ಮುದ್ದೇಬಿಹಾಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜನಪರ ಯೋಜನೆ ಜಾರಿಗೊಳಿಸುತ್ತಿರುವುದನ್ನು ಕಂಡು ಕೆಲವು ಬಿಜೆಪಿ ಶಾಸಕರೇ ಮುಂದಿನ ದಿನಗಳಲ್ಲಿ ನಮ್ಮತ್ತ ಬರುತ್ತಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಬಾಂಬ್ ಸಿಡಿಸಿದ್ದಾರೆ.
ಇಲ್ಲಿನ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಾರೆ. ಈ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು 7 ತಿಂಗಳಿಂದ ಹುಸಿ ಬಾಂಬ್ ಸಿಡಿಸುತ್ತಿದ್ದಾರೆ. ಅವೆಲ್ಲವೂ ಠುಸ್ ಆಗಿವೆ ಎಂದರು.
ನಮ್ಮ ಸಮ್ಮಿಶ್ರ ಸರ್ಕಾರ ಫಸ್ಟ್ ಕ್ಲಾಸ್ ಆಗಿ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರವನ್ನು ಸಮರ್ಥವಾಗಿ ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ ಯೋಜನೆ ಈಗಾಗಲೇ ಜಾರಿಗೊಳಿಸಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಆದರೆ ಅನರ್ಹರು ಸಾಲ ಮನ್ನಾದ ಲಾಭ ಪಡೆಯುವುದನ್ನು ತಪ್ಪಿಸಲು ರೈತರಿಂದ ದಾಖಲೆ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಡಿ ರಾಜ್ಯವೇ ಹೆಮ್ಮೆಯಿಂದ ಹೇಳಿಕೊಳ್ಳುವಂಥ ಯೋಜನೆಗಳನ್ನು ಜಾರಿಗೆ ತರಲು ಸಿದ್ದತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಕೆಲ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಪ್ರಧಾನಿ ಅವರು ಕರ್ನಾಟಕದಲ್ಲಿ ಸಾಲ ಮನ್ನಾ ಆಗಿಲ್ಲ, ಅದೆಲ್ಲ ಸುಳ್ಳು ಎಂದು ಹೇಳಿಕೆ ನೀಡಿದ್ದರು. ಇದರಲ್ಲಿ ಪ್ರಧಾನಿ ಅವರದ್ದೇನೂ ತಪ್ಪಿಲ್ಲ. ಆದರೆ ಅವರಿಗೆ ತಪ್ಪು ಮಾಹಿತಿ ನೀಡಿದ ಇಲ್ಲಿನ ಬಿಜೆಪಿಗರು ದಾರಿ ತಪ್ಪಿಸಿದ್ದರು ಎಂದು ಅವರು ಬಹಿರಂಗಪಡಿಸಿದರು.
ಸನ್ಮಾನ: ಇದೇ ವೇಳೆ ಬ್ಯಾಂಕ್‌ಗೆ ಸೌಹಾರ್ದ ಭೇಟಿ ನೀಡಿದ್ದ ಸಚಿವರನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಬ್ಯಾಂಕಿನ ಪ್ರಗತಿ ಕುರಿತು ಸಚಿವರಿಗೆ ತಿಳಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಉಪಾಧ್ಯಕ್ಷ ನಿಂಗಣ್ಣ ಚಟ್ಟೇರ, ನಿರ್ದೇಶಕರು ಇದ್ದರು.