Advertisement

ಸಮ್ಮಿಶ್ರ ಸರ್ಕಾರ ಸ್ಥಿರ, ಒಪ್ಪಂದಕ್ಕೆ ಬದ್ಧ

06:05 AM Jun 29, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆ ಕುರಿತು ಮಾತುಕತೆ ಆಗಿರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ. ಒಪ್ಪಂದದ ಪ್ರಕಾರವೇ ಸರ್ಕಾರ ನಡೆಯಲಿದೆ. ಈ ಬಗ್ಗೆ ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ
ಚರ್ಚೆ ಮಾಡುತ್ತಾರೆ ಎನ್ನುವ ಮೂಲಕ ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಟಾಂಗ್‌ ನೀಡಿದ್ದಾರೆ.

Advertisement

ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಮಿತ್ರ ಪಕ್ಷಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ ಎಂದರು.

ಸಮ್ಮಿಶ್ರ ಸರ್ಕಾರದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಗೆ ಮಹತ್ವ ಕೊಡುವುದು ಬೇಡ. ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದು,ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ಸಮ್ಮಿಶ್ರ ಸರ್ಕಾರ ರಚನೆ ಕುರಿತು ಮಾತುಕತೆ ಆಗಿರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ.

ಒಪ್ಪಂದದ ಪ್ರಕಾರವೇ ಸರ್ಕಾರ ನಡೆಯಲಿದ್ದು, ಈ ಬಗ್ಗೆ ಏನೇ ಸಮಸ್ಯೆ ಇದ್ದರೂ ರಾಹುಲ್‌ ಗಾಂಧಿ ಮತ್ತು ಕುಮಾರಸ್ವಾಮಿ ಚರ್ಚೆ ಮಾಡಿಕೊಳ್ಳುತ್ತಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ಹಲವು ಗೊಂದಲಗಳಿರುವುದು ನನ್ನ ಗಮನಕ್ಕೂ ಬಂದಿದೆ. ಈ ಕುರಿತಂತೆ ಕೆಲವರು ನೀಡುತ್ತಿರುವ ಹೇಳಿಕೆಗಳನ್ನೂ ಗಮನಿಸಿದ್ದೇನೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ನಲ್ಲಿರುವ ಗೊಂದಲಗಳನ್ನು ಆ ಪಕ್ಷದ ನಾಯಕರು ಬಗೆಹರಿಸಲಿದ್ದು, ನಾನು ಪ್ರತಿಕ್ರಿಯಿಸಿದರೆ ಬೇರೆ ಅರ್ಥ ಬರುತ್ತದೆ. ಅದೇ ರೀತಿ, ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳ ಬಗ್ಗೆ ಮಾತನಾಡದಂತೆ ಕುಮಾರಸ್ವಾಮಿಗೂ ಸಲಹೆ ನೀಡಿದ್ದೇನೆ ಎಂದರು.

Advertisement

ಕುಮಾರನೇ 5 ವರ್ಷ ಸಿಎಂ: ಸರ್ಕಾರ ಪೂರ್ಣಾವಧಿ ಇರುವುದಿಲ್ಲ. ಲೋಕಸಭೆ ಚುನಾವಣೆ ನಂತರ ಸರ್ಕಾರ ಉರುಳುತ್ತದೆ ಎಂಬ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೇವೇಗೌಡರು, ಈ ಸರ್ಕಾರ ಸ್ಥಿರವಾಗಿರುತ್ತದೆ ಮತ್ತು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಐದು ವರ್ಷ ಮುಂದುವರಿಯಲಿದ್ದಾರೆ. ಈಗಾಗಲೇ ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಕೂಡ ಇದನ್ನು  ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬೇರೆಯವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಏನೂ ನಡೆಯಲು ಸಾಧ್ಯವಿಲ್ಲ. ಅವರನ್ನು ಕಡೆಗಣಿಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂಬ ಬಸವ ಕಲ್ಯಾಣ ಶಾಸಕ 
ಬಿ.ನಾರಾಯಣರಾವ್‌ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ. ನಾರಾಯಣ ರಾವ್‌ ನನ್ನ ಸ್ನೇಹಿತ.

ಹೀಗಾಗಿ ಅವರ ಹೇಳಿಕೆಗೆ ಮಾಧ್ಯಮದವರು ಆತಂಕಪಡುವ ಅಗತ್ಯವಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಬಜೆಟ್‌ನಲ್ಲಿ ಅಳವಡಿಸಲಾಗುವುದು. ಯಾವುದೇ ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.ಆದರೆ, ಜೆಡಿಎಸ್‌ ಈ ಹಿಂದೆ ಘೋಷಣೆ ಮಾಡಿದಂತೆ ರೈತರ ಸಾಲಮನ್ನಾ ಆಗಲಿದ್ದು, ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next