Advertisement

ಕರಾವಳಿ ಕಾವಲು ಪಡೆಯಲಿಲ್ಲ ರಕ್ಷಣಾ ಬೋಟು

06:00 AM Aug 23, 2018 | |

ಕುಂದಾಪುರ: ಕಡಲ ತೀರದ ರಕ್ಷಣೆ ಮತ್ತು ಕಡಲಿನಲ್ಲಿ ಬೋಟುಗಳು ಅವಘಡಕ್ಕೆ ತುತ್ತಾದರೆ  ತುರ್ತು ಕಾರ್ಯಾಚರಣೆ ನಡೆಸಬೇಕಾಗಿರುವುದು ಕರಾವಳಿ ಕಾವಲು ಪಡೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ಪಡೆಗೆ ಒಂದೇ ಒಂದು ಬೋಟಿನ ವ್ಯವಸ್ಥೆ ಇಲ್ಲ. ಇದ್ದ ಬೋಟು ಕೂಡ ಕೆಟ್ಟು ನಿಂತಿದೆ.
  
ಜಿಲ್ಲೆಯಲ್ಲಿ ವ್ಯಾಪಕ ಮೀನುಗಾರಿಕಾ ಬೋಟುಗಳಿವೆ. ಸಾವಿರಾರು ಮಂದಿ ಮೀನುಗಾರರೂ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ. ಆದರೆ ಕರಾವಳಿ ಕಾವಲುಪಡೆ ಸೂಕ್ತ ವ್ಯವಸ್ಥೆ ಹೊಂದಿಲ್ಲ.  

Advertisement

ಕೆಲ ದಿನಗಳ ಹಿಂದೆ ಮಲ್ಪೆಯಲ್ಲಿ 2 ಹಾಗೂ ಗಂಗೊಳ್ಳಿಯಲ್ಲಿ 1 ಬೋಟು ನೆರೆಗೆ ತುತ್ತಾಗಿ ಸಮುದ್ರದ ಮಧ್ಯೆ ಅಪಾಯದಲ್ಲಿ ಸಿಲುಕಿದ್ದಾಗ ಅಲ್ಲಿಗೆ ತೆರಳಿ ರಕ್ಷಣೆ ಮಾಡಬೇಕಾದ ಕರಾವಳಿ ಕಾವಲು ಪಡೆಯಲ್ಲಿ ಬೋಟೇ ಇರಲಿಲ್ಲ. ಆ ಬಳಿಕ ಮಲ್ಪೆಯಲ್ಲಿ ದಡದಲ್ಲಿ ನಿಲ್ಲಿಸಿದ್ದ ಬೊಟುಗಳು ಅಲೆಗಳ ಅಬ್ಬರಕ್ಕೆ ಸಿಕ್ಕಾಗಲೂ ಸೂಕ್ತ ಕಾರ್ಯಾಚರಣೆಗೆ ಅನುಕೂಲತೆ ಇರಲಿಲ್ಲ. ಮಲ್ಪೆಯು ಉಡುಪಿ ಜಿಲ್ಲೆಯ ಕರಾವಳಿ ಪಡೆಯ ಹೆಡ್‌ ಕ್ವಾರ್ಟರ್ಸ್‌ ಆಗಿದ್ದು, ಇಲ್ಲಿಯೇ ಇದ್ದ 3 ಬೋಟುಗಳು ದುರಸ್ತಿಗಾಗಿ ಕಳುಹಿಸಲಾಗಿದೆ.

3 ಜಿಲ್ಲೆಯಲ್ಲಿ 2 ಕಡೆ ಮಾತ್ರ
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ರಾಜ್ಯದ 3 ಕರಾವಳಿ ಜಿಲ್ಲೆಗಳಾಗಿದ್ದು, ಈ ಪೈಕಿ ಕೇವಲ ಮಂಗಳೂರು ಹಾಗೂ ಕಾರವಾರದಲ್ಲಿ ಮಾತ್ರ ಕಾವಲು ಪಡೆಯಲ್ಲಿ ಸರಿಯಾದ ಬೋಟಿನ ವ್ಯವಸ್ಥೆಯಿದೆ. ಮಲ್ಪೆಯಲ್ಲಿ 3 ಬೋಟುಗಳಿದ್ದರೂ, ಅದನ್ನು ರಿಪೇರಿಗೆ ನೀಡಲಾಗಿದೆ. ಪ್ರಮುಖ ಬಂದರುಗಳಾದ ಹೆಜಮಾಡಿ, ಗಂಗೊಳ್ಳಿ, ಭಟ್ಕಳದಲ್ಲಿ ಮಾತ್ರ ಒಂದೇ ಒಂದು ಬೋಟಿಲ್ಲ. 

ಪ್ರಸ್ತಾವನೆ ಕಳುಹಿಸಲಾಗಿದೆ
ಗಂಗೊಳ್ಳಿ ಹಾಗೂ ಹೆಜಮಾಡಿಯಲ್ಲಿ ಬೇಡಿಕೆಯಿದ್ದು, ಈಗಾಗಲೇ ಕಾವಲು ಪಡೆಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಕೇಂದ್ರದಿಂದ ಮಂಜೂರಾಗಿ ಬರಬೇಕಿದೆ. ಮಲ್ಪೆಯಲ್ಲಿ 3 ಬೋಟುಗಳಿದ್ದು, ಮಳೆಗಾಲವಾದ್ದರಿಂದ ದುರಸ್ತಿಗೆ ಕಳುಹಿಸಲಾಗಿದೆ. 
– ಜೈಶಾಂತ್‌,ಡಿವೈಎಸ್‌ಪಿ,ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆ

ಮೀನುಗಾರರಿಗೆ ರಕ್ಷಣೆಯಿಲ್ಲ
ದಿನ ಬೆಳಗಾದರೆ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕಡಲಿನಲ್ಲಿ ಎಲ್ಲ ದಿನಗಳು ಒಂದೇ ರೀತಿಯ ವಾತಾವರಣ ಇರುವುದಿಲ್ಲ. ಆದರೆ ನಮ್ಮ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪಡೆಯಲ್ಲಿ ಮಾತ್ರ ಒಂದೇ ಒಂದು ಬೋಟು ಇಲ್ಲದಿರುವುದು ಮಾತ್ರ ನಮ್ಮ ದುರಂತ. ಹಿಂದೊಮ್ಮೆ ಶಾಸಕರಾಗಿದ್ದ ಗೋಪಾಲ ಪೂಜಾರಿಯವರು ಕಾವಲು ಪಡೆಗೆ ಹೆಲಿಕಾಪ್ಟರ್‌ ಕೊಡಲಾಗುವುದು ಎಂದಿದ್ದರು. 
– ಸಂಜೀವ ಖಾರ್ವಿ, 
ಮೀನುಗಾರರು ಮರವಂತೆ

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next