ಮಹದೇವಪುರ: ಆರು ತಿಂಗಳಿಂದ ವೇತನ ನೀಡದೆ ಪೌರಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಪೌರಕಾರ್ಮಿಕರು ಪಾಲಿಕೆ ಸದಸ್ಯ ಶ್ರೀಕಾಂತ್ ನೇತೃತ್ವದಲ್ಲಿ ಮಹದೇವಪುರ ಬಿಬಿಎಂಪಿ ವಲಯ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಅಧಿಕಾರಿಗಳು ಆರು ತಿಂಗಳಿನಿಂದ ವೇತನ ನೀಡದೆ ನಮ್ಮ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಇದೇ ಕೆಲಸ ವನ್ನು ನಂಬಿಕೊಂಡಿರುವ ನಮಗೆ ಒಂದೊತ್ತಿನ ಊಟಕ್ಕೂ ತೊಡಕಾಗಿದೆ. ಶಾಶ್ವತ ಬಯೋಮೆಟ್ರಿಕ್ ಅನ್ನು ತಮ್ಮ ಅಸ್ತ್ರವಾಗಿ ಬಳಸಿಕೊಂಡಿರುವ ಅಧಿಕಾರಿಗಳು ತಮ್ಮ ಜೀವನದೊಂದಿಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.
ಸುಮಾರು 5-6 ವರ್ಷಗಳಿಂದ 120ಕ್ಕೂ ಹೆಚ್ಚು ಮಂದಿ ದೇವಸಂದ್ರ ವಾರ್ಡ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲಾಗುತ್ತಿತ್ತು ನಮಗೆ ಯಾವುದೇ ಪಿಎಫ್, ಇಎಸ್‌ಐ ಸೌಲಭ್ಯ ನೀಡಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆಯ ನಂತರ 48 ಮಂದಿ ಮಾತ್ರ ಕೆಲಸ ಮಾಡುವಂತಾಗಿದೆ. ಸುಮಾರು 65 ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ತೆಗೆದು ಅವರ ಜೀವನವನ್ನು ಬಲಿ ತೆಗೆದುಕೊಂಡಿದೆ. ನಮಗೆ ಪೂರ್ಣ ವೇತನ ಬರುವವರಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿದರು.
ಈ ಹಿಂದೆ ಘನತ್ಯಾಜ್ಯ ವಿಲೇವಾರಿ ವೇಳೆ ಅಧಿಕಾರಿಗಳು ಸುಳ್ಳು ಲೆಕ್ಕ ತೊರಿಸಿ ದುಪ್ಪಟು ವೇತನ ಪಡೆಯುತ್ತಿದ್ದರು ಇದನ್ನು ಕೊನೆಗಾಣಿಸಲು ಸರ್ಕಾರ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಅದರೆ ಬಯೋಮೆಟ್ರಿಕ್ ಹೆಸರಲ್ಲಿ ಬಿಬಿಎಂಪಿ ಅಧಿಕಾರಿಗಳು ಪೌರಕಾರ್ಮಿಕರ ಮೇಲೆ ದೌಜ್ಯನವೆಸಗುತ್ತಿದ್ದಾರೆ. ಕೆಲಸ ಮಾಡಿದವರಿಗೆ ವೇತನ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ?
-ಶ್ರೀಕಾಂತ್, ಪಾಲಿಕೆ ಸದಸ್ಯ