Advertisement

ವಾಸ್ತವದೊಂದಿಗೆ ಮುಖಾಮುಖಿಯಾಗಿಸಿದ ಚೋರೆ ಚರಣದಾಸೆ

07:06 PM Apr 20, 2018 | |

ಯಾರಿಂದ ದುಷ್ಟತನವನ್ನು ನಿರೀಕ್ಷಿಸಿರುತ್ತೇವೋ ಅವರು ಸಾತ್ವಿಕರಾಗಿರುವುದು, ಯಾರು ಸಾತ್ವಿಕರೆಂದು ಗುರುತಿಸಿಕೊಂಡಿರುತ್ತಾರೋ ಅವರು ಗೋಮುಖ ವ್ಯಾಘ್ರಗಳಾಗಿರುವುದನ್ನು ಕಂಡಾಗ ಮನಸ್ಸು ಮತ್ತು ಹೃದಯ ತಳಮಳಗೊಳ್ಳುತ್ತದೆ.ಈ ವಾಸ್ತವವನ್ನು ಅರಗಿಸಿಕೊಳ್ಳಲಾಗುವುದಿಲ್ಲ. ಇದು ಸಾರ್ವಕಾಲಿಕವಾದ ಸತ್ಯ. ಈ ವಾಸ್ತವವನ್ನು ಸಾರುವವ ನಾಟಕ “ಚೋರೆ ಚರಣದಾಸೆ’. ಹಬೀಬ್‌ ತನ್ವಿರ್‌ ಹಿಂದಿಯಲ್ಲಿ ರಚಿಸಿದ ನಾಟಕವನ್ನು ತುಳುವಿಗೆ ಭಾಷಾಂತರಿಸಿ ನಿರ್ದೇಶಿಸಿದವರು ದಿವಾಕರ್‌ ಕಟೀಲ್‌. ರಂಗಕ್ಕೆ ತಂದ ಕಲಾವಿದರು ಉಡುಪಿ ಕಿನ್ನಿಮೂಲ್ಕಿ ಪದ್ಮಶಾಲಿ ತರುಣ ವೃಂದದ ಹವ್ಯಾಸಿ ಕಲಾವಿದರು. 

Advertisement

ಬಡವರಿಗಾಗಿ ಜಮಿನಾªರರ ಮನೆಯಿಂದ ಧಾನ್ಯವನ್ನು ಕದಿಯುವ ಚೋರೆ ಚರಣದಾಸೆ ರಾಬಿನ್‌ ಹುಡ್‌ನ‌ನ್ನು ನೆನಪಿಸುತ್ತಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸನ್ಯಾಸಿಯ ಆಶ್ರಮದಲ್ಲಿ ಆಶ್ರಯ ಪಡೆದು ಕಳ್ಳತನ ಮಾಡುವುದನ್ನು ಬಿಡುವುದರ ಜತೆಗೆ ಚಿನ್ನದ ಬಟ್ಟಲಿನಲ್ಲಿ ಊಟ ಮಾಡುವುದು, ಆನೆಯ ಮೇಲೆ ಕುಳಿತು ಮೆರವಣಿಗೆಯಲ್ಲಿ ಹೋಗುವುದು, ರಾಣಿಯನ್ನು ಮದುವೆಯಾಗದಿರುವುದು,ಸಿಂಹಾಸನವೇರಿ ಅರಸನಾಗುವುದು ತ್ಯಜಿಸುತ್ತೇನೆಂದು ಸನ್ಯಾಸಿಗೆ ಮಾತು ನೀಡುತ್ತಾನೆ. ತದನಂತರ ರಾಜ ಖಜಾನೆಯಿಂದ ಐದು ಚಿನ್ನದ ನಾಣ್ಯವನ್ನು ಕದ್ದುಕೊಂಡು ಹೋಗುತ್ತಾನೆ. ಸನ್ಯಾಸಿಯ ಮಾತಿಗೆ ಬೆಲೆಕೊಟ್ಟು ಅರಮನೆಗೆ ಬಂದು ರಾಣಿಯ ಬಳಿ ನಾನು ಐದು ಚಿನ್ನದ ನಾಣ್ಯವನ್ನು ಕದ್ದಿರುವೆ ಎಂಬ ಸತ್ಯವನ್ನು ಹೇಳುತ್ತಾನೆ. ಆದರೆ ಖಜಾನೆಯಲ್ಲಿ ಹತ್ತು ಚಿನ್ನದ ನಾಣ್ಯ ಕಾಣೆಯಾಗಿರುತ್ತದೆ. ಉಳಿದ ಐದು ಚಿನ್ನದ ನಾಣ್ಯವನ್ನು ಖಜಾನಾಧಿಕಾರಿ ಕದ್ದಿರುವುದು ಸಾಬೀತಾಗಿರುತ್ತದೆ. ಸತ್ಯಸಂಧನಾದ ಕಳ್ಳನನ್ನು ಮೋಹಿಸಿದ ರಾಣಿ ಅವನನ್ನು ಆನೆಯ ಮೇಲೆ ಕುಳಿತುಕೊಳ್ಳಿಸಿ ಅರಮನೆಗೆ ಕರೆದುಕೊಂಡು ಬರಲು ಹೇಳಿದಾಗ, ಸನ್ಯಾಸಿಗೆ ನೀಡಿದ ಮಾತಿನಂತೆ ತಿರಸ್ಕರಿಸಿ ನಡೆದುಕೊಂಡು ಅರಮನೆಗೆ ಬರುತ್ತಾನೆ. ರಾಣಿ ಚಿನ್ನದ ಬಟ್ಟಲಿನಲ್ಲಿ ಊಟ ನೀಡಿದಾಗ ಅದನ್ನು ತಿರಸ್ಕರಿಸುತ್ತಾನೆ. ರಾಣಿ ತನ್ನನ್ನು ಮದುವೆಯಾಗು ಎಂದು ಕೇಳಿಕೊಂಡಾಗಲೂ, ಆ ರಾಜ್ಯದ ಅರಸನಾಗಿ ಸಿಂಹಾಸನವನ್ನೇರು ಎಂದಾಗಲೂ ಸನ್ಯಾಸಿಗೆ ಮಾತು ನೀಡಿದ್ದೇನೆ ಎಂದು ತಿರಸ್ಕರಿಸುತ್ತಾನೆ. ಅರಮನೆಯಲ್ಲಿ ನಡೆದ ಈ ವಿಷಯವನ್ನು ಯಾರ ಬಳಿಯೂ ಹೇಳಬಾರದು ಎಂದು ಮಹಾರಾಣಿ ಹೇಳಿದಾಗ ಸುಳ್ಳು ಹೇಳುವುದಿಲ್ಲ ಎಂದು ನಿರಾಕರಿಸುತ್ತಾನೆ. ಕೋಪಗೊಂಡ ರಾಣಿ ಅವನನ್ನು ಕೊಲ್ಲಿಸುತ್ತಾಳೆ. ಚೋರ ಚರಣದಾಸನ ಸಾವು ನ್ಯಾಯ ಸಮ್ಮತವೇ ಎಂಬ ಪ್ರಶ್ನೆ ಉಳಿದು ಪ್ರೇಕ್ಷಕರನ್ನು ಉತ್ತರಕ್ಕಾಗಿ ಚಿಂತಿಸುವಂತೆ ಮಾಡಿ ನಾಟಕ ಕೊನೆಗೊಳ್ಳುತ್ತದೆ. 

