Advertisement

ನಾಣ್ಯ ಹಾಕಿದರೂ ಬರಲ್ಲ ಗಂಗೆ, ಶುದ್ಧ ನೀರು ಮರೀಚಿಕೆ!

04:11 PM Dec 06, 2017 | Team Udayavani |

ಸುಬ್ರಹ್ಮಣ್ಯ: ಬೇಸಿಗೆಯ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುಡಿಯುವ ನೀರಿಗೆ ತತ್ವಾರ ಬಂದೊದಗುವ ದಿನಗಳು ದೂರವಿಲ್ಲ. ಇಷ್ಟಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಶುದ್ಧ ನೀರಿನ ಘಟಕ ಮಾತ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ. ಬಾಯಾರಿಕೆ ತಣಿಸುವ ಯೋಜನೆ ಲೆಕ್ಕ ಭರ್ತಿಗೆ ಎಂಬಂತಾಗಿದೆ.

Advertisement

2017ನೇ ಸಾಲಿನಲ್ಲಿ ಆಯ್ದ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿ ನಾಣ್ಯ ಬಳಸಿ ಕುಡಿಯುವ ನೀರು ಪಡೆದುಕೊಳ್ಳುವ ಯೋಜನೆ ಜಾರಿಗೆ ತರಲಾಗಿದೆ. ಸುಳ್ಯ ತಾಲೂಕಿನ ಹಲವೆಡೆ ಇಂಥ ಘಟಕಗಳ ಸ್ಥಾಪನೆ ಮಾಡಲಾಗಿದೆ. ತಾಲೂಕಿನ ಗ್ರಾ.ಪಂ.ಗಳ ನಿಗದಿತ ಕಡೆಗಳಲ್ಲಿ ಆರ್‌ಸಿಸಿ ಛಾವಣಿ ಅಳವಡಿಸಿ ಘಟಕ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ ಸಹಿತ ಲಕ್ಷಾಂತರ ವೆಚ್ಚದ ಸಾಮಗ್ರಿಗಳನ್ನು ಈ ಘಟಕದಲ್ಲಿ ಅಳವಡಿಸಲಾಗಿದೆ. ಕೆಲವೆಡೆ ವಿದ್ಯುತ್‌ ಸಂಪರ್ಕ ಅಳವಡಿಕೆಯಾಗಿದ್ದರೂ ಘಟಕ ಕಾರ್ಯಾರಂಭಿಸಲು ಮೀನಮೇಷ ಎಣಿಸಲಾಗುತ್ತಿದೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಿದು. ಕೇಂದ್ರ ಸರಕಾರದ ಎನ್‌ಆರ್‌ಡಬ್ಲೂಎಸ್‌ಆರ್‌ ಯೋಜನೆಯಂತೆ ಈ ಘಟಕ ಸ್ಥಾಪಿಸಲಾಗಿದೆ. ರಾಜ್ಯ ಮಟ್ಟದ ಕೆಆರ್‌ಡಿಎಲ್‌ ಸಂಸ್ಥೆ ಗುತ್ತಿಗೆ ಪಡೆದು ಕೊಂಡಿದೆ. ಐದು ವರ್ಷಗಳ ಅವಧಿಗೆ ನಿರ್ವಹಣೆ ಅವರಿಗೆ ನೀಡಲಾಗಿದೆ. ಅವಧಿ ಪೂರ್ಣವಾದ ಬಳಿಕ ಆಯಾ ಸ್ಥಳಿಯಾಡಳಿ ತಗಳು ಇವುಗಳ ನಿರ್ವಹಣೆ ಮಾಡಲಿವೆ.

ನೀರಿನ ಘಟಕ ಸ್ಥಾಪಿಸಿ ವರ್ಷವಾಗುತ್ತ ಬಂದರೂ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವಲ್ಲಿ ಗುತ್ತಿಗೆದಾರರು ವಿಫ‌ಲಗೊಂಡಿದ್ದಾರೆ. ಕೆಲಸ ಪೂರ್ಣಗೊಳಿಸುವಂತೆ ಎರಡೆರಡು ಬಾರಿ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಸರಕಾರದಯೋಜನೆಯೇ ಈ ರೀತಿ ಕುಂಟುತ್ತ ಸಾಗಿದ್ದು, ಸಾರ್ವಜನಿಕರಿಗೆ ಇದರ ಪ್ರಯೋಜನ ಇನ್ನೂ ಸಿಕ್ಕಿಲ್ಲ. ಕೆಲವೆಡೆ ಘಟಕದ ಸುತ್ತ ಪೊದೆಗಳೂ ಬೆಳೆದಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಾಣ್ಯ ಬಳಸಿ ನೀರು ಪಡೆಯುವ ಯೋಜನೆ ಇದಾಗಿದ್ದು, ಘಟಕಕ್ಕೆ ಟ್ಯಾಂಕ್‌, ಪೈಪ್‌ ಇತ್ಯಾದಿ ಪರಿಕರ ಒದಗಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಇನ್ನೂ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇವೆ. ನಳ್ಳಿನೀರಿನ ವ್ಯವಸ್ಥೆಗಳು ಕೈಕೊಟ್ಟಿವೆ. ಹೀಗಾಗಿ ಸಾರ್ವಜನಿಕರು ಬಾಯಾರಿಕೆ ಆದಾಗ ಹೊಟೇಲ್‌, ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ಇದೆ. ಬೇಸಿಗೆಯ ಬಿಸಿಲ ತಾಪ ಹೆಚ್ಚುತ್ತಿದ್ದಂತೆ ಜನ ಕುಡಿಯುವ ನೀರಿನ ಮೂಲ ಹುಡುಕಿ ಹೋಗಿ, ಬಾಯಾರಿಕೆ ನೀಗಿಸಲು ಪರದಾಡುವಂತಾಗಿದೆ.

