Advertisement

ಶಾಶ್ವತ ಪರಿಹಾರ ನಿರೀಕ್ಷೆಯಲ್ಲಿ ನಗರದ ಒಳಚರಂಡಿ ಸಮಸ್ಯೆ

12:44 AM Nov 06, 2019 | mahesh |

ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್‌-ಪಾರ್ಕಿಂಗ್‌, ಒಳಚರಂಡಿ, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿದೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆ. ಈ ಹಿನ್ನೆಲೆಯಲ್ಲಿ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನವನ್ನು ಹಮ್ಮಿಕೊಂಡಿದೆ.

Advertisement

ಮಹಾನಗರ: ಒಳಚರಂಡಿ ಸಮಸ್ಯೆ ಮಂಗಳೂರು ನಗರವನ್ನು ಬೆನ್ನು ಬಿಡದೆ ಕಾಡುತ್ತಿರುವ ಸಮಸ್ಯೆ. ಹಳೆಯ ಮಂಗಳೂರಿನಲ್ಲಿ ಒಳಚರಂಡಿ ವ್ಯವಸ್ಥೆ ಉನ್ನತೀಕರಣಗೊಳ್ಳದೆ ಸಮಸ್ಯೆ ಸೃಷ್ಟಿಯಾಗಿದ್ದರೆ, ಹೊಸದಾಗಿ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿರುವ ಪ್ರದೇಶದಲ್ಲಿ ಅಸಮರ್ಪಕ ಮತ್ತು ದೂರದೃಷ್ಟಿ ರಹಿತ ಕಾಮಗಾರಿಯಿಂದಾಗಿ ಪ್ರಯೋಜನಕ್ಕೆ ಬಾರದಂತಾಗಿದೆ. ಇನ್ನೊಂದೆಡೆ ನಗರದ ಬಹುತೇಕ ವಾರ್ಡ್‌ಗಳಲ್ಲಿ ಮಳೆಗಾಲದಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗ‌ಳು ಉಕ್ಕಿ ಮಲೀನ ನೀರು ರಸ್ತೆಗಳಲ್ಲೆ ಹರಿದು ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಳಚರಂಡಿ ವ್ಯವಸ್ಥೆಗೆ ಎರಡು ದಶಕದಲ್ಲಿ ಸುಮಾರು 300 ಕೋ.ರೂ. ಅಧಿಕ ವಿನಿಯೋಗಿಸಿದರೂ ನಗರದ ಈ ಒಳಚರಂಡಿ ಸಮಸ್ಯೆ ಬಗೆಹರಿದಿಲ್ಲ ಎಂಬುದು ವಿಪರ್ಯಾಸ.

