Advertisement

ಸ್ವಚ್ಛತಾ ಆ್ಯಪ್‌ಗೆ ಮೈಸೂರು ಜನರ ನೀರಸ ಪ್ರತಿಕ್ರಿಯೆ

10:16 AM May 05, 2017 | Team Udayavani |

ಮೈಸೂರು: ಪ್ರಸಕ್ತ ವರ್ಷದ “ಸ್ವಚ್ಛ ನಗರ’ಗಳ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಸತತ 2 ಬಾರಿ ದೇಶದ ನಂ.1 ಸ್ವಚ್ಛನಗರಿ ಪ್ರಶಸ್ತಿ ಪಡೆದು ಹ್ಯಾಟ್ರಿಕ್‌ ನಿರೀಕ್ಷೆ ಹೊಂದಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ 5 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Advertisement

ಸ್ವಚ್ಛ ಸರ್ವೇಕ್ಷಣೆ ನಡೆಸಿದಾಗ ಮೈಸೂರು ಜನತೆ ಸಮೀಕ್ಷೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದು ಅಂಕಗಳಿಕೆಯಲ್ಲಿ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಮುಖ್ಯವಾಗಿ ಡಿಜಿಟಲ್‌ ಇಂಡಿಯಾ ಗುರಿ ಸಾಧನೆಗಾಗಿ ನಡೆಸಲಾದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ನಾಗರಿಕರ ಸ್ಪಂದನೆಗೆ ಹೆಚ್ಚಿನ ಅಂಕ ನೀಡಲಾಯಿತು. ಇದರಲ್ಲಿ ಸ್ವಚ್ಛ ಸರ್ವೇಕ್ಷಣಾ ಆ್ಯಪ್‌ ಡೌನ್‌ಲೋನ್‌ ಮಾಡಿಕೊಂಡು ಸಂದೇಶ ಕಳುಹಿಸುವತ್ತ ಮೈಸೂರಿಗರು ಉತ್ಸಾಹ ತೋರಲಿಲ್ಲ. ಪಾಲಿಕೆ ಆ್ಯಪ್‌ ಡೌನ್‌ಲೋಡ್‌ಗಾಗಿ ಅಭಿಯಾನವನ್ನೇ ನಡೆಸಿದರೂ ಡೌನ್‌ಲೋಡ್‌ ಮಾಡಿಕೊಂಡವರ ಸಂಖ್ಯೆ ಸಾವಿರವನ್ನೂ ದಾಟಲಿಲ್ಲ. ಆದರೆ, ಪ್ರಥಮ ಸ್ಥಾನ ಪಡೆದ ಇಂದೋರ್‌ನಲ್ಲಿ 30 ಸಾವಿರಕ್ಕೂ ಜನರು ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಜತೆಗೆ, ಮೈಸೂರಿನಲ್ಲಿ ರಾತ್ರಿ ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವುದೂ ಹಿನ್ನಡೆಗೆ ಕಾರಣವಾಗಿದೆ. 

ಮೈಸೂರಿನಲ್ಲಿ ಹಗಲು ವೇಳೆ ಮಾತ್ರ ಮನೆ, ಮನೆ ಕಸ ಸಂಗ್ರಹ ಮತ್ತು ರಸ್ತೆ ಬದಿಯಲ್ಲಿನ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ಇಂದೋರ್‌ನಲ್ಲಿ ರಾತ್ರಿ ಪಾಳಿಯಲ್ಲಿಯೂ ಕಸ ಸಂಗ್ರಹಣಾ ವ್ಯವಸ್ಥೆ ಇದೆ. ಸ್ವಚ್ಛ ಭಾರತ ಕಾರ್ಯಚಟುವಟಿಕೆಯ ಕಡತ ನಿರ್ವಹಣೆಯಲ್ಲಿ ಮೈಸೂರು ಮಹಾ ನಗರಪಾಲಿಕೆ ಮೊದಲ ಸ್ಥಾನದಲ್ಲಿದೆ. ಆದರೆ, ಇದು ಪ್ರಶಸ್ತಿ ತಂದುಕೊಡಲಿಲ್ಲ.

ಸರ್ವೆ ನಡೆಸುತ್ತಿರುವುದು ಏಕೆ?: ಪ್ರಧಾನಿ ಮೋದಿ 2014ರಲ್ಲಿ ಕೇಂದ್ರ ದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ದೇಶಾದ್ಯಂತ “ಸ್ವಚ್ಛ ಭಾರತ ಅಭಿಯಾನ’ ಆರಂಭಿಸಿದ್ದರು. ಈ ಅಭಿಯಾನವನ್ನು ರಾಜ್ಯಗಳು ಗಂಭೀರವಾಗಿ ತೆಗೆದುಕೊಂಡಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಸರ್ವೆ ನಡೆಸಲಾಗುತ್ತದೆ. 2016-17ನೇ ಸಾಲಿನಲ್ಲಿ ದೇಶದ 434 ನಗರ, ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣೆಗೆ ಆಯ್ಕೆ ಮಾಡಿಕೊಂಡ ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯ, ಜನವರಿ-ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ಸರ್ವೇಕ್ಷಣೆ ನಡೆಸಿತ್ತು.

ಮಾನದಂಡಗಳೇನು?
ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಅಗತ್ಯವುಳ್ಳ ಸಿಬ್ಬಂದಿ ನೇಮಕ, ಮನೆ ಮನೆ ಕಸ ಸಂಗ್ರಹಣೆ, ವಾಣಿಜ್ಯ
ಪ್ರದೇಶದಲ್ಲಿನ ಕಸ ಸಂಗ್ರಹಣೆ, ಸಾರ್ವಜನಿಕ ಸ್ಥಳಗಳಲ್ಲಿನ ಕಸ ಸಂಗ್ರಹಣೆ, ಧಾರ್ಮಿಕ ಸ್ಥಳಗಳಲ್ಲಿನ ಕಸ ಸಂಗ್ರಹಣೆ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next