ಮಡಿಕೇರಿ: ಚೆಟ್ಟಳ್ಳಿ,ಮೀನುಕೊಲ್ಲಿ ಸೇರಿದಂತೆ ಪರಿಸರದ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದ್ದ ಒಟ್ಟು 23 ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳಿಂದ ಐದು ಮರಿಯಾನೆಗಳೊಂದಿಗೆ ಗ್ರಾಮ ಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಕಾಡಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಒಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು.
ಶನಿವಾರ ಕಾಡಾನೆಗಳ ಉಪಟಳ ಹೆಚ್ಚಾದ ಕಾರಣ ರೇಡಿಯೋ ಕಾಲರ್‌ನ ಮಾಹಿತಿಯನ್ನು ಅನುಸರಿಸಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಚೆಟ್ಟಳ್ಳಿ, ಮೀನುಕೊಲ್ಲಿ, ವಾಲೂ°ರು, ತ್ಯಾಗತ್ತೂರು ಭಾಗದಿಂದ ಕುಶಾಲನಗರದ ದುಬಾರೆ ಮೂಲಕ ಮೀಸಲು ಅರಣ್ಯಕ್ಕೆ ಕಾಡಾನೆಗಳನ್ನು ಓಡಿಸುವಲ್ಲಿ ಯಶಸ್ವಿಯಾದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪವಲಯ ಅರಣ್ಯಾಧಿಕಾರಿ ವಿಲಾಸ್ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕ ಚರಣ್, ವೀಕ್ಷಕ ಧರ್ಮಪಾಲ್, ಜಗದೀಶ್ ಸೇರಿದಂತೆ ಸಿಬಂದಿ ವರ್ಗ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ಬೆಳಗ್ಗಿನಿಂದಲೇ ಹರಸಾಹಸ ಪಟ್ಟಿತು.