Advertisement

ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ : ಪಿಲಿಕುಳಕ್ಕೆ ರವಾನೆ

09:58 AM Oct 08, 2019 | Team Udayavani |

ಬಜಪೆ: ಇಲ್ಲಿನ ಗಂಜಿಮಠ ಗ್ರಾಮದ ಕಾಜಿಲ ಎಂಬಲ್ಲಿ ಕೋಳಿ ಹಿಡಿಯಲೆಂದು ಅದನ್ನು ಬೆನ್ನಟ್ಟಿಕೊಂಡು ಹೋಗುವ ಸಂದರ್ಭದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಚಿರತೆಯನ್ನು ಸುಮಾರು ಮೂರು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬಾವಿಯಿಂದ ಜೀವಂತವಾಗಿ ಮೆಲೆತ್ತಲಾಗಿದೆ. ಇದೀಗ ಚಿರತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪಿಲಿಕುಳ ವನ್ಯಜೀವಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭಿಸಿದೆ.

Advertisement

ಚಿರತೆ ಬಾವಿಗೆ ಬಿದ್ದಿರುವ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ದ.ಕ. ಜಿಲ್ಲಾ ಅರಣ್ಯಾಧಿಕಾರಿ ತರಿಕಾಲನ್, ಪ್ರಾದೇಶಿಕ ಅರಣ್ಯಾಧಿಕಾರಿ ಶ್ರೀಧರ್, ಕೈಕಂಬ ವಲಯ ಅರಣ್ಯಾಧಿಕಾರಿ ಸುಧೀರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.


ಮಧ್ಯಾಹ್ನ 12.45ರ ಸುಮಾರಿಗೆ ಪ್ರಾರಂಭವಾದ ಈ ರಕ್ಷಣಾ ಕಾರ್ಯಾಚರಣೆ ನಡು ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಒಟ್ಟು 15 ಜನ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನಿಂದ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ್ದರು. ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಮಾಧವ ಪೂಜಾರಿ ಅವರು ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ಗ್ರಾಮದ ಕಾಜಿಲ ಎಂಬಲ್ಲಿ ಈ ಘಟನೆ ಇಂದು ಬೆಳಿಗ್ಗೆ ನಡೆದಿತ್ತು. ಕಾಜಿಲ ಅಂಗನವಾಡಿ ಬಳಿಯ ಶೇಖರ್ ಎಂಬವರಿಗೆ ಸೇರಿದ ಬಾವಿಗೆ ಈ ಚಿರತೆ ಬಿದ್ದಿತ್ತು. ಚಿರತೆ ಬಾವಿಗೆ ಬಿದ್ದ ಸುದ್ದಿಯನ್ನು ತಿಳಿದು ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಘಟನೆಯನ್ನು ನೋಡಲು ಮುಗಿಬಿದ್ದ ಕಾರಣ ಸ್ಥಳದಲ್ಲಿ ಸ್ವಲ್ಪ ಸಮಯ ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಜಪೆ ಠಾಣಾ ಪೊಲೀಸರು ಜನರನ್ನು ನಿಯಂತ್ರಿಸುವ ಮೂಲಕ ರಕ್ಷಣಾ ಸಿಬ್ಬಂದಿಗಳ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.



Advertisement

Udayavani is now on Telegram. Click here to join our channel and stay updated with the latest news.

Next