ಮನಪಾ 132.45 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. 1999ರಲ್ಲಿ ಎಡಿಬಿ ಯೋಜನೆಯ ಮಂಗಳೂರಿಗೆ ಒಳಚರಂಡಿ ಯೋಜನೆ ರೂಪಿಸಲಾಗಿತ್ತು. ಒಳಚರಂಡಿ ವ್ಯವಸ್ಥೆ ಹೊಂದಿದ್ದ ಹಳೆಯ ಮಂಗಳೂರು ಭಾಗವನ್ನು ಬಿಟ್ಟು ಒಳಚರಂಡಿ ಇಲ್ಲದ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಕೈಗೆತ್ತಿಗೊಳ್ಳಲಾಗಿತ್ತು. ಆದರೂ, ನಗರದಲ್ಲಿ ಒಳಚರಂಡಿ ಸಮಸ್ಯೆಯಾಗಿಯೇ ಉಳಿದಿದೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ “ಸುದಿನ’ವು ಇತ್ತೀಚೆಗೆ ನಡೆಸಿದ ವಾರ್ಡ್‌ ಮುನ್ನೋಟ ಅಭಿಯಾನದಲ್ಲಿ ಕಂಡು ಬಂದಿರುವ ಸಮಸ್ಯೆಗಳಲ್ಲಿ ಒಳಚರಂಡಿಯೂ ಪ್ರಮುಖವಾದದ್ದು. ಕದ್ರಿ, ಶಿವಭಾಗ್‌, ಬೆಂದೂರು, ಮರೋಳಿ, ಕಂಕನಾಡಿ, ಮಿಲಾಗ್ರಿಸ್‌, ದೇರೆಬೈಲು ದಕ್ಷಿಣ, ದೇರೆಬೈಲು ಪೂರ್ವ, ಕಾವೂರು, ಕದ್ರಿ ಉತ್ತರ, ಬಿಜೈ, ಕೊಡಿಯಾಲಬೈಲು, ಪದವು ಸೆಂಟ್ರಲ್‌, ಜಪ್ಪಿನಮೊಗರು, ಬಜಾಲ್‌, ಅತ್ತಾವರ ಸೇರಿದಂತೆ ಪಾಲಿಕೆಯ ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ಸಮಸ್ಯೆ ನಗರ ಜನತೆಯನ್ನು ಕಾಡುತ್ತಿದೆ. ಇನ್ನೊಂದೆಡೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೋರ್ಟ್‌ವಾರ್ಡ್‌, ಸೆಂಟ್ರಲ್‌ಮಾರುಕಟ್ಟೆ, ಬಂದರು, ಪೋರ್ಟ್‌, ಬೋಳಾರ, ಹೊಗೆಬಜಾರ್‌ ವಾರ್ಡ್‌ಗಳಲ್ಲಿ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಕುಂಟುತ್ತಾ ಸಾಗಿದೆ. ಹಳೆಯ ಮಂಗಳೂರು ಪ್ರದೇಶದಲ್ಲಿ ಅಮೃತ್‌ ಯೋಜನೆಯಲ್ಲಿ 147 ಕೋ.ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಉನ್ನತೀಕರಣಗೊಳಿಸುವ ಕಾಮಗಾರಿನ್ನು ಆರಂಭಿಕ ಹಂತದಿಂದ ಮೇಲೆದ್ದಿಲ್ಲ. ಪಾಲಿಕೆ ಹೊಸದಾಗಿ ಕಣ್ಣೂರು, ತಿರುವೈಲು, ಸುರತ್ಕಲ್‌ ಭಾಗದ ಕೆಲವು ಪ್ರದೇಶಗಳು ಪಾಲಿಕೆಗೆ ಸೇರ್ಪಡೆಗೊಂಡು ಹಲವು ವರ್ಷಗಳಾದರೂ ಇನ್ನೂ ಒಳಚರಂಡಿ ವ್ಯವಸ್ಥೆ ಅನುಷ್ಟಾನವಾಗಿಲ್ಲ.

ಇನ್ನೊಂದೆಡೆ ಕೆಲವು ಕಡೆಗಳಲ್ಲಿ ಒಳಚರಂಡಿ ಪೈಪ್‌ ಸಾಗುವ ಮಾರ್ಗದಲ್ಲಿ ಸುಮಾರು 25 ಕಡೆಗಳಲ್ಲಿ ಪೈಪ್‌ಲೈನ್‌ ಸಂಪರ್ಕ ಆಗದಿರುವ (ಮಿಸ್ಡ್ಲಿಂಕ್‌) ಕಾರಣದಿಂದ ಇಡೀ ಲೈನ್‌ ಪ್ರಯೋಜನಕ್ಕೆ ಬಾರದಂತಾಯಿತು ಈಗ ಅಮೃತ್‌ ಯೋಜನೆಯಲ್ಲಿ ಮ್ಯಾನ್‌ಹೋಲ್‌ ದುರಸ್ತಿ ಹಾಗೂ ಮಿಸ್ಡ್ ಲಿಂಕ್‌ ಸರಿಪಡಿಸಲು ಸುಮಾರು 20 ಕೋ.ರೂ.. ಮೀಸಲಿಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಅಸಮರ್ಪಕ ಕಾಮಗಾರಿಯಿಂದಾಗಿ ಯೋಜನೆ ಅನುಷ್ಟಾನಗೊಂಡ ಪ್ರದೇಶದಲ್ಲಿ ಒಂದಲ್ಲ ಒಂದುರೀತಿಯ ಒಳಚರಂಡಿ ಸಮಸ್ಯೆಗಳನ್ನು ನಿರ್ಮಿಸುತ್ತಲೇ ಬಂದಿದೆ.

