Advertisement

ಮೋಸಹೋದ ಕಲಾ ಸಾಮ್ರಾಟ್!

11:10 AM Sep 01, 2018 | Team Udayavani |

ಬೆಂಗಳೂರು: ನಟ, ನಿರ್ದೇಶಕ, ನಿರ್ಮಾಪಕ, “ಕಲಾ ಸಾಮ್ರಾಟ್‌’ ಎಸ್‌.ನಾರಾಯಣ್‌ಗೆ 70 ಕೋಟಿ ರೂ. ಸಾಲ ಕೊಡಿಸುವುದಾಗಿ ಭರವಸೆ ನೀಡಿ, ಸಾಲ ಕೊಡಿಸುವುದಕ್ಕೆ ಪ್ರತಿಯಾಗಿ ಮುಂಗಡವಾಗಿ 43 ಲಕ್ಷ ರೂ. ಕಮಿಷನ್‌ ಪಡೆದು
ವಂಚಿಸಿರುವ ತಮಿಳುನಾಡು ಮೂಲದ ಮೂವರು ಉತ್ತರ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ತಮಿಳುನಾಡು ಮೂಲದ ಗೋವಿಂದರಾಜು (40), ಸ್ವಾಮೀಜಿ ಅಲಿಯಾಸ್‌ ರಮೇಶ್‌ (45), ಸಂತಾನ ಕೃಷ್ಣ (45) ಬಂಧಿತರು. ಪ್ರಮುಖ ಆರೋಪಿಗಳಾದ ಬಾಲ ಸುಬ್ರಹ್ಮಣ್ಯಂ (46), ಮಂಥಾರ ಮೂರ್ತಿ (48) ತಲೆಮರೆಸಿಕೊಂಡಿದ್ದು,
ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
 
2017ರ ಫೆಬ್ರವರಿ ತಿಂಗಳಲ್ಲಿ ಎಸ್‌.ನಾರಾಯಣ್‌ ಅವರನ್ನು ಪರಿಚಯಿಸಿಕೊಂಡ ಐವರು ಆರೋಪಿಗಳು, ತಮ್ಮ ಇಂಡಿಯಾ ಫೈನಾನ್ಸ್‌ನಲ್ಲಿ ಕಡಿಮೆ ಬಡ್ಡಿಗೆ 70 ಕೋಟಿ ರೂ. ಸಾಲ ಕೊಡಿಸುತ್ತೇವೆ. ಇದಕ್ಕಾಗಿ ಶೇ.1ರಷ್ಟು ಹಣವನ್ನು
ಕಮಿಷನ್‌ ರೂಪದಲ್ಲಿ ನೀಡಬೇಕು ಎಂದು ನಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನಾರಾಯಣ್‌, ಹಂತ-ಹಂತವಾಗಿ 43 ಲಕ್ಷ ರೂ. ಕಮಿಷನ್‌ ಕೊಟ್ಟಿದ್ದರು. ನಂತರ ಸಾಲವನ್ನೂ ಕೊಡಿಸದೆ, ಕಮಿಷನ್‌ ಹಣವನ್ನೂ ಹಿಂದಿರುಗಿಸದೆ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ಏನಿದು ಪ್ರಕರಣ?: ಸಿನಿಮಾ ಒಂದರ ನಿರ್ಮಾಣದ ತಯಾರಿಯಲ್ಲಿದ್ದ ನಟ, ನಿರ್ದೇಶಕ ಎಸ್‌.ನಾರಾಯಣ್‌, ಚಿತ್ರ
ನಿರ್ಮಾಣಕ್ಕೆ ಅಗತ್ಯವಿರುವ ಹಣ ಸಾಲ ಪಡೆಯುವುದಕ್ಕಾಗಿ, ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳ ಅಧಿಕಾರಿಗಳ
ಜತೆ ಚರ್ಚಿಸಿದ್ದರು. ಆದರೆ, ಎಲ್ಲಿಯೂ ಸಾಲ ಸಿಕ್ಕಿರಲಿಲ್ಲ. ಇದೇ ವೇಳೆ ಆರೋಪಿ ಸಂತಾನಕೃಷ್ಣ, ನಾರಾಯಣ್‌ ಅವರಿಗೆ
ಕರೆ ಮಾಡಿ, ನೀವು ಲೋನ್‌ಗಾಗಿ ಓಡಾಡುತ್ತಿರುವುದು ಗೊತ್ತಾಗಿದೆ. ತಮಿಳುನಾಡಿನ ಫೈನಾನ್ಸ್‌ ಒಂದರಲ್ಲಿ ಸಾಲ ಕೊಡಿಸುತ್ತೇವೆ. ಶೇ.1ರ ಪ್ರಮಾಣದಲ್ಲಿ ಕಮಿಷನ್‌ ಕೊಟ್ಟರೆ ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಎಂದು ನಂಬಿಸಿದ್ದ.

