Advertisement

ಕನ್ನಡ ಶಾಲೆ ಮುಚ್ಚುವ ಕ್ರಮ ಸರಿಯಲ್ಲ

05:57 PM Oct 01, 2018 | Team Udayavani |

ಹರಿಹರ: ರಾಜ್ಯದಲ್ಲಿ ದಿನೆ ದಿನೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಹುಡುಕುವ ದುಸ್ಥಿತಿ ಬರಬಹುದೆಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

Advertisement

ನಗರದ ಗುರುಭವನದಲ್ಲಿ ಭಾನುವಾರ ಕಸಾಪ ಹಾಗೂ ಪ್ರೊ| ಎಚ್‌.ಟಿ. ಶಂಕರಮೂರ್ತಿ ಅಭಿಮಾನಿ ವಿದ್ಯಾರ್ಥಿ ಬಳಗ ಆಯೋಜಿಸಿದ್ದ ಶಂಕರಾಭರಣ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರಕಾರ ಪ್ರತಿ ವರ್ಷವೂ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಸರಕಾರಿ ಕನ್ನಡ ಶಾಲೆಗಳನ್ನು ರೂಪಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಶಾಲೆ ಮುಚ್ಚುವುದು ಸರಿಯಲ್ಲ ಎಂದರು.

ಸಮಾಜದಲ್ಲಿ ಗುರುಜೀವನ ಅತಿ ಪ್ರಮುಖ. ಗುರುಗಳ ಪಾಠ, ಪ್ರವಚನದ ಪ್ರಭಾವದಿಂದ ಅಸಂಖ್ಯಾತರು ಉನ್ನತ ಸ್ಥಾನ ಪಡೆದಿದ್ದಾರೆ. ಶಿಕ್ಷಕರಿಗೆ ಸಂಬಳದೊಂದಿಗೆ ಗಿಂಬಳ ಬರುವುದಿಲ್ಲ. ವ್ಯಕ್ತಿ ನಿರ್ಮಾಣವೆ ಅವರ ಧ್ಯೇಯವಾಗಿದೆ.
ಪ್ರಮಾಣಿಕತೆಯಿಂದ ಸೇವೆ ಮಾಡಿ ಶಿಷ್ಯಂದಿರನ್ನು ಉನ್ನತ ಸ್ಥಾನದಲ್ಲಿ ನೋಡುವುದೇ ಅವರಿಗೆ ಹರ್ಷದಾಯಕ ಎಂದರು.
 
ಪ್ರೊ| ಶಂಕರಮೂರ್ತಿಯವರು ಕನ್ನಡ ಪ್ರಾಧ್ಯಾಪಕರಾಗಿ ಉತ್ತಮ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿದ್ದಾರೆ. ಆ ಶಿಷ್ಯವೃಂದ ಅವರಿಗೆ ಅಭಿನಂದನೆಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ. ಶಂಕರಾಭರಣ ಎಂಬ ಗ್ರಂಥ ಸಮಾಜಕ್ಕೆ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.

ಶಾಸಕ ಎಸ್‌.ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿಜಯಪುರ ವನಶ್ರೀ ಮಠದ ಡಾ| ಬಸವಕುಮಾರ ಶ್ರೀ ಸಾನ್ನಿಧ್ಯ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಬಿ. ರೇವಣಸಿದ್ದಪ್ಪ, ಡಾ| ಲಲಿತಮ್ಮ ಚಂದ್ರಶೇಖರ್‌, ಡಾ| ಆರ್‌.ಎಂ. ಕುಬೇರಪ್ಪ, ಡಾ| ಎಚ್‌.ಎಂ.ಪಂಚಾಕ್ಷರಯ್ಯ, ಬಾಮಾ ಬಸವರಾಜಯ್ಯ,
ದೊಗ್ಗಳ್ಳಿ ಗೌಡ್ರ ಪುಟ್ಟರಾಜು, ಪ್ರೊ| ಎಚ್‌. ಧರ್ಮಪ್ಪ, ಗ್ರಂಥದ ಸಂಪಾದಕರಾದ ಡಾ| ಎ.ಎಂ. ರಾಜಶೇಖರಯ್ಯ, ಕೆ.ಎಸ್‌. ವೀರಭದ್ರಪ್ಪ ತೆಲಿಗಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next