Advertisement
“ವಂದೇ ಮಾತರಂ’ ಹಾಡನ್ನು ಈಶಾನ್ಯ ರಾಜ್ಯಗಳು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ 16 ರಾಜ್ಯಗಳ 183 ಹಾಡುಗಾರರು ವಿವಿಧ ರಾಗಗಳಲ್ಲಿ ಸಂಯೋಜನೆ ಮಾಡಿ ಹಾಡಿರುವ ಘಟನೆಗೆ ಈ ಮಾನ್ಯತೆ ದೊರಕಿದೆ. ಒಂದು ರಾಷ್ಟ್ರದ ಹಾಡಿಗೆ ಇಷ್ಟೊಂದು ಹಾಡುಗಾರರು ವಿಭಿನ್ನ ರಾಗಗಳಲ್ಲಿ ಹಾಡಿದ್ದು ಇದೇ ಪ್ರಥಮ.
Related Articles
Advertisement
“ನಾವು ವಿಶಿಷ್ಟ ಶೈಲಿಯ ಸಂಗೀತ ಸಂಸ್ಕೃತಿ ಇರುವ ನಾಗಾಲ್ಯಾಂಡ್, ಅರುಣಾಚಲಪ್ರದೇಶ ಮೊದಲಾದ ಈಶಾನ್ಯ ರಾಜ್ಯಗಳಲ್ಲದೆ ಮಹಾರಾಷ್ಟ್ರ, ಹಿಮಾಚಲಪ್ರದೇಶಗಳಿಗೆ ಹೋಗಿದ್ದೆವು. ಉಳಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿದೆವು. ವಿಶ್ವ ದಾಖಲೆಗಾಗಿಯೇ ಇದನ್ನು ಕೈಗೊಳ್ಳಲಿಲ್ಲ. ಆದರೆ ಈ ಪ್ರಯತ್ನ ವಿಶ್ವ ದಾಖಲೆಯನ್ನು ಸೃಷ್ಟಿಸಿತು. 16 ರಾಜ್ಯಗಳ ಪೈಕಿ ಕರ್ನಾಟಕ, ಕೇರಳೀಯರ ಕಲಾಪ್ರೌಢಿಮೆ ಶ್ರೇಷ್ಠ ದರ್ಜೆಯಿಂದ ಕೂಡಿದೆ’ ಎನ್ನುತ್ತಾರೆ ಆಯೋಜಕರಾದ ಸಂವೇದನಾ ಫೌಂಡೇಶನ್ ಮುಖ್ಯಸ್ಥ ಪ್ರಕಾಶ್ ಮಲ್ಪೆಯವರು. 183 ಹಾಡುಗಳಲ್ಲಿ 22 ವೀಡಿಯೋಗಳನ್ನು 2.2 ಲಕ್ಷ ಜನರು ನೋಡಿದ್ದರು. ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬಿಡುವ ಇರಾದೆ ಇದೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಬಂಕಿಮ್‌ಚಂದ್ರ ಚಟರ್ಜಿಯವರು 1870ರಲ್ಲಿ “ವಂದೇ ಮಾತರಂ’ ರಚಿಸಿ 1881ರಲ್ಲಿ “ಆನಂದಮಠ’ ಕಾದಂಬರಿಯಲ್ಲಿ ಸೇರಿಸಿದ್ದರು. ಈ ಹಾಡಿಗೆ ಮೊದಲು ಸಂಗೀತ ಸಂಯೋಜನೆ ಮಾಡಿದವರು ಮತ್ತು 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದವರು ರವೀಂದ್ರನಾಥ ಠಾಗೋರ್. 1937ರ ಅಕ್ಟೋಬರ್‌ನಲ್ಲಿ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಸ್ವಾತಂತ್ರ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದ ಈ ಹಾಡಿಗೆ ಸ್ವಾತಂತ್ರಾéನಂತರ ರಾಷ್ಟ್ರಗೀತೆಯ ಮಾನ್ಯತೆ ಕೈತಪ್ಪಿದರೂ ತತ್ಸಮಾನ ಗೌರವ ದಕ್ಕಿದೆ. ಕಾಕತಾಳೀಯವೆಂಬಂತೆ ದೇಶದಲ್ಲಿ ಸ್ವಾತಂತ್ರ್ಯದ ಕಿಡಿ ಹಬ್ಬಿಸಿದ ವಂದೇಮಾತರಂ ಹಾಡಿನ ಸಾಂಪ್ರದಾಯಿಕ ರಾಗದ ಹೆಸರೂ “ದೇಶ್’. 1952ರಲ್ಲಿ “ಆನಂದಮಠ’ ಚಲನಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಿದವರು ಹೇಮಂತಕುಮಾರ್. ಈಗ ಜನಸಾಮಾನ್ಯರ ಬಾಯಲ್ಲಿ ಗುಣುಗುಣಿಸುವುದು ಇದೇ ರಾಗ…
ಮಟಪಾಡಿ ಕುಮಾರಸ್ವಾಮಿ