Advertisement
ಅಲ್ಲಿ ಕಣ್ಣಿಗೆ ತಂಪೆರೆಯುವ ಹಸಿರು ಮತ್ತುಹೂಗಳ ವರ್ಣವೈಭವದ ನಡುವೆ ಪವಡಿಸಿದೆ. ಮಾವ್ಲಿನ್ನಾಂಗ್ (ಮಾವ್ – ಕಲ್ಲು, ಲಿನ್ನಾಂಗ್- ಚೆಲ್ಲಾಪಿಲ್ಲಿ). ನದಿಪಾತ್ರದಲ್ಲಿ ನೀರು ಹರಿದು ಬಂಡೆಗಳನ್ನು ಕೊರೆದು ಪೊಳ್ಳಾದ ದೊಡ್ಡ ಕಲ್ಲುಗಳು ಈ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾದ್ದರಿಂದ ಖಾಸಿ ಭಾಷೆಯಲ್ಲಿ ಈ ಹೆಸರು! ಎಲ್ಲೋ ಮೂಲೆಯಲ್ಲಿ ತನ್ನ ಪಾಡಿಗೆ ತಾನಿದ್ದ ಈ ಹಳ್ಳಿ, 2003 ರಿಂದ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆಯಲು ಕಾರಣ, ಡಿಸ್ಕವರ್ ಇಂಡಿಯಾ ಪತ್ರಿಕೆಯಿಂದ ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂದುಗುರುತಿಸಲ್ಪಟ್ಟಿದ್ದು! ಇದಲ್ಲದೇ ಶೇ. ನೂರರಷ್ಟು ಸಾಕ್ಷರತೆ ಮತ್ತು ಸ್ತ್ರೀಸಬಲೀಕರಣಇಲ್ಲಿನ ಪ್ರಮುಖ ಅಂಶ. ಹೀಗಾಗಿ, ಈ ಪುಟ್ಟ ಹಳ್ಳಿಯನ್ನು, ಸ್ಥಳೀಯರು ದೇವರ ಸ್ವಂತ ಉದ್ಯಾನವನ ಎಂದು ಪ್ರೀತಿಯಿಂದ ಬಣ್ಣಿಸುವುದರಲ್ಲಿ ಅತಿಶಯೋಕ್ತಿ ಏನಿಲ್ಲ!
ಸುಮಾರು ನೂರು ಮನೆಗಳಿರುವ ಈ ಹಳ್ಳಿಯ ಜನಸಂಖ್ಯೆ ಐದುನೂರು.ತೆರೆದ ಬಯಲಿನಲ್ಲಿ ಶೌಚಕ್ಕೆ ಹೋಗುವುದು ಇಲ್ಲೆಲ್ಲೂ ಇಲ್ಲ. ಮನೆ ಎಷ್ಟೇ ಸಣ್ಣದಾದರೂ ಪ್ರತೀ ಮನೆಗೂ ಶೌಚಾಲಯವಿದೆ. ಇದಲ್ಲದೇ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಪ್ರತಿ ಮನೆಗೆ ಮಾತ್ರವಲ್ಲ,ಬೀದಿ ಬೀದಿಗೆ ಬಿದಿರಿನಕಸದ ಬುಟ್ಟಿಗಳಿವೆ. ಕೋನಾಕೃತಿಯಲ್ಲಿಕಲಾತ್ಮಕವಾಗಿ ಹೆಣೆದ ಈ ಬುಟ್ಟಿಖೋಹ್ ನೋಡಿದರೆ ಆಲಂಕಾರಿಕ ವಸ್ತುವೇನೋ ಅನ್ನಿಸುವಷ್ಟು ಚೆಂದ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ದೊಡ್ಡದಾದ ಹೊಂಡಕ್ಕೆ ಹಾಕಿ ನಂತರ ಗೊಬ್ಬರವಾಗಿ ಬಳಸಲಾಗುತ್ತದೆ. ಧೂಮಪಾನ ಮತ್ತು ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ದಿನವೂ ಬೆಳಿಗ್ಗೆ ಅಥವಾ ಸಂಜೆ ಪ್ರತೀ ಮನೆಯವರು ತಮ್ಮ ಅಂಗಳವನ್ನಂತೂ ಸರಿ, ಅಕ್ಕಪಕ್ಕದ ಜಾಗ ಮಾತ್ರವಲ್ಲ, ರಸ್ತೆಯನ್ನೂಗುಡಿಸುವುದುಕಡ್ಡಾಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮರಗಳಿದ್ದು ಈ ಉದುರಿದ ಎಲೆಗಳನ್ನು ನೇರವಾಗಿ ಅಲ್ಲಲ್ಲೇ ಕಟ್ಟಿದ ಬಿದಿರಿನ ಬುಟ್ಟಿಗೆ ಬೀಳುವ ವ್ಯವಸ್ಥೆ ಮಾಡಲಾಗಿದೆ. ದಿನವೂ ಶಾಲೆಗೆ ಹೋಗುವ ಮುನ್ನ ಬೀದಿ ಗುಡಿಸಿ, ಕಸವನ್ನು ಬುಟ್ಟಿಯಿಂದ ಖಾಲಿಮಾಡುವುದು ಹಳ್ಳಿಯ ಮಕ್ಕಳ ದಿನಚರಿ. ಇಲ್ಲಿನ ಜನರ ಬಗ್ಗೆ ನಮ್ಮ ಚಾಲಕ, “ಇಲ್ಲಿ ಎಲ್ಲರ ಕೈಯಲ್ಲಿ ಸದಾ ಪೊರಕೆ ಮತ್ತು ಬೆನ್ನಿಗೆ ಬಿದಿರಿನ ಬುಟ್ಟಿ ಇದ್ದೇ ಇರುತ್ತದೆ’ ಎಂದು ಸ್ವಲ್ಪ ತಮಾಷೆ ಮತ್ತು ಹೆಮ್ಮೆಯಿಂದ ಹೇಳಿದ! ಅಂದರೆ ಸ್ವತ್ಛತೆ ಇಲ್ಲಿನಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೇನಾದರೂ ವಿಶೇಷ ಕಾರಣವಿದೆಯೇಎಂದುಕುತೂಹಲದಿಂದವಿಚಾರಿಸಿದಾಗ ಶತಮಾನಕ್ಕೂ ಹಿಂದೆ ಇಲ್ಲಿ ಕಾಲರಾ ಸಾಂಕ್ರಾಮಿಕವಾಗಿ ಹರಡಿ ಅನೇಕರನ್ನು ಬಲಿ ತೆಗೆದುಕೊಂಡಿತ್ತು. ಆಗ ಇದ್ದಂಥ ಬ್ರಿಟಿಷ್ ವೈದ್ಯರು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರಿಂದ ತಮ್ಮ ಮಕ್ಕಳ ಸಲುವಾಗಿ ಮಹಿಳೆಯರು ಸ್ವತ್ಛತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಆರಂಭಿಸಿದರು ಎಂಬ ಉತ್ತರ ಸಿಕ್ಕಿತು! ಬಿದಿರಿನ ಮನೆ
ಇಲ್ಲಿ ಹೆಚ್ಚಿನವು ಮೆಟ್ಟುಗೋಲಿನ ಮೇಲೆ ಬಿದಿರನ್ನು ಬಳಸಿ ಹುಲ್ಲುಮಾಡಿನ ಮನೆಗಳು. ಮನೆ ದೊಡ್ಡ ಸಣ್ಣ ಹೇಗಿದ್ದರೂ ಅಂಗಳ, ಹಿತ್ತಲು ಎಲ್ಲೆಡೆ ಗಿಡಮರಗಳಿವೆ. ಬಳಸಿದ ನೀರು ವ್ಯರ್ಥವಾಗದಂತೆ ಗಿಡಗಳಿಗೆ ಬಳಸಲಾಗುತ್ತದೆ. ಮರಗಳ ಮೇಲಿಂದ ಅಲ್ಲಲ್ಲಿ ಚೆಂದದ ಆರ್ಕಿಡ್ ಹೂಗಳು ಮನಸೆಳೆಯುತ್ತವೆ.ಎಲ್ಲೂ ಕಸ -ಕಡ್ಡಿ ಇಲ್ಲದೇ ಇರುವುದರಿಂದ ನೀಟಾದ ರಸ್ತೆಯ ಪಕ್ಕದಲ್ಲಿ ಹರಿಯುವ ನೀರೂ ಶುದ್ಧವಾಗಿಯೇ ಕಾಣುತ್ತದೆ! ಪ್ರವಾಸಿಗರಿಗಾಗಿ ಎತ್ತರದ ಮರದ ಮೇಲೆ ಟ್ರೀಹೌಸ್ ಮಾಡಲಾಗಿದ್ದು ಪ್ರವೇಶಧನ ಇಪ್ಪತ್ತು ರೂಪಾಯಿ. ಬಿದಿರಿನ ಏಣಿ ಹತ್ತಿ ಎತ್ತರದಲ್ಲಿರುವ ಬಿದಿರಿನ ಮನೆಗೆ ಪ್ರವೇಶಿಸಬೇಕು. ಅಲ್ಲಿರುವ ಪುಟ್ಟ ಅಟ್ಟದಲ್ಲಿ ಕುಳಿತು ಬಿಡಿಸಿದ ಚಿತ್ರದಂತಿರುವ ಇಡೀ ಹಳ್ಳಿ ಮತ್ತು ದೂರದ ಬಾಂಗ್ಲಾದೇಶದ ಗದ್ದೆ-ಹಳ್ಳಿಗಳನ್ನು ಕಾಣಬಹುದು. ಹಾಗೆಯೇ ನೂರು ವರ್ಷ ಹಳೆಯದಾದ ಎಪಿಫನಿ ಚರ್ಚ್ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ.
Related Articles
Advertisement
ಕೆ. ಎಸ್. ಚೈತ್ರಾ