Advertisement

ನಗರದೊಳಗಿನ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲಾಗದು

11:29 AM Aug 18, 2017 | Team Udayavani |

ಬೆಂಗಳೂರು: ನಗರ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಸಂಬಂಧ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯವು ಆ.14ರಂದು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಕೇಂದ್ರ ಸರ್ಕಾರದ ವಕೀಲ ಜಯಕರ ಶೆಟ್ಟಿ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. 

Advertisement

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 77.64 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ನಗರ ಪ್ರಾಧಿಕಾರ ವ್ಯಾಪ್ತಿಗೆ ತರಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ವಿನೀತ್‌ ಠಾಕೂರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಜಯಕರ ಶೆಟ್ಟಿ, ಕೇಂದ್ರದ ಪತ್ರವನ್ನು ಸಲ್ಲಿಸಿ ಸುಪ್ರಿಂಕೋರ್ಟ್‌ನ ತೀರ್ಪಿನ ಅನುಸಾರ ರಾಜ್ಯದ ಪ್ರಸ್ತಾವನೆ ಒಪ್ಪುವುದು ಕಾರ್ಯಸಾಧುವಲ್ಲ ಎಂದು ತಿಳಿಸಿದರು.

ಪತ್ರದಲ್ಲಿ ಏನಿದೆ?: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಸ್ತೆಗಳಿಗೆ ವಿನಾಯ್ತಿ ನೀಡಿದರೆ ಸಾರ್ವಜನಿಕ ಸುರûಾ ನೀತಿಯ ಮುಖ್ಯ ಉದ್ದೇಶವೇ ವಿಫ‌ಲವಾದಂತಾಗುತ್ತದೆ. ಹೀಗಾಗಿ ಸಂವಿಧಾನದ 142ನೇ ವಿಧಿಯ ಅನುಸಾರ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದು ಅವಶ್ಯವಿದೆ.

 609.65 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಡಿನೋಟಿಫೈ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯನ್ನು ತಾಂತ್ರಿಕ ಕಾರಣಗಳೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಆದರೆ ಅದನ್ನು ಒಪ್ಪಲು ಆಗುವುದಿಲ್ಲ.

ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ವಿನಾಯ್ತಿ ನೀಡಲು ಸಾಧ್ಯವಿಲ್ಲ. ಬೆಂಗಳೂರು ನಗರಕ್ಕೆ ಫೆರಿಫೆರಲ್‌ ರಸ್ತೆ ಇಲ್ಲ. ಇಂತಹ ರಸ್ತೆಗಳನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್‌ ತೀರ್ಪು ತಿಳಿಸಿದೆ. ಆದ್ದರಿಂದ ನಿಮ್ಮ ಪ್ರಸ್ತಾವನೆ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಕೇಂದ್ರದ ಉತ್ತರದಲ್ಲಿ ತಿಳಿಸಲಾಗಿದೆ.

Advertisement

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿಯಿಂದ 500 ಮೀಟರ್‌ ಅಂತರದಲ್ಲಿ ಯಾವುದೇ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದನ್ನು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ಥಗಿತಗೊಳಿಸಬೇಕು. ಇದು ಮಹಾನಗರ ಪಾಲಿಕೆ, ನಗರ, ಪಟ್ಟಣ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧೀನ ರಸ್ತೆಗಳಿಗೆ ಅನ್ವಯ ಆಗುತ್ತದೆ ಎಂಬುದನ್ನೂ ಪತ್ರದಲ್ಲಿ ತಿಳಿಸಲಾಗಿದೆ.

 ನಗರ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸ್ಥಳೀಯ ಅಥವಾ ನಗರ ಪ್ರಾಧಿಕಾರ ವ್ಯಾಪ್ತಿಯ ರಸ್ತೆ ಎಂದು ಘೋಷಿಸಲು ಕೋರಿ ರಾಜ್ಯ ಸರ್ಕಾರ ಜುಲೈ 31ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next