ಹುಬ್ಬಳ್ಳಿ: ನಗರಕ್ಕೆ ಆಗಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿಯನ್ನು ಮಂಗಳವಾರ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ಮಹಾನಗರ ಪಾಲಿಕೆ ವತಿಯಿಂದ ಪ್ರತಿಷ್ಠಾನಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮಧ್ಯಪ್ರದೇಶದ ಇಂದೋರ್‌ನಿಂದ ಮಂಗಳವಾರ ಬೆಳಗ್ಗೆ ಹೊಸೂರಿನ ಗಾಳಿದುರ್ಗಮ್ಮಾ ದೇವಸ್ಥಾನಕ್ಕೆ ಆಗಮಿಸಿತು.
ಮಹಾಪೌರ ಡಿ.ಕೆ. ಚವ್ಹಾಣ, ಸಂಸದ ಪ್ರಹ್ಲಾದ ಜೋಶಿ ಅವರು ಮೂರ್ತಿಗೆ ಪುಷ್ಪಹಾರ ಹಾಕಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ಸುನೀಲ ದಳವಿ, ಅರುಣ ಜಾಧವ, ಅರುಣ ಶಿರ್ಕೆ, ಡಿ.ವಿ. ಗಾವಡೆ, ಆರ್.ಜಿ. ಪಾಟೀಲ, ದಯಾನಂದ ಚವ್ಹಾಣ, ಮಹೇಶ ದಾಬಡೆ, ಶಿವು ಶಿಂಧೆ, ನಾರಾಯಣ ವೈದ್ಯ, ಗುರುನಾಥ ಉಳ್ಳಿಕಾಶಿ, ಶಿವು ಹಿರೇಕೆರೂರ ಮೊದಲಾದವರು ಇದ್ದರು.
ನಂತರ ಮೂರ್ತಿಯನ್ನು ಇಂದಿರಾ ಗಾಜಿನ ಮನೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಆ ಮೂಲಕ ನಗರದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಬೇಕೆಂಬ ಮರಾಠಾ ಸಮಾಜದವರ ಬೇಡಿಕೆ ಈಡೇರಿದಂತಾಯಿತು.
ಇಂದೋರ್‌ನ ಖ್ಯಾತ ಶಿಲ್ಪಿ ಮಹೇಂದ್ರ ಕೊಂಡ್ವಾನಿ ಅವರು ಸುಮಾರು 12 ಅಡಿ ಎತ್ತರದ ಕಂಚಿನ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ರೂಪಿಸಿದ್ದಾರೆ. ಇದು ಸುಮಾರು 2,500 ಕೆ.ಜಿ.ಯಷ್ಟು ತೂಕದ್ದಾಗಿದೆ.