Advertisement
ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಸಾರ್ವಜನಿಕ ಸೇವಾ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದ ಎಲ್ಲ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಜಾಗದ ಹುಡುಕಾಟದಲ್ಲಿ ತೊಡಗಿದೆ ಎಂದು ಹೇಳಿದರು.
Related Articles
Advertisement
ಶಾಸಕ ವಿ.ಸೋಮಣ್ಣ ಮಾತನಾಡಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಸಾರ್ವಜನಿಕ ಸೇವಾ ಸಂಕೀìಣ ಕೇಂದ್ರ ಆರಂಭಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ. ಅಭಿವೃದ್ಧಿ ಕೆಲಸಗಳಿಗೆ ರಾಜಕೀಯ ಮಾಡುವುದು ಬೇಡ. ರಾಜಕೀಯ ನಿಂತ ನೀರಲ್ಲ ರಾಜ್ಯದಲ್ಲಿ ದೇವರಾಜ ಅರಸು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್ ಸೇರಿದಂತೆ ಹಲವಾರು ಗಣ್ಯರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದು, ಅವರ ಹಾದಿಯಲ್ಲಿ ನಾವೇಲ್ಲ ಸಾಗಬೇಕಿದೆ ಎಂದರು.
ಚೆನ್ನೈ ನಗರದಲ್ಲಿ 8 ಎಕರೆ ಪ್ರದೇಶದಲ್ಲಿ ಬಹುದೊಡ್ಡ ಗ್ರಂಥಾಲಯವಿದ್ದು, ಅದೇ ಮಾದರಿಯಲ್ಲಿ ನಮ್ಮ ಕ್ಷೇತ್ರದಲ್ಲಿಯೂ ಎರಡೂವರೆ ಎಕರೆ ಜಾಗದಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆಯಿದೆ. ಜತೆಗೆ ಐಎಎಸ್ ಮತ್ತು ಐಪಿಎಸ್ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಅ.ದೇವೇಗೌಡ, ಪಾಲಿಕೆ ಸದಸ್ಯರಾದ ಶಾಂತಕುಮಾರಿ, ಉಮೇಶ್ ಶೆಟ್ಟಿ, ಶಿಲ್ಪ ಶ್ರೀಧರ್, ಮಧುಕುಮಾರಿ ವಾಗೀಶ್ ಮೋಹನ್ ಕುಮಾರ್, ಆನಂದ್ ಪಿ.ಹೊಸೂರು, ದಾಸೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.
ಪರಮೇಶ್ವರ್ ಸಿಎಂ ಆಗ್ತಾರೆ – ವಿ.ಸೋಮಣ್ಣ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮುಂದೊಂದು ದಿನ ಖಂಡಿತವಾಗಿಯೂ ಮುಖ್ಯಮಂತ್ರಿ ಆಗುತ್ತಾರೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಜತೆಗೆ ನಲವತ್ತು ವರ್ಷಗಳ ಸ್ನೇಹವಿದ್ದು, ಶಾಸಕರಾಗಿದ್ದ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದೆವು.
ಸದ್ಯ ಅವರು ಉಪಮುಖ್ಯಮಂತ್ರಿಯಾಗಿದ್ದು, ಮುಂದೊಂದು ದಿನ ಖಂಡಿತ ಮುಖ್ಯಮಂತ್ರಿ ಆಗುತ್ತಾರೆ. ಅದೃಷ್ಟ ಇದ್ದರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗುತ್ತಾರೆ. ಕೇವಲ 38 ಸೀಟು ಗೆದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಲ್ಲವೇ? ಅವಕಾಶ ಇದ್ದರೆ ಯಡಿಯೂರಪ್ಪ ಅವರೂ ಆಗ್ತಾರೆ, ಯಾರು ಇಲ್ಲದಿದ್ದರೆ ನಾನೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.
ಇಂದಲ್ಲ ನಾಳೆ ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬೇಕು. ಆದರೆ, ಮಾಧ್ಯಮದವರು ಇದನ್ನು ದೊಡ್ಡ ವಿಷಯ ಮಾಡಿ ನನ್ನ ಹಾಗೂ ಯಡಿಯೂರಪ್ಪ ಮಧ್ಯೆ ಜಗಳ ತಂದಿಡುವುದು ಬೇಡ. ಹಿಂದೆ ಶ್ರೀರಾಮುಲು ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿದ್ದನ್ನೇ ದೊಡ್ಡ ವಿಷಯ ಮಾಡಲಾಗಿತ್ತು ಎಂದು ಹೇಳಿದರು.
ಸೋಮಣ್ಣ ಬಹಳ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಮೊದಲು ನಮ್ಮ ಪಕ್ಷದಲ್ಲಿಯೇ ಇದ್ದರು. ಸದಾ ನನ್ನ ಪಕ್ಕದ ಖುರ್ಚಿಯಲ್ಲಿಯೇ ಅವರೂ ಕೂರುತ್ತಿದ್ದರು. ಆದರೆ, ರಾತ್ರೋರಾತ್ರಿ ಪಕ್ಷ ಬಿಟ್ಟು ಹೋದರು. ಈಗ ಅವರಿಗೆ ಯಾಕೆ ಪಕ್ಷ ಬಿಟ್ಟು ಹೋದೆ ಎಂದು ಪಶ್ಚಾತಾಪವಾಗಿದೆ.-ಡಾ.ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