ಇದಕ್ಕೆ ಒಪ್ಪಿದ ನಾರಾಯಣ್‌ ಅವರನ್ನು ಕೆಲ ದಿನಳ ಬಳಿಕ ಬಾಲಸುಬ್ರಹ್ಮಣ್ಯಂ, ಮಂಥಾರ ಮೂರ್ತಿ ಬೆಂಗಳೂರಿನಲ್ಲಿ ಭೇಟಿಯಾಗಿದ್ದು, ಶೇ.6 ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಅಲ್ಲದೆ, ನಾರಾಯಣ್‌ಗೆ ಸೇರಿದ ಜಮೀನು ಹಾಗೂ ನಿವೇಶನಗಳ ನಕಲು ಪ್ರತಿಗಳನ್ನು ಪಡೆದುಕೊಂಡಿದ್ದರು. ನಂತರ ಆರೋಪಿಗಳು ಮುಂಗಡ ಕಮಿಷನ್‌ ಎಂದು ಸ್ಥಳದಲ್ಲೇ 2 ಲಕ್ಷ ರೂ. ಪಡೆದುಕೊಂಡಿದ್ದರು. 

ನಂತರ ಜೂ.27ರಂದು ತಮಿಳುನಾಡಿಗೆ ಕರೆಸಿಕೊಂಡು 40, 20, 10 ಕೋಟಿ ರೂ.ಗಳ ಮೂರು ಡಿಡಿಗಳನ್ನು ಕೊಟ್ಟ ರೀತಿಯಲ್ಲಿ ಕರಾರು ಪತ್ರ ಸಿದ್ಧಪಡಿಸಿಕೊಂಡರು. ಕರಾರು ಪತ್ರ ಹಾಗೂ ಡಿಡಿ ಕೇಳಿದಾಗ ಕಮಿಷನ್‌ ಕೊಟ್ಟ ಬಳಿಕ ಕೊಡುವುದಾಗಿ ಹೇಳಿ ಕಳುಹಿಸಿದ್ದರು. ಬಳಿಕ ನಾರಾಯಣ್‌ ಹಂತ ಹಂತವಾಗಿ 43 ಲಕ್ಷ ರೂ. ಕೊಟ್ಟಿದ್ದಾರೆ. ಇದಾದ ಕೆಲ
ದಿನಗಳ ಬಳಿಕ ನಾರಾಯಣ್‌, ಡಿಡಿ ಕೇಳಲು ಹೋದಾಗ ಆರೋಪಿಗಳು ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ನಾರಾಯಣ್‌ ಕೋರ್ಟ್‌ ಮೊರೆ ಹೋಗಿದ್ದರು.

Advertisement

ಜಾಮೀನು ಪಡೆದು ಹೊರಬಂದ ತ.ನಾಡು ಮೂಲದ ಆರೋಪಿಗಳು  ಕೋರ್ಟ್‌ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು, ಕೆಲ ದಿನಗಳ ಹಿಂದೆ ತಿರುವನಂತಪುರದಲ್ಲಿ ತಲೆಮರೆಸಿಕೊಂಡಿದ್ದ
ಸಂತಾನಕೃಷ್ಣನನ್ನು ಬಂಧಿಸಿದ್ದರು. ಈತ ನೀಡಿದ ಸುಳಿವಿನ ಮೇರೆಗೆ ಇತರೆ ಆರೋಪಿಗಳನ್ನು ಬಂಧಿಸಲಾಯಿತು. ಸದ್ಯ ಮೂವರು ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ತಲೆಮರೆಸಿಕೊಂಡಿರುವ ಬಾಲಸುಬ್ರಹ್ಮಣ್ಯಂ ಲೆಕ್ಕ ಪರಿಶೋಧಕನಾಗಿದ್ದು, ಮಂಥಾರ ಮೂರ್ತಿ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದ. ಸ್ವಾಮೀಜಿ ಅಲಿಯಾಸ್‌
ರಮೇಶ್‌ ತಮಿಳುನಾಡಿನಲ್ಲಿ ಮಠ ನಡೆಸುತ್ತಿದ್ದಾನೆ. ಆರೋಪಿಗಳು ಸಣ್ಣ ಪ್ರಮಾಣದಲ್ಲಿ ಫೈನಾನ್ಸ್‌ ನಡೆಸುತ್ತಿದ್ದು, ಹಲವು ವ್ಯಕ್ತಿಗಳಿಗೆ ವಂಚಿಸಿರುವ ಮಾಹಿತಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಗುರುವಾರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಆಗಮಿಸಿದ್ದ ಎಸ್‌.ನಾರಾಯಣ್‌, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 43 ಲಕ್ಷ ರೂ. ಕಮಿಷನ್‌ ಪಡೆದು ವರ್ಷವಾದರೂ ಹಣ ಕೊಡದೆ ವಂಚಿಸಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಿಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಅವರು ಮುಂದಾಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next