ಬೆಂಗಳೂರು: ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸುವ ಊಟದ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಭರವಸೆ ನೀಡಿದ್ದಾರೆ.
ಶನಿವಾರ ನಗರದ ಕೆ.ಆರ್.ಮಾರುಕಟ್ಟೆಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕ್ಯಾಂಟೀನ್‌ಗಳ ಸ್ವತ್ಛತೆ ಹಾಗೂ ವಿತರಿಸುವ ಆಹಾರದ ಗುಣಮಟ್ಟದ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಜತೆಗೆ, ಸ್ವತಃ 10 ರೂ. ಪಾವತಿಸಿ ಊಟ ಸವಿದಿದ್ದು ವಿಶೇಷವಾಗಿತ್ತು.
ಈ ವೇಳೆ ಕ್ಯಾಂಟೀನ್‌ಗೆ ಊಟ ಸವಿಯಲು ಆಗಮಿಸಿದ ಜನರೊಂದಿಗೆ ಮಾತನಾಡಿದ ಅವರು, ಕ್ಯಾಂಟೀನ್‌ನಲ್ಲಿ ನೀಡಲಾಗುವ ಊಟದ ರುಚಿ ಹೇಗಿದೆ? ನಿಯಮಿತವಾಗಿ ಆಹಾರ ಸೇವಿಸುತ್ತೀರಾ? ಕ್ಯಾಂಟೀನ್‌ನಲ್ಲಿ ನೀಡುವ ಆಹಾರ ಸಾಕಾಗುವುದೇ? ಕ್ಯಾಂಟೀನ್‌ಗಳಿಂದ ಅನುಕೂಲವಾಗಿದೆಯೇ? ಕ್ಯಾಂಟೀನ್ ಅಥವಾ ಆಹಾರದ ಕುರಿತು ದೂರುಗಳಿವೆಯೇ? ಎಂದು ಕೇಳಿದರು.
ಅದಕ್ಕೆ ಉತ್ತರಿಸಿದ ನಾಗರಿಕರು, ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ದೊರೆಯುವ ಆಹಾರಕ್ಕಿಂತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಆದರೆ, ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರ ಪ್ರಮಾಣ ಸಾಕಾಗುತ್ತಿಲ್ಲ. ಹೀಗಾಗಿ ಆಹಾರ ಪ್ರಮಾಣ ಹೆಚ್ಚಿಸಬೇಕು ಮತ್ತು ಕ್ಯಾಂಟೀನ್ ಮೆನುಗೆ ಇನ್ನಷ್ಟು ತಿನಿಸುಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.
ಆನಂತರದ ಕ್ಯಾಂಟೀನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ, ಕೆಲಸದ ಅವಧಿ ಮತ್ತು ಗುತ್ತಿಗೆದಾರರು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ. ಏನಾದರೂ ಸಮಸ್ಯೆಗಳಿವೆಯೇ ಎಂದು ವಿಚಾರಿಸಿದರು.
ಆನಂತರ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುತ್ತಿರುವ ಎಸ್.ಪಿ.ರಸ್ತೆಯಲ್ಲಿರುವ ಇಂದಿರಾ ಅಡುಗೆ ಮನೆಗೂ ಭೇಟಿ ನೀಡಿ, ಅಡುಗೆಗೆ ಬಳಸಲಾಗುತ್ತಿರುವ ಪಾತ್ರೆಗಳು, ಅಡುಗೆ ಮನೆ ಆವರಣದ ಸ್ವತ್ಛತೆ ಪರಿಶೀಲಿಸಿದರು. ಜತೆಗೆ ಪಾತ್ರೆಗಳನ್ನು ಸ್ವತ್ಛಗೊಳಿಸಲಾಗುವ ಆವರಣಕ್ಕೂ ಭೇಟಿ ನೀಡಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿದ್ದು ಹೆಚ್ಚು ಸಂತಸ ತಂದಿದೆ. ಸಾರ್ವಜನಿಕರು ನೀಡಿದ ಸಲಹೆಗಳ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಜತೆಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕ್ಯಾಂಟೀನ್‌ಗಳಿಗೆ ಪೂರೈಸುವ ಊಟದ ಸಂಖ್ಯೆ ಹೆಚ್ಚಿಸಲಾಗುವುದು ಎಂದು ರತ್ನಪ್ರಭಾ ಅವರು ತಿಳಿಸಿದ್ದಾರೆ.