ಬೆಂಗಳೂರು: ನಗರ ವ್ಯಾಪ್ತಿಯಲ್ಲಿರುವ ಕಲ್ಲು ಕ್ವಾರಿಗಳನ್ನು ಹಸಿರು ವಲಯಗಳನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. “ನಮ್ಮ ಮೆಟ್ರೋ’ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಭಾನುವಾರ ಪರಿಶೀಲನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರು ಸುತ್ತಮುತ್ತ ನೂರಾರು ಕಲ್ಲು ಕ್ವಾರಿಗಳಿವೆ. ಅವುಗಳ ವಿಸ್ತೀರ್ಣ ಸಾವಿರಾರು ಎಕರೆಯಷ್ಟಾಗುತ್ತದೆ. ಅಲ್ಲೆಲ್ಲಾ ಉದ್ಯಾನಗಳು, ಸರ್ಕಾರಿ ಆಸ್ಪತ್ರೆ, ನಿವೇಶನಗಳು, ಆಟದ ಮೈದಾನ ಸೇರಿದಂತೆ ಹಸಿರು ವಲಯಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಹೆಣ್ಣೂರು ಬಂಡೆಯನ್ನು ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಲ್ಲು ಕ್ವಾರಿಗಳನ್ನು ಗುರುತಿಸಿ, ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಸಿದ್ಧಪಡಿಸುವಾಗ ಈ ಕ್ವಾರಿಗಳನ್ನೂ ಪರಿಗಣಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಕ್ರಮ ಗಣಿಗಾರಿಕೆ ನಿಲ್ಲುತ್ತದೆ. ಜತೆಗೆ ಪರಿಸರ ಮಾಲಿನ್ಯವೂ ತಡೆಗಟ್ಟಿದಂತಾಗುತ್ತದೆ. ಬೇರೆ ಅಭಿವೃದ್ಧಿ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ತಪ್ಪು ಗ್ರಹಿಕೆಯಿಂದ ಪ್ರತಿಭಟನೆ: ಬೆಲ್ಲಹಳ್ಳಿಯಲ್ಲಿ ಕೂಡ ಇದೇ ಮಾದರಿಯ ಅಭಿವೃದ್ಧಿಗೆ ಬಿಬಿಎಂಪಿ ಮುಂದಾಗಿದೆ. ಅಲ್ಲಿ ಆಟದ ಮೈದಾನ, ಟ್ರೀ-ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಸ್ಥಳೀಯರು ತಪ್ಪುಗ್ರಹಿಕೆಯಿಂದ ಪ್ರತಿಭಟನೆಗಿಳಿದಿದ್ದಾರೆ ಎಂದು ಕೆ.ಜೆ. ಜಾರ್ಜ್ ಇದೇ ವೇಳೆ ಸ್ಪಷ್ಟಪಡಿಸಿದರು.
ಮತ್ತೂಂದು ಮಾವಳ್ಳಿಪುರ, ಮಂಡೂರು ಆಗಲಿದೆ ಎಂಬ ತಪ್ಪು ಗ್ರಹಿಕೆ ಜನರಲ್ಲಿದೆ. ಆದರೆ, ಅಂತಹ ಯಾವುದೇ ಯೋಚನೆಯೂ ಇಲ್ಲ. ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಕಲ್ಲು ಕ್ವಾರಿಗಳಲ್ಲೆಲ್ಲೂ ಕಸ ವಿಲೇವಾರಿ ಮಾಡುತ್ತಿಲ್ಲ. ಅದೇನೇ ಇರಲಿ, ಕಸದ ಸಮಸ್ಯೆಗೆ ತ್ಯಾಜ್ಯದಿಂದ ಇಂಧನ ತಯಾರಿಸುವುದೊಂದೇ ಶಾಶ್ವತ ಪರಿಹಾರ ಎಂದರು.
ಸಂಸ್ಕರಣೆಯಲ್ಲಿ ವಿಳಂಬವಾಗುವುದು, ಅದರಿಂದ ಉತ್ಪಾದನೆಯಾದ ಆರ್‌ಡಿಎಫ್ ವಿಲೇವಾರಿ ಮಾಡುವುದು ತಡವಾಯಿತು. ಇನ್ನು ಮಾವಳ್ಳಿಪುರ, ಮಂಡೂರು, ಟೆರ್ರಾ ಫಾರ್‌ಂನಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿತ್ತು. ಈಗ ಅದಾವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.