78 ವರ್ಷಗಳ ಇತಿಹಾಸವಿರುವ ಸಂಸ್ಥೆಯ ಯುವ ಕಲಾವಿದರು ಅಭಿನಯಿಸಿದ ನಾಟಕವನ್ನು ರಂಗಕ್ಕೆ ತರುವಾಗ ದಿವಾಕರ್‌ ಕಟೀಲ್‌ರವರು ಎರಡು ರೀತಿಯ ಪ್ರೇಕ್ಷಕರನ್ನು ತಲುಪುವಲ್ಲಿ ಸಫ‌ಲತೆಯನ್ನು ಕಂಡಿದ್ದಾರೆ. ತಿಳಿಯಾದ ಹಾಸ್ಯದೊಂದಿಗೆ, ಕಲೆಗಾಗಿ ಕಲೆ ಎಂಬ ಸಿದ್ಧಾಂತದೊಂದಿಗೆ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದರೆ, ಇನ್ನೊಂದೆಡೆ ಚಿಂತನಶೀಲ ಪ್ರೇಕ್ಷಕನಿಗೆ ಅಗತ್ಯ ಇರುವ ಚಿಂತನೆಯ ವಿಷಯವನ್ನು ನೀಡಿದ್ದಾರೆ. ನಾಟಕದ ಗಂಭೀರ ಸ್ವರೂಪವನ್ನು ಎಲ್ಲಿಯೂ ಹಾಳುಗೆಡಹದೆ ಮುಖವರ್ಣಿಕೆ, ವೇಷಭೂಷಣ, ಬೆಳಕು ಎಲ್ಲವನ್ನು ನಿರ್ದೇಶನದೊಂದಿಗೆ ಹೊಂದಿಸಿಕೊಂಡು ನಾಟಕವನ್ನು ಪ್ರಸ್ತುತ ಪಡಿಸಿರುವ ಕಟೀಲ್‌ ಅಭಿನಂದನಾರ್ಹರು.

