ಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕಾಂಶವುಳ್ಳ, ಶುದ್ಧವಾದ ಆಹಾರ ಮುಖ್ಯ. ಅವರು ಸೇವಿಸುವ ಆಹಾರ ಸತ್ವಯುತವಾಗಿದ್ದರೆ ಮಕ್ಕಳು ಸಹಿತ ಸತ್ವಯುತವಾಗಿ, ಆರೋಗ್ಯವಂತರಾಗಿ ಲವಲವಿಕೆಯಿಂದ ಇರಲು ಸಾಧ್ಯವೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಎಚ್. ಕೌಲಗಿ ಅಭಿಪ್ರಾಯಪಟ್ಟರು.
ಇಲ್ಲಿನ ಘಂಟಿಕೇರಿಯ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಗುರುವಾರ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲಮಂದಿರಗಳಲ್ಲಿನ ಡಿ ಗ್ರುಪ್ ನೌಕರರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು.
ಅವರನ್ನು ಬೆದರಿಸುವ, ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬಾರದು. ಮಕ್ಕಳಲ್ಲಿ ದೇವರನ್ನು ಕಾಣಿ. ಅವರಿಗೆ ಅನಾಥಪ್ರಜ್ಞೆ ಕಾಡಬಾರದು ಎಂದು ಕಿವಿಮಾತು ಹೇಳಿದರು. ಅಲ್ಲದೆ ತಂದೆ-ತಾಯಿ ಪೋಷಣೆಯಲ್ಲಿರುವ ಮಕ್ಕಳಿಗಿಂತ ಬಾಲಮಂದಿರದಲ್ಲಿರುವ ಮಕ್ಕಳು ಆರೋಗ್ಯವಾಗಿದ್ದಾರೆ.
ಅವರಿಗೆ ಊಟೋಪಚಾರ, ಪಾಠ-ಪ್ರವಚನ ಸೇರಿ ಎಲ್ಲ ಸೌಲಭ್ಯ, ಸೌಕರ್ಯಗಳು ಸಿಗುತ್ತಿವೆ. ಇಲ್ಲಿ ಬೆಳೆಯುತ್ತಿರುವ ಮಕ್ಕಳೆಲ್ಲ ಸ್ವಾಭಿಮಾನದಿಂದ ಬಾಳಬೇಕು. ತಮಗೆ ಯಾರೂ ಇಲ್ಲ, ಅನಾಥರು ಎಂಬ ಭಾವನೆ ಹೊಂದದೆ ಶ್ರದ್ಧೆ, ನಿಷ್ಠೆ ಬೆಳೆಸಿಕೊಳ್ಳಬೇಕು ಎಂದರು. ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್ ವಿನೋದ ಎಂ. ಮುಕ್ತೇದಾರ ಮಾತನಾಡಿ, ಸಮಾಜದಲ್ಲಿ ಬಹಳಷ್ಟು ಮಕ್ಕಳು ತಂದೆ-ತಾಯಿಯಿಂದಲೂ ಸರಿಯಾಗಿ ಪೋಷಣೆ ಆಗುತ್ತಿಲ್ಲ.
ಅವರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಮಕ್ಕಳು ತಮ್ಮಲ್ಲಿ ತಾವು ಆತ್ಮವಿಶ್ವಾಸ ಬೆಳೆಸಿಕೊಂಡು ಗುರಿ ತಲುಪಬೇಕು. ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮ ಮೂಲಕ ಜೀವನದಲ್ಲಿ ಮುಂದೆ ಬನ್ನಿ. ಮಕ್ಕಳ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಧಾರವಾಡದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಸ್ತೆ ಮಾತನಾಡಿ, ಕೆಲಸದ ಒತ್ತಡದಿಂದಾಗಿ ಇಂದು ಎಲ್ಲರೂ ಆತಂಕದಲ್ಲಿಯೇ ಇದ್ದಾರೆ. ಇದರಿಂದ ಹೊರಬರಲು ನೃತ್ಯ, ಸಾಹಿತ್ಯ, ಯೋಗದಲ್ಲಿ ಮನಸಾರೆ ತಲ್ಲೀನವಾದರೆ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬಹುದು. ಬಾಹ್ಯ ಸೌಂದರ್ಯ ಜೊತೆ ಆಂತರಿಕ ಸೌಂದರ್ಯದತ್ತಲೂ ನಾವೆಲ್ಲ ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಾಲಮಂದಿರದ ಮಕ್ಕಳಿಗೆ ಬಾಲವಿಕಾಸ ಅಕಾಡೆಮಿ ವತಿಯಿಂದ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಎಸ್.ಬಿ. ಮಾಸಮಡ್ಡಿ, ಶರಣಪ್ಪ ಬೀದರ, ಅನ್ನಪೂರ್ಣ ಸಂಗಳದ ಇದ್ದರು. ಜಯರಾಜ ಪೋವಣಿ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಾಲಮಂದಿರದಲ್ಲಿ ಏ.26ರ ವರೆಗೆ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಲಿದೆ.