Advertisement

ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ದೇವೇಗೌಡರಿಗೆ ಮುಖ್ಯಮಂತ್ರಿ ಮನವಿ

06:15 AM Mar 05, 2018 | Team Udayavani |

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋಟ್‌ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಗೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಮನವಿ ಮಾಡಿದ್ದಾರೆ.

Advertisement

ಮಾರ್ಚ್‌ 8ರಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು, ಅಂದಿನ ಸಭೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದಾರೆ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಫೆ.16ರಂದು ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು ಹಾಗೂ ಸಂಸದರ ಸಭೆಯನ್ನು ಮಾರ್ಚ್‌ 8ರಂದು ಸಂಜೆ 4 ಗಂಟೆಗೆ ಕರೆಯಲಾಗಿದೆ. ತಾವು ದಯವಿಟ್ಟು ಮೇಲಿನ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. 

ಈ ಹಿಂದೆಯೂ ಕಾವೇರಿ ವಿಚಾರದಲ್ಲಿ ಸಮಸ್ಯೆ ಉಂಟಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ದೇವೇಗೌಡರನ್ನು ಭೇಟಿಯಾಗಿ ಸಲಹೆ ಪಡೆದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಗೂ ಆಹ್ವಾನ ನೀಡಿದ್ದರು. ದೇವೇಗೌಡರು ಸಭೆಯಲ್ಲಿ ಭಾಗವಹಿಸಿ ಕೆಲವೊಂದು ಸೂಚನೆ ನೀಡಿದ್ದರು. ನಂತರ ಕಾವೇರಿ ವಿಚಾರದಲ್ಲೇ ರಾಜ್ಯಕ್ಕೆ ಅನ್ಯಾಯವಾಗುವ ಆತಂಕ ಎದುರಾದಾಗ ದೇವೇಗೌಡರು ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿಪ್ರತಿಮೆ ಬಳಿ ಉಪವಾಸ ಸಹ ಕುಳಿತಿದ್ದರು. ಇತ್ತೀಚೆಗೆ ಸುಪ್ರೀಂಕೊರ್ಟ್‌ ತೀರ್ಪು ಬಂದ ನಂತರ ರಾಜ್ಯ ಸರ್ಕಾರ ಮೌನವಾಗಿರುವುದರ ಬಗ್ಗೆ ಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಬಂದಿರುವ ತೀರ್ಪಿಗೆ ಸಂತೃಪ್ತರಾದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next