Advertisement

ಮಂಗಳೂರು ನಗರದಲ್ಲಿ ಒಳಚರಂಡಿ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಪಾಲಿಕೆ ಆಡಳಿತ, ಜನಪ್ರತಿನಿಧಿಗಳು ಕಲ್ಪಿಸಬೇಕು ಈಗಾಗಲೇ ಆಗಿರುವ ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಹಳೆಯಚರಂಡಿ ವ್ಯವಸ್ಥೆಗಳನ್ನು ಉನ್ನತೀಕರಣಗೊಳಿಸಬೇಕು. ಆ ಮೂಲಕ ಸ್ವತ್ಛ ಮತ್ತು ಸುಂದರ ಮಂಗಳೂರು ಸಾಕಾರಗೊಳ್ಳಬೇಕು ಎಂಬುದು ನಗರದ ಜನತೆಯ ನಿರೀಕ್ಷೆ.

ಯೋಜನೆ ಆದರೂ ಪ್ರಯೋಜನಕ್ಕೆ ಬರಲಿಲ್ಲ
ಎಡಿಬಿ ಯೋಜನೆಯಲ್ಲಿ 2003 ರಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡ ನಡುವೆ ಕೆಲವು ಸಮಸ್ಯೆಗಳಾದವು. ಕಾಮಗಾರಿಯಲ್ಲಿ ಲೋಪ ಹಿನ್ನೆಲೆಯಲ್ಲಿ ಕೆಲವು ಗುತ್ತಿಗೆದಾರರನ್ನು ಕೈಬಿಡಲಾಯಿತು. 2007 ರಲ್ಲಿ ಮರು ಆರಂಭಗೊಂಡಿತು. ಯೋಜನೆ ಆರಂಭದಲ್ಲಿ ಇದರ ಮೂಲ ವೆಚ್ಚ 135 ಕೋ.ರೂ.ಆಗಿತ್ತು. ಅನಂತರ ಇದು 218 ಕೋ.ರೂ. ಗೇರಿತು. ಮತ್ತೇ ಏರಿಕೆಯಾಗುತ್ತಲೇ ಹೋಯಿತು. 200 ಕಿ.ಮೀ. ಒಳಚರಂಡಿ ಪೈಪ್‌ ಹಾಗೂ 14,415 ಮ್ಯಾನ್‌ಹೋಲ್‌ಗ‌ಳ ನಿರ್ಮಾಣ ಇದರಲ್ಲಿ ಒಳಗೊಂಡಿತ್ತು. ಆದರೆ ಅಸರ್ಮಪಕ ಕಾಮಗಾರಿಗಳಿಂದಾಗಿ ನಿರ್ಮಾಣವಾದ ಮ್ಯಾನ್‌ಹೋಲ್‌ಗ‌ಳಲ್ಲಿ ಕೆಲವು ಕಡೆ ಇದು ಕುಸಿಯಿತು. ಕೆಂಪುಕಲ್ಲು ಗಳನ್ನು ಬಳಸಿ ಸಮರ್ಪಕವಾಗಿ ಪ್ಲಾಸ್ಟರಿಂಗ್‌ ಮಾಡದ ಕಾರಣ ತ್ಯಾಜ್ಯ ನೀರು ಸೋರಿಕೆಯಾಗಿ ಅಕ್ಕಪಕ್ಕದ‌ ತೋಡುಗಳಲ್ಲಿ ಹರಿಯಿತು. ಬಾವಿಗಳಿಗೆ ಸೇರಿ ಬಾವಿ ನೀರು ಮಲೀನವಾಯಿತು. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆಯಿಂದಾಗಿ ಹಲವು ನಿವಾಸಿಗಳ ಬಾವಿಗಳು ಕಲುಷಿತಗೊಂಡು ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next