಲೇಜು ಮಕ್ಕಳು ದಟ್ಟ ಮಂಜಿನ ನಡುವೆ ಕೊರೆವ ಚಳಿಯಲ್ಲಿ ತೆರಳುತ್ತಿರುವ ದೃಶ್ಯ ಎದ್ದು ಕಾಣುತ್ತಿತ್ತು.
ಇನ್ನು ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ನಡೆಸುವ ಅಂಗಡಿ ಮಾಲೀಕರು ಬೆಳಗ್ಗೆ 8 ಗಂಟೆಯಾದರೂ ಇಬ್ಬನಿ ಸರಿಯುವವರೆಗೂ ತಮ್ಮ ತಮ್ಮ ಅಂಗಡಿಗಳನ್ನು ತೆರೆಯದೆ ಮನೆಯಲ್ಲಿ ಬೆಚ್ಚಗೆ ಕೂರುವಂತಹ ವಾತಾವರಣವಿದೆ. ಮುಸುಕಿದ ಮಂಜಿನಿಂದಾಗಿ ವಾಹನ ಸವಾರರ ಸಂಚಾರದ ಕಷ್ಟದ ಜೊತೆಗೆ ದಮ್ಮು ಇನ್ನಿತರ ರೋಗಿಗಳಿಗೆ ತುಂಬಾ ಕಷ್ಟವಾಗುತ್ತಿದ್ದು, ದಟ್ಟ ಮಂಜಿನಿಂದ ಜನ ಮಾತ್ರ ಬೇಸತ್ತಿದ್ದಾರೆ.