ಪಾತ್ರಧಾರಿಗಳು ಆರಂಭದಿಂದ ಕೊನೆಯವರೆಗೂ ಎಲ್ಲಿಯೂ ಮಾತಿಗಾಗಿ ತಡಕಾಡದೆ ಸುಲಲಿತವಾಗಿ ಹಾವಭಾವವನ್ನು ಹಿತಮಿತವಾಗಿ ಪ್ರದರ್ಶಿಸಿರುವುದು ಯಶಸ್ವಿಗೆ ಮುಖ್ಯ ಕಾರಣ. ಮುಖ್ಯ ಪಾತ್ರಧಾರ ಚೋರ ಚರಣದಾಸ (ದೀಪಕ್‌ ಕುಮಾರ್‌ ಕಿನ್ನಿಮೂಲ್ಕಿ) ನಾಟಕದ ಗಾಂಭೀರ್ಯವನ್ನು ಕೊನೆಯತನಕ ಹಿಡಿತದಲ್ಲಿರಿಸಿಕೊಂಡು ಅಭಿನಯಿಸಿ ಯಶಸ್ಸಿಗೆ ರೂವಾರಿಯಾದರು. ಸನ್ಯಾಸಿ ಪಾತ್ರದಲ್ಲಿ ಗಾಂಭಿರ್ಯದೊಂದಿಗೆ ಹಾಸ್ಯವನ್ನು ಬೆರೆಸಿ ಮುದ ನೀಡಿದ ಕೀರ್ತಿ ಶ್ರೀಧರ್‌ ಶೆಟ್ಟಿಗಾರ್‌ ಕರಂದಾಡಿಗೆ ಸಲ್ಲುತ್ತದೆ. ಮಹಾರಾಣಿ (ಮಮತಾ ರೂಪೇಶ್‌), ಜಮೀನುದಾರ (ದೇವದಾಸ್‌ ವಿ. ಶೆಟ್ಟಿಗಾರ್‌), ಹವಾಲ್ದಾರ (ನಾಗರಾಜ), ಮಂತ್ರಿ (ಅಭಿಷೇಕ್‌ ಉದ್ಯಾವರ), ಶಿಷ್ಯ (ಹರೀಶ್‌ ಕುಮಾರ್‌), ಶ್ರೀಮಂತ ಮಹಿಳೆ (ಕಿಶನ್‌ ರಾಜ್‌) ಖಜಾನಾಧಿಕಾರಿ (ವಿದ್ಯಾಚರಣ್‌) ಹಾಗೂ ಪೂರಕ ಪಾತ್ರಗಳಾದ ಕುಡುಕ (ವಿಜಯ್‌ ಕುಮಾರ್‌ ಪರೀಕ), ಜುಗಾರಿಯವ (ದಿನಕರ್‌ ಶೆಟ್ಟಿಗಾರ್‌), ಗಾಂಜಾದವ (ರಮೇಶ್‌ ಶೆಟ್ಟಿಗಾರ್‌) ಕೆಲಸದವ (ಬಾಲಚಂದ್ರ ಕಿನ್ನಿಮುಲ್ಕಿ) ರೈತ (ಅರವಿಂದ ಬಿ. ಪದ್ಮಶಾಲಿ) ಅಂಗರಕ್ಷಕ (ಪೂರ್ಣರಾಜ್‌) ಸೈನಿಕರು (ಗಣೇಶ್‌ ಶೆಟ್ಟಿಗಾರ್‌ ಮಣಿಪಾಲ, ಸುರೇಶ್‌ ಶೆಟ್ಟಿಗಾರ್‌ ದೊಡ್ಡಣಗುಡ್ಡೆ) ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟರು. 

 ಕೆಲವೇ ರಂಗ ಪರಿಕರಗಳನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ಸ್ತುತ್ಯರ್ಹ. ಜಮೀನಾªರನ ಮನೆಯಲ್ಲಿರುವ ಕೋಣದ ಮುಖ ಜಮೀನಾªರನ ಕ್ರೂರತೆಯನ್ನು ತೋರಿಸಿಕೊಟ್ಟರೆ, ಆಸ್ಥಾನದಲ್ಲಿ ಬೆಳಗುತ್ತಿರುವ ಸೂರ್ಯ ಕ್ರೂರತೆ, ಅಸತ್ಯ ಈ ನಾಡಿನಲ್ಲಿ ಇಂದಿಗೂ ಬೆಳಗುತ್ತಿದೆ ಎಂಬ ಸತ್ಯವನ್ನು ಪ್ರಚುರ ಪಡಿಸುವಂತಿತ್ತು.ಹಿತವಾದ ಸಂಗೀತ ನೀಡಿದ ಭರತ್‌ ಇಂದ್ರಾಳಿಯವರು ನಾಟಕದ ಅಂತಃಕರಣವನ್ನು ಅನುಭವಿಸಲು ಸಹಕರಿಸಿದರು.

Advertisement

ಎಸ್‌. ಶಿವಪ್ರಸಾದ್‌ ಶೆಟ್ಟಿಗಾರ್‌ 

Advertisement

Udayavani is now on Telegram. Click here to join our channel and stay updated with the latest news.

Next