Advertisement

ದೇಶದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಯುಗ: ವಿಶ್ವನಾಥ್‌

09:24 AM Apr 09, 2019 | Lakshmi GovindaRaju |

ಕೆ.ಆರ್‌.ನಗರ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಾರದೇ ದೇಶದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾಗಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆದ ಹುಣಸೂರು ಶಾಸಕ ಎಚ್‌.ವಿಶ್ವನಾಥ್‌ ಹೇಳಿದರು.

Advertisement

ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಪಂಚಾಯ್ತಿ ಚುನಾವಣೆಗೂ ವ್ಯತ್ಯಾಸವಿಲ್ಲದಂತಾಗಿದ್ದು, 130 ಕೋಟಿ ಜನರ ಬದುಕಿನ ದಿಕ್ಕನ್ನು ಬದಲಾಯಿಸುವ ಮಹಾ ಚುನಾವಣೆ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ವಿಷಾದಿಸಿದರು.

ದುರುಪಯೋಗ: ಇಷ್ಟು ವರ್ಷಗಳ ಕಾಲ ಚುನಾವಣೆಗಳಲ್ಲಿ ಜಾತಿ, ಧರ್ಮ ಮತ್ತು ಬಡತನ ದುರ್ಬಳಕೆಯಾಗುತ್ತಿತ್ತು. ಆದರೆ, ಈಗ ಬಿಜೆಪಿಯವರು ಅದನ್ನು ಮೀರಿ ರಕ್ಷಣಾ ಇಲಾಖೆಯನ್ನು ಚುನಾವಣಾ ಕಾರಣಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಇದು ದೇಶದ ದುರಂತ ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸುಳ್ಳಿನ ಸಾಗರಕ್ಕೆ ಅಣೆಕಟ್ಟೆ ಕಟ್ಟಲು ಕಾಂಗ್ರೆಸ್‌ ವಿಫ‌ಲವಾಯಿತು. ಹೀಗಾಗಿ ಈಗ ಆ ಪಕ್ಷ ಅದರ ಪ್ರತಿಫ‌ಲ ಉಣ್ಣುತ್ತಿದೆ ಎಂದರು. ಮೈಸೂರು ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಪಕ್ಷಗಳವರೇ ತಿಳಿದುಕೊಂಡು ಮತ ಚಲಾಯಿಸಬೇಕು ಎಂದರು.

ಕೆ.ಆರ್‌.ನಗರ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ನಿಖೀಲ್‌ ಪರ ಪ್ರಚಾರಕ್ಕೆ ಬರುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್‌, ಚುನಾವಣೆ ಎಂದ ಮೇಲೆ‌ ರಾಜಕೀಯ ವೈರಿಗಳು ಒಂದಾಗಬೇಕು. ಇದಕ್ಕೆ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಉದಾಹರಣೆ. ಆ ಕೆಲಸವನ್ನು ಸ್ಥಳೀಯ ಶಾಸಕರು ಮಾಡಬೇಕು ಎಂದರು.

Advertisement

ಉತ್ತಮ ಭಾಷೆ ಬಳಸಿ: ಚುನಾವಣಾ ಪ್ರಚಾರ ಕಣದಲ್ಲಿ ಮುಖಂಡರು ಬಳಸುವ ಭಾಷೆಯ ಮೇಲೆ ಹಿಡಿತವಿರಬೇಕು. ಪರಸ್ಪರರನ್ನು ಟೀಕಿಸುವಾಗ ಪಕ್ಷದ ವಿಚಾರಗಳನ್ನು ಮಾತ್ರ ಮಾತನಾಡಬೇಕು. ಎಲ್ಲೆ ಮೀರಿದರೆ ಆ ಮೂಲಕ ಕನ್ನಡ ಭಾಷೆಯ ಕೊಲೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲೋಕಸಭಾ ಚುಣಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಜೆಡಿಎಸ್‌ ಕಾರ್ಯಾಧ್ಯಕ್ಷ ಎಂ.ಕೆ.ಮಹದೇವ್‌, ಪುರಸಭೆ ಮಾಜಿ ಉಪಾಧ್ಯಕ್ಷ ಶಿವಶಂಕರ್‌, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೃಷ್ಣಶೆಟ್ಟಿ, ಜೆಡಿಎಸ್‌ ಮುಖಂಡ ಶಿವಾಜಿ ಗಣೇಶನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next