ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ನಡೆಯಲಿದೆ. ಸಾಮಾನ್ಯ ಕನಿಷ್ಠ ಕಾರ್ಯಸೂಚಿ ರಚನೆ, ಸರ್ಕಾರ ಸುಸೂತ್ರವಾಗಿ ನಡೆಯಲು ನಿರಂತರ ಸಮನ್ವ
ಯತೆ ಸಾಧಿಸುವುದು ಸೇರಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಜಾರಿಗೆ ಸರ್ಕಾರಿ ಆದೇಶ ಹೊರಡಿಸುವುದು, ಪ್ರಮುಖವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಣೆ ಘೋಷಣೆ ಅನುಷ್ಟಾನ ಕುರಿತು ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳ ವರ್ಗಾವಣೆ, ಇತ್ತೀಚೆಗೆ ನಡೆದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರುಗಳ ವರ್ಗಾವಣೆ ವಿಚಾರದ ಬಗ್ಗೆಯೂ ಪ್ರಸ್ತಾಪವಾಗಲಿದೆ. ಜಲಸಂಪನ್ಮೂಲ ಸಚಿವನಾದ ನನ್ನ ಜತೆ ಚರ್ಚಿಸದೆ ನನ್ನ ಗಮನಕ್ಕೂ ಬಾರದೆ ದೊಡ್ಡ ಪ್ರಮಾಣದಲ್ಲಿ ಎಂಜಿನಿಯರುಗಳ ವರ್ಗಾವಣೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಅಸಮಾಧಾನ, ಸರ್ಕಾರದ ಮೇಲೆ ಅದರ ಪರಿಣಾಮ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ, ಬಜೆಟ್ ಮಂಡನೆ, ಹೊಸ ಯೋಜನೆಗಳ ಸೇರ್ಪಡೆ,ಎರಡೂ ಪಕ್ಷಗಳು ಚುನಾವಣೆಯಲ್ಲಿ
ನೀಡಿದ್ದ ಪ್ರಣಾಳಿಕೆಗಳಲ್ಲಿ ಯಾವ ಅಂಶವನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು.ಸಂಪನ್ಮೂಲ ಕ್ರೋಢೀಕರಣ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್,ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದ ಮೊದಲ ಮಹಡಿಯಲ್ಲಿ ವಿಶಾಲ ಕೊಠಡಿ ಹಂಚಿಕೆ ಮಾಡಲಾಗಿದೆ. ಆ ಕೊಠಡಿಯಲ್ಲೇ ಸಮನ್ವಯ ಸಮಿತಿ ಸಭೆ ನಡೆಯಲಿದೆ.