Advertisement

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

08:33 PM Aug 01, 2021 | Team Udayavani |

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಒಟ್ಟು 5 ಯೋಜನೆಗಳು ಮಂಜೂರು ಆಗಿವೆ. ಈ ಯೋಜನೆಗಳು ಮಂಜೂರು ಆಗಿ ಕೆಲವು ವರ್ಷಗಳಾಗಿದ್ದು, ಒಂದು ಯೋಜನೆ ಹೊರತುಪಡಿಸಿ ಉಳಿದಂತೆ ಎಲ್ಲ ಯೋಜನೆಗಳು ಇನ್ನೂ ನಿರ್ಮಾಣ ಹಂತಕ್ಕೆ ಬಂದಿಲ್ಲ. ಯೋಜನೆ ಅನುಷ್ಠಾನದಲ್ಲಿ ವಿಳಂಬದಿಂದಾಗಿ ಫಲಾನುಭವಿಗಳು ಮನೆ ಹೊಂದುವ ಕನಸು ಮರೀಚಿಕೆಯಾಗುತ್ತಿದೆ.

Advertisement

ಕೇಂದ್ರ ಪುರಸ್ಕೃತ ಸರ್ವರಿಗೂ ಸೂರು ಯೋಜನೆಯಲ್ಲಿ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನೆಯಡಿ ವಸತಿರಹಿತರಿಗೆ ನಗರದ ಪದವು ಗ್ರಾಮದ ಶಕ್ತಿನಗರದಲ್ಲಿ ಒಂದು, ಇಡ್ಯಾದಲ್ಲಿ ಎರಡು, ತಿರುವೈಲಿನಲ್ಲಿ ಒಂದು ಜಿ ಪ್ಲಸ್‌3 ಮಾದರಿಯ ವಸತಿ ಯೋಜನೆಗಳು ಮಂಜೂರಾಗಿತ್ತು. ಇದರಲ್ಲಿ ಇಡ್ಯಾದ 2 ಯೋಜನೆಗಳು ಮಾತ್ರ ಅನುಷ್ಠಾನದಲ್ಲಿದೆ. ಮಂಗಳೂರಿನ ಶಕ್ತಿನಗರದಲ್ಲಿ ಜಿಪ್ಲಸ್‌ ಮಾದರಿಯಲ್ಲಿ ವಸತಿ ಯೋಜನೆ ಮಂಜೂರಾಗಿ 4 ವರ್ಷಗಳಾಗಿವೆ. 950 ಫಲಾನುಭವಿಗಳಿಗೆ 3 ವರ್ಷಗಳ ಹಿಂದೆ ಹಕ್ಕುಪತ್ರ ವಿತರಣೆಯಾಗಿದೆ. ಆದರೆ ಜಾಗದ ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಜಾಗದ ಸಮಸ್ಯೆ ಇತ್ಯರ್ಥ ಹಂತಕ್ಕೆ ತಲುಪಿದ್ದು ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಆಡಳಿತ ವ್ಯವಸ್ಥೆ ಹೇಳುತ್ತಿದೆ. ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸಿ ಯೋಜನೆ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಿ ಫಲಾನುಭವಿಗಳ ಅತಂತ್ರ ಸ್ಥಿತಿಯನ್ನು ನಿವಾರಿಸಬೇಕಾಗಿದೆ.

ಕಣ್ಣೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರಿಂದ 500 ಮನೆಗಳನ್ನು ಜಿಪ್ಲಸ್‌ ಮಾದರಿಯಲ್ಲಿ ನಿರ್ಮಿಸುವ ಯೋಜನೆ ಮಂಜೂರಾಗಿ 5 ವರ್ಷಗಳು ಕಳೆದಿದೆ. 7.24 ಎಕರೆ ಜಮೀನು ಕೂಡ ಇದಕ್ಕೆ ಕಾದಿರಿಸಲಾಗಿದೆ. ಆದರೆ ಯೋಜನೆ ಅನುಷ್ಠಾನಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ತಿರುವೈಲು ಗ್ರಾಮದಲ್ಲಿ 600 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಪ್ಲಸ್‌ 3 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆ ಮಂಜೂರಾಗಿ 3 ವರ್ಷಗಳಾಗಿವೆ. 6.33 ಎಕರೆ ಜಮೀನು ಕಾದಿರಿಸಲಾಗಿದೆ. ಆದರೆ ಜಾಗ ವಸತಿ ಯೋಜನೆಗೆ ಸೂಕ್ತವಾಗಿಲ್ಲ ಎಂಬ ಕಾರಣದಿಂದ ನನೆಗುದಿಯಲ್ಲಿದೆ. ಕುಂಜತ್ತಬೈಲ್‌ನಲ್ಲಿ 3 ಎಕರೆ ಜಮೀನಿನಲ್ಲಿ ಹೊಸದಾಗಿ ವಸತಿ ಸಂಕೀರ್ಣ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ತಯಾರಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ಸರ್ವರಿಗೂ ಸೂರು ಕಲ್ಪಿಸುವುದು ವಸತಿ ಯೋಜನೆಯ ಆಶಯ. ಈ ನಿಟ್ಟಿನಲ್ಲಿ ಮಂಜೂರುಗೊಳ್ಳುವ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ಅರ್ಹ ಫಲಾನುವಿಗಳಿಗೆ ಮನೆ ದೊರೆತಾಗ ಮಾತ್ರ ಇದರ ಉದ್ದೇಶ ಸಫಲವಾಗುತ್ತದೆ. ಯೋಜನೆಗೆ ನಿವೇಶನಗಳನ್ನು ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಮಂಜೂರುಗೊಂಡಿರುವ ಮೂರು ಯೋಜನೆಗಳು ಜಾಗದ ಸಮಸ್ಯೆಯನ್ನು ಎದುರಿಸುತ್ತಿದೆ. ಸಮಸ್ಯೆಯನ್ನು ಬಗೆಹರಿಸಿ ಹಲವಾರು ವರ್ಷಗಳಿಂದ ವಸತಿಗಾಗಿ ಕಾಯುತ್ತಿರುವವರಿಗೆ ಶೀಘ್ರ ವಸತಿಗಳನ್ನು ಲಭ್ಯವಾಗುವ ಕಾರ್ಯ ಆಗಬೇಕಾಗಿದೆ.

   -ಸಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next