Advertisement

ತಾ| ವ್ಯಾಪ್ತಿಯ ಉದ್ದೇಶಿತ 11 ಸ್ಥಳಗಳ ಪೈಕಿ ಕೆಲವೆಡೆ ಕೆಲಸ ಅಂತಿಮ ಹಂತದಲ್ಲಿದ್ದರೆ ಇನ್ನೂ ಕೆಲವೆಡೆ ಅರೆಬರೆಯಾಗಿದೆ. ಘಟಕಗಳಿಗೆ ವಿದ್ಯುತ್‌ ಲೈನ್‌ ಅಳವಡಿಸುವ ಕಾರ್ಯ ನ. 10ಕ್ಕೆ ಪೂರ್ಣಗೊಂಡಿದೆ. ಘಟಕ ಗಳ ವಯರಿಂಗ್‌ ಅಳವಡಿಕೆ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಕೆಲಸ ಮುಗಿಸಿದ್ದಾರೆ. ಅವರಿಗೆ ಪೂರ್ಣ ಹಣ ಪಾವತಿ ಆಗಿಲ್ಲ. ಘಟಕಗಳಿಗೆ ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಿಲ್ಲ.

ಎಲ್ಲೆಲ್ಲಿ ಘಟಕ?
ಸುಳ್ಯ ತಾ| ಸಾರ್ವಜನಿಕ ಕುಡಿಯುವ ನೀರಿನ ಘಟಕವು ಇಲ್ಲೆಲ್ಲ ತೆರೆದಿವೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಯೇನೆಕಲ್ಲು, ಹರಿಹರಪಳ್ಳತ್ತಡ್ಕ, ಕೊಲ್ಲಮೊಗ್ರು, ಮಡಪ್ಪಾಡಿ, ಬಾಳಿಲ, ಪಂಜ-2, ಕೊಡಿಯಾಲ, ಕಳಂಜ, ಕಲ್ಮಡ್ಕ, ಎಣ್ಮೂರು ಇಲ್ಲೆಲ್ಲ ನಿರ್ಮಿಸಲಾಗಿವೆ.

ಕಾರ್ಯಾರಂಭ ಆಗಿಲ್ಲ
ಸಾರ್ವಜನಿಕರು ನಾಣ್ಯ ಬಳಸಿ ಈ ಘಟಕದಿಂದ ನೀರು ಪಡೆಯುವ ಯೋಜನೆಯಿದು. ಘಟಕ ಇನ್ನೂ ಕಾರ್ಯಾರಂಭ ಆಗಿಲ್ಲ. ಈ ಸಂಬಂಧ ಕಾರ್ಯ ಪ್ರಗತಿಯಲ್ಲಿದೆ.
–  ನಾಗರಾಜ್‌,
   ಸ.ಕಾ.ನಿ. ಎಂಜಿನಿಯರ್‌, ಸುಳ್ಯ

ನೀರಿನ ಸಮಸ್ಯೆ ಆಗಿಲ್ಲ
ಬೇಸಿಗೆಯಲ್ಲಿ ಕುಡಿಯುವ ನೀರು ತೀರಾ ಅಗತ್ಯ. ನಾಣ್ಯ ಬಳಸಿ ನೀರು ಪಡೆವ ಶುದ್ಧ ನೀರಿನ ಘಟಕ ಸಾರ್ವಜನಿಕರ ಬಳಕೆಗೆ ಆದಷ್ಟೂ ಬೇಗ ಸಿಗುತ್ತಿದ್ದರೆ ಒಳ್ಳೆಯದಿತ್ತು. ನಮ್ಮಲ್ಲಿ ಇಲ್ಲಿ ತನಕ ಯಾವುದೇ ಕುಡಿಯುವ ನೀರಿನ ಸಮಸ್ಯೆ ಆಗಿಲ್ಲ. ಘಟಕ ಹೆಚ್ಚು ಜನ ಸೇರುವಲ್ಲಿಂದ ದೂರ ನಿರ್ಮಿಸಿದ್ದರಿಂದ ಸ್ವಲ್ಪ ಕಷ್ಟ ಅಷ್ಟೆ.
  – ಯಶೋದಾ ಮಣಿಮಜಲು,
   ಅಧ್ಯಕ್ಷೆ, ಕಳಂಜ ಗ್ರಾ.ಪಂ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next