ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಮಸ್‌ಕಟ್ಟೆ ಯ ಪೇಟೆಯಲ್ಲಿನ ಬಸ್ ತಂಗುದಾಣ ಕುಸಿದು ಬೀಳುವ ಹಂತದಲ್ಲಿದೆ. ಮೂರು ಕಾವೇರಿಯಿಂದ ಮೂಂಡ್ಕೂರು ಹೋಗುವ ರಾಜ್ಯ ಹೆದ್ದಾರಿಯ ದಾಮಸ್‌ಕಟ್ಟೆಯಲ್ಲಿನ ಈ ಬಸ್ ತಂಗುದಾಣದಲ್ಲಿ ಎರಡು ಬದಿಯಲ್ಲಿ ಅಂಗಡಿ ಕೋಣೆಗಳಿದ್ದು ಆದಾಯದ ಮೂಲ ವಾಗಿದೆ. ಹಾಗಿದ್ದರೂ ಗ್ರಾ.ಪಂ. ಬಸ್ ತಂಗುದಾಣದ ದುರಸ್ತಿ ಮಾಡಲು ಮುಂದಾಗಿಲ್ಲ. ಬಸ್ ತಂಗುದಾಣದ ಒಂದು ಬದಿಯಲ್ಲಿ ಮಾಡು ಕುಸಿದು ಬೀಳುವ ಹಂತದಲ್ಲಿದೆ. ಪ್ಲಾಸ್ಟಿಕ್ ಹಾಳೆ ಹಾಕಿದ್ದು ಅದರ ಪಕ್ಕಾಸು ರೀಪುಗಳು ಗೆದ್ದಲು ಹಿಡಿದು ಇಂದು, ನಾಳೆ ಬೀಳುವ ಸ್ಥಿತಿಯಲ್ಲಿದೆ.
ಶಾಲಾ ಮಕ್ಕಳು, ನಾಗರಿಕರು ಬಸ್ ತಂಗುದಾಣದಲ್ಲಿ ಆಶ್ರಯ ಪಡೆಯುತ್ತಿದ್ದು ಅಪಾಯ ತಪ್ಪಿದ್ದಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ದುರಸ್ತಿ ಮಾಡಬೇಕಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆಗಾರರು
ಸರಕಾರದ ಹೆಚ್ಚಿನ ಯೋಜನೆಗಳು, ಕಾಮಗಾರಿಗಳು ಸರಿಯಾದ ಮಾರ್ಗದರ್ಶನ ಉಸ್ತುವಾರಿ ಇಲ್ಲದೆ. ಕಳಪೆ ಕಾಮಗಾರಿಯಿಂದ ಹಳ್ಳಹಿಡಿಯುತ್ತಿದೆ. ಅದಕ್ಕೆ ಇದು ಒಂದು ನಿದರ್ಶನವಾಗಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದಕ್ಕೆ ಹೊಣೆಗಾರರು.
-ಸಂತೋಷ್ ಶಾಂತಿಪಲ್ಕೆ, ಸ್ಥಳೀಯರು