Advertisement

ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು

10:41 AM Apr 08, 2018 | Team Udayavani |

ದಾವಣಗೆರೆ: ಮಾಯಕೊಂಡ, ಹರಪನಹಳ್ಳಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪರೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ದೆಹಲಿಗೆ ದೌಡು, ಬೆಂಗಳೂರಿನಲ್ಲಿನ ರಾಹುಲ್‌ ಗಾಂಧಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲು ಸಚಿವ ಮಲ್ಲಿಕಾರ್ಜುನ್‌ ಬೆಂಗಳೂರಲ್ಲಿ ಠಿಕಾಣಿ, ಜೆಡಿಎಸ್‌ ಹುರಿಯಾಳುಗಳು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ದಿನವಿಡೀ ಬ್ಯುಸಿ….ಇವು ಶನಿವಾರದ ಪ್ರಮುಖ ರಾಜಕೀಯ ಘಟನಾವಳಿಗಳು.

Advertisement

ಬಿಜೆಪಿಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಈಗಾಗಲೇ 6 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮಗೊಂಡ ಹಿನ್ನೆಲೆಯಲ್ಲಿ ಆ 6 ಮಂದಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡರು. ಪಕ್ಷದ ಪೇಜ್‌ ಪ್ರಮುಖ, ನವಶಕ್ತಿ ಕಾರ್ಯಕರ್ತರ ಕಾರ್ಯ ವೈಖರಿ ತಿಳಿದುಕೊಳ್ಳುವ ಜೊತೆಗೆ ಖುದ್ದು ಮನೆ ಮನೆ ಪ್ರಚಾರ ಕೈಗೊಂಡರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ತಮ್ಮ ಬೆಂಬಲಿಗರೊಂದಿಗೆ ಮಹಾನಗರ ಪಾಲಿಕೆ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ವೇಳೆ ಆಯಾ ಭಾಗದಲ್ಲಿದ್ದ ಪಕ್ಷದ ಹಿರಿಯ ಕಾರ್ಯಕರ್ತರು, ಪಕ್ಷದ ನಾಯಕರೊಂದಿಗೆ
ಚರ್ಚೆ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ತಮ್ಮ ಕ್ಷೇತ್ರ ದಾವಣಗೆರೆ ದಕ್ಷಿಣದ ವಾರ್ಡ್‌ಗಳಲ್ಲಿ ಸಂಚಾರ ನಡೆಸಿ, ಮತ ಪ್ರಚಾರ ಮಾಡಿದರು. 

ಹೊನ್ನಾಳಿಯಲ್ಲಿ ಎಂ.ಪಿ.ರೇಣುಕಾಚಾರ್ಯ, ಚನ್ನಗಿರಿಯಲ್ಲಿ ಮಾಡಾಳು ವಿರುಪಾಕ್ಷಪ್ಪ, ಜಗಳೂರಿನಲ್ಲಿ ಎಸ್‌.ವಿ.
ರಾಮಚಂದ್ರಪ್ಪ ಮತಯಾಚನೆ ಮಾಡಿದರು. ಮಾಯಕೊಂಡ, ಹರಪನಹಳ್ಳಿ ಕ್ಷೇತ್ರದ ಕಾರ್ಯಕರ್ತರು ದೆಹಲಿಯ ಸಂದೇಶಕ್ಕಾಗಿ ಕಾದು ಕುಳಿತರು.

ಇತ್ತ ಕಾಂಗ್ರೆಸ್‌ನ ಕಾರ್ಯಚಟುವಟಿಕೆ ಸಹ ಬೆಂಗಳೂರಿಗೆ ಶಿಫ್ಟ್‌ ಆಗಿದೆ. ಬೆಂಗಳೂರಿನಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬೃಹತ್‌ ಸಮಾವೇಶ ಹಾಗೂ ಹುರಿಯಾಳುಗಳ ಪಟ್ಟಿ ತಯಾರಿಕೆಯಲ್ಲಿ
ಪಕ್ಷದ ನಾಯಕರು ಬ್ಯುಸಿಯಾಗಿದ್ದರು. 

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಬೆಂಗಳೂರಲ್ಲೇ ಬೀಡು ಬಿಟ್ಟಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿದ್ದುಕೊಂಡು ದಾವಣಗೆರೆಗೆ ವಾಪಸ್ಸಾಗಿ ಪ್ರಚಾರ ಕಾರ್ಯದ ಮಾಹಿತಿ ಪಡೆದರು. ಜೆಡಿಎಸ್‌ ನಾಯಕರು ತಮ್ಮ ಕ್ಷೇತ್ರಗಳಲ್ಲಿನ ಪ್ರಚಾರ ಕಾರ್ಯ ಕೈಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next