Advertisement
ಅಂತಿಮವಾಗಿ ಶನಿವಾರ 8 ಮಕ್ಕಳು ಕೊಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ, ಇತರೆ ಮಕ್ಕಳ ಜೊತೆ ಬೆರೆತು ಆಟ, ಪಾಠದ ಜೊತೆಗೆ ಬಿಸಿಯೂಟವನ್ನು ಸವಿದರು. ಈ ಮಕ್ಕಳು ಶಿಕ್ಷಣದಿಂದ ದೂರವಿರುವ ಬಗ್ಗೆ ಉದಯವಾಣಿ ನಿರಂತರವಾಗಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಅಧಿಕಾರಿಗಳು ಎಚ್ಚೆತ್ತು ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮಕೈಗೊಂಡಿದ್ದರು.
Related Articles
Advertisement
ಮಕ್ಕಳು ಕಳುಹಿಸಲು ನಿರಾಕರಣೆ: ಈ ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಮತ್ತು ಇತರೆ ಇಲಾಖೆಗಳು ಜ.28ರಿಂದ ಅರಣ್ಯದಲ್ಲಿನ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಸಿದರು. ಪೋಷಕರ ಮನವೊಲಿಸುವ ಎಲ್ಲಾ ಕಸರತ್ತುಗಳನ್ನು ಮಾಡಿದರು. ಹೀಗೆ ಪ್ರತಿ ದಿನ ಬೆಳಗ್ಗೆ, ಸಂಜೆ ಪೋಷಕರೊಂದಿಗೆ ಹಾಗೂ ಇವರನ್ನು ಕರೆತಂದಿರುವ ಮೇಸ್ತ್ರಿ ಶಂಕರ್ ಜೊತೆಗೂ ಮಾತುಕತೆ ನಡೆಸಿದ್ದರು. ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ಮನವಿ ಮಾಡಿದ್ದರು. ಆದರೂ ಮಕ್ಕಳನ್ನು ಶಾಲೆಗೆ ಕಳಿಸುವ ಹೊಣೆ ಯಾರೂ ತೆಗೆದುಕೊಳ್ಳಲಿಲ್ಲ. ನಮಗೆ ಶಾಲೆಯ ಗೊಡುವೆ ಬೇಡ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಕೂಲಿ ಕಾರ್ಮಿಕರು ಮನವಿ ಮಾಡಿಕೊಂಡರು.
ಮೇಸ್ತ್ರಿಗೆ ಎಚ್ಚರಿಕೆ: ವಸ್ತು ಸ್ಥಿತಿ ಬಗ್ಗೆ ಉದಯವಾಯಲ್ಲಿ ನಿತ್ಯ ಸುದ್ದಿ ಪ್ರಕಟ ಮಾಡುತ್ತಿತ್ತು. ಇದನ್ನು ಮೇಲಧಿಕಾರಿಗಳು ಗಮನಿಸಿದ್ದರು. ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿದ್ದವು. ಇದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಜ.31ರಂದು ಶುಕ್ರವಾರ ಸಂಜೆ ಪೋಷಕರು, ಮಕ್ಕಳು ಹಾಗೂ ಮೇಸ್ತ್ರಿ ಶಂಕರ್ ಅವರೊಂದಿಗೆ ಮಾತುಕತೆ ನಡೆಸಿ ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು ಎಂದು ಸೂಚಿಸಿದ್ದರು. ಒಂದು ವೇಳೆ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಈ ವೇಳೆ ಶಂಕರ್ ಸೋಮವಾರ ತಾನೇ ಖುದ್ದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಆರ್‌ಪಿ ಹರೀಶ್, ಶನಿವಾರ ಬೆಳಗ್ಗೆ 6 ಗಂಟೆಗೆ ಮತ್ತೆ ಅರಣ್ಯದ ಗುಡಾರಗಳ ಬಳಿ ಹೋಗಿ ಪೋಷಕರ ಮತ್ತು ಕೂಲಿ ಕಾರ್ಮಿಕರ ಮೇಸ್ತ್ರಿ ಬಳಿ ಮಾತುಕತೆ ನಡೆಸಿದರು. ಮಕ್ಕಳನ್ನು ಶನಿವಾರವೇ ಶಾಲೆಗೆ ಕಳಿಸುವಂತೆ ತೀವ್ರ ಪ್ರಯತ್ನ ಮಾಡಿ ಮನವೊಲಿಸಿದರು. ಪರಿಣಾಮ 12 ವರ್ಷದೊಳಗಿನ 8 ಮಕ್ಕಳು ಶಾಲೆಗೆ ಕಳುಹಿಸಲು ಮೇಸ್ತ್ರಿ ಶಂಕರ್ ಒಪ್ಪಿಗೆ ನೀಡಿ, ಶನಿವಾರವೇ ಶಾಲೆಗೆ ಮಕ್ಕಳನ್ನು ಕರೆತಂದರು.
ನಂತರ ಆ ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಾಹನದಲ್ಲಿ ಅವರಿದ್ದ ಬಿಡಾರಗಳಿಗೆ ತಂದು ಬಿಡಲಾಯಿತು. ಒಟ್ಟಾರೆ “ಉದಯವಾಣಿ’ ವರದಿ ಸ್ಪಂದಿಸಿದ ಶಿಕ್ಷಣ ಇಲಾಖೆ ಕಾಡಿನಲ್ಲಿನ ಈ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸಿದ್ದು ಸಫಲವಾಗಿದೆ. ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಿ.ವಸಂತಾ, ಇಸಿಒ ಸುಬ್ರಮಣಿ, ಸಿಆರ್‌ಪಿ ಹರೀಶ್, ಕೊಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹೇಶ್, ಮೇಸ್ತ್ರಿ ಶಂಕರ್ ಇತರರು ಉಪಸ್ಥಿತರಿದ್ದರು.
ಮಕ್ಕಳ ಜೊತೆ ಬೆರೆತು ಬಿಸಿಯೂಟ ಸೇವನೆ: ಶಾಲೆಯಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಬೆರೆತ ಕಾಡಿನಲ್ಲಿದ್ದ ಮಕ್ಕಳು, ಆಟ ಪಾಠ ಜೊತೆಗೆ ಮಧ್ಯಾಹ್ನದ ಬಿಸಿಯೂಟವನ್ನೂ ಸವಿದರು. ಬೆಳಗ್ಗೆ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ತೊಟ್ಟು ಶಿಕ್ಷಣಾಧಿಕಾರಿಗಳು, ಮೇಸ್ತ್ರಿ ಶಂಕರ್ ಜೊತೆಗೆ ಆಗಮಿಸಿದ ಮಕ್ಕಳನ್ನು ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ನಗುಮೊಗದೊಂದಿಗೆ ಸ್ವಾಗತಿಸಿದರು. ಶಿಕ್ಷಕರು ಸಹ ಮಕ್ಕಳಿಗೆ ಧೈರ್ಯ ತುಂಬಿ ನಿತ್ಯ ಶಾಲೆಗೆ ಬರುವಂತೆ ತಿಳಿ ಹೇಳಿದರು.
ಈ ಮಕ್ಕಳು ಶಾಲೆಗೆ ಎಷ್ಟು ದಿನ ಬರುತ್ತಾರೋ ಆಲ್ಲಿಯವರಿಗೆ ಎಲ್ಲಾ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಬಿಸಿಯೂಟ ನೀಡಲಾಗುತ್ತದೆ. ಜೊತೆಗೆ ಸೋಮವಾರ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಇತರೆ ಸೌಲಭ್ಯ ಒದಗಿಸಲಾಗುತ್ತದೆ. ಅವರ ಪೋಷಕರು ಒಪ್ಪಿದರೆ ಅವರು ಇರುವ ಸ್ಥಳದಲ್ಲಿಯೇ ಟೆಂಟ್ ಶಾಲೆ ನಡೆಸಲಾಗುವುದು.-ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