Advertisement

ನಾಣ್ಯವನ್ನು ಚಿಮ್ಮಿಸುವ ಡೋಲು ವಾದನ!

06:00 AM Nov 23, 2018 | Team Udayavani |

ಒಂದು ಡೋಲಿನ ಮೇಲೆ ನಾಣ್ಯವೊಂದನ್ನು ಇರಿಸುತ್ತಾರೆ. ಅದರ ಪಕ್ಕದಲ್ಲಿ ನಿಂತು ಇನ್ನೊಂದು ಡೋಲಿಗೆ ಕೈಯಿಂದ ಹೊಡೆಯುತ್ತಾರೆ. ಆಗ ನಾಣ್ಯ ಅಲುಗಾಡುತ್ತದೆ. ಅನಂತರ ಇನ್ನೊಂದು ಕೈಯಿಂದ ಕೋಲಿನಲ್ಲಿ ಡೋಲಿಗೆ ಬಡಿಯುತ್ತಾರೆ. ನಾಣ್ಯ ಸುಮಾರು ಒಂದು ಅಡಿ ಚಿಮ್ಮಿ ನೆಲಕ್ಕೆ ಉರುಳಿ ಬೀಳುತ್ತದೆ. ಕೇವಲ ಡೋಲಿನ ಧ್ವನಿಗೇ ನಾಣ್ಯ ಹಾರಬೇಕಾದರೆ ಡೋಲಿನ ಧ್ವನಿ ಎಷ್ಟು ಪ್ರಬಲವಿದ್ದಿರಬಹುದು? 

Advertisement

ಇದೆಂಥ ಚಮತ್ಕಾರ? “ಪವಾಡ’ ಎಂದರೆ ಕೆಲವರು ಹೀಕರಿಸುತ್ತಾರೆ. “ಮ್ಯಾಜಿಕ್‌’ ಎನ್ನೋಣವೆಂದರೆ ಇವರಿಗೆ ಯಾರೂ ಮೆಜೀಶಿಯನ್‌ ಪಟ್ಟ ಕಟ್ಟಿಲ್ಲ. ಒಂದೋ ಪಟ್ಟವನ್ನು ಯಾರಾದರೂ ಕೊಡಬೇಕು, ಇಲ್ಲವೇ ಸ್ವಯಂ ಆಗಿ ಪಟ್ಟವನ್ನು ಕಟ್ಟಿಕೊಳ್ಳಬೇಕು. ಇದಾವುದೂ ಈ ಕಲಾವಿದರಿಗೆ ಕೈಗೆಟುಕದ ಮಾತು. ಇದು ಕೊರಗ ಕಲಾವಿದರ ಕೈಚಳಕವೆನ್ನದೆ ಬೇರೆ ದಾರಿ ಇಲ್ಲ. 

ಕೆಮ್ಮಣ್ಣು ನೇಜಾರಿನ ಶ್ಯಾಮ ಅವರು ಈ ಚಮತ್ಕಾರವನ್ನು ಲೀಲಾಜಾಲವಾಗಿ ಮಾಡುತ್ತಾರೆ. ಶ್ಯಾಮರ ಜತೆ ಅವರ ಮನೆಯವರು  ಚಂಡೆ, ಕೊಳಲು, ತಾಳ ಇತ್ಯಾದಿ ಪಕ್ಕವಾದ್ಯಗಳೊಂದಿಗೆ ಸಾಥ್‌ ನೀಡುತ್ತಾರೆ. ಶ್ಯಾಮ ಅವರು ಮೊದಲಾಗಿ ಕೊರಗಜ್ಜ ಮತ್ತು ಗ್ರಾಮ ದೇವತೆಗೆ ಡೋಲಿನ ಸೇವೆ ಸಲ್ಲಿಸಿದ ಬಳಿಕ ಇದನ್ನು ಮಾಡಿ ತೋರಿಸುತ್ತಾರೆ. ಕೇವಲ ಇದಕ್ಕಾಗಿಯಲ್ಲ, ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಾದರೆ ಮೊದಲಾಗಿ ಕೊರಗಜ್ಜ, ಗ್ರಾಮದೇವತೆಗೆ ಡೋಲಿನ ಸೇವೆ ಸಲ್ಲಿಸಿ ತನ್ನ ಮುಂದಿನ ಕೆಲಸ ಯಶಸ್ವಿಯಾಗಿ ನಡೆಸಿಕೊಡುವಂತೆ ಪ್ರಾರ್ಥಿಸುತ್ತಾರೆ. ಡೋಲಿನ ಎರಡೂ ಕಡೆಯ ಚರ್ಮ ಒಂದೇ ತೆರನಾಗಿ ಕಂಡರೂ ಇದು ಬೇರೆ ಬೇರೆ ಹದದಿಂದ ಮಾಡಲಾಗಿದೆ. ಎಡಗೈಯಲ್ಲಿ ಬಾರಿಸುವ ಚರ್ಮ ತೆಳುವಾಗಿರುತ್ತದೆ. ಕೋಲಿನಿಂದ ಬಲಗೈಯಲ್ಲಿ ನುಡಿಸುವ ಚರ್ಮ ದಪ್ಪವಾಗಿರುತ್ತದೆ.  

ಸಾವು ಘಟಿಸಿದ ಮನೆಗಳಲ್ಲಿ ಡೋಲು ಬಾರಿಸುವ ಕ್ರಮವಿದೆ. ಅಲ್ಲಿ 13-14 ದಿನಗಳಾದ ಬಳಿಕ ಡೋಲಿಗೂ “ಶುದ್ಧ’ ಆಚರಣೆ ನಡೆಸಿ ಈ ಚಮತ್ಕಾರವನ್ನು ಮನೆಯವರ ಎದುರು ಮಾಡಿತೋರಿಸುವ ಕ್ರಮವಿದೆ. “ದುಃಖದಿಂದ ಕೂಡಿದ ಮನೆಯವರಿಗೆ ದುಃಖವನ್ನು ಹೋಗಲಾಡಿಸುವುದಕ್ಕಾಗಿ ಈ ಚಮತ್ಕಾರದ ಕ್ರಮ ಬಂದಿದೆ’ ಎನ್ನುತ್ತಾರೆ ಶ್ಯಾಮ ಅವರು. 

ಅಂಬಲಪಾಡಿ ಕಪ್ಪೆಟ್ಟುವಿನ ರವಿಚಂದ್ರ, ಮೂಡುಬೆಟ್ಟಿನ ಶ್ಯಾಮ, ನೇಜಾರಿನ ಶ್ಯಾಮ ಅವರು ಡೋಲಿನ ವಾದನಕ್ಕೆ ನಾಣ್ಯವನ್ನು ಹಾರಿಸುತ್ತಾರೆ. ಇದೇ ರೀತಿ ಬಾರಕೂರಿನ ಶೇಖರ ಅವರೂ ಇದನ್ನು ಮಾಡಿ ತೋರಿಸಿದ್ದರು. ಇದೊಂದು ಕೊರಗ ಸಮುದಾಯದ ಅಪರೂಪದ ಕಲೆ.  
       – ವಿ. ಗಣೇಶ ಕೊರಗ,  ಕೊರಗ ಸಂಘಟನೆಗಳ ಮುಖ್ಯಸ್ಥರು, ಕುಂದಾಪುರ. 

Advertisement

ಸಾವಿನ ಮನೆ, ಕಂಬಳ, ದೇವಸ್ಥಾನ ಹೀಗೆ ಬೇರೆ ಬೇರೆ ಕಡೆ ಡೋಲು ನುಡಿಸುವಾಗ ಬೇರೆ ಬೇರೆ ಕ್ರಮಗಳಿರುತ್ತವೆ. ನನ್ನ ತಂದೆ ಗೋಂದು ಅವರು ಮೂರೇ ಪೆಟ್ಟಿಗೆ ನಾಣ್ಯವನ್ನು ಹಾರಿಸುತ್ತಿದ್ದರು. ನಾನೀಗ ಆರೇಳು ಪೆಟ್ಟಿನಲ್ಲಿ ನಾಣ್ಯವನ್ನು ಹಾರಿಸುತ್ತೇನೆ.  ನನ್ನ ತಮ್ಮಂದಿರಾದ ರಘು, ಕುಮಾರ ಅವರಿಗೂ ಡೋಲು ವಾದನ ಕಲೆಗೊತ್ತಿದೆ. 
       – ಶ್ಯಾಮ, ಡೋಲು ಕಲಾವಿದರು, ಕೆಮ್ಮಣ್ಣು ನೇಜಾರು. 

ಮಟಪಾಡಿ